ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿಗಳಿಂದ ಜನರು ನಾನಾ ರೀತಿಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನೇಕ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ಸಹಕಾರಿಯಾಗುತ್ತವೆ. ಅವುಗಳಲ್ಲಿ ಯೋಗವು ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ಯೋಗಾಭ್ಯಾಸ ಜೀವನಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ. ಯೋಗದ ಅಭ್ಯಾಸ ಪ್ರಕೃತಿಯ ಜೊತೆಗೆ ಆತ್ಮೀಯ ಸಂಪರ್ಕವನ್ನು ಕಲ್ಪಿಸುತ್ತದೆ. ಹೀಗಾಗಿ ಯೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್ ೨೧ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ.
ಯೋಗವು ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿ ಹುಟ್ಟಿಕೊಂಡಿತು. ಋಗ್ವೇದದಂತಹ ಪ್ರಾಚೀನ ಗ್ರಂಥಗಳಲ್ಲಿ ಯೋಗಾಭ್ಯಾಸಗಳ ಉಲ್ಲೇಖಗಳು ಕಂಡುಬರುತ್ತವೆ. ಯೋಗಕ್ಕೆ ಪತಂಜಲಿ ಮಹರ್ಷಿಗಳ ಕೊಡುಗೆ ಅಪಾರ. ಪತಂಜಲಿ ಮಹರ್ಷಿಗಳು ಪ್ರಾಚೀನ ಕಾಲದಿಂದಲೂ ಯೋಗವನ್ನು ‘ಯೋಗ ಸೂತ್ರ’ ಗ್ರಂಥದ ಮೂಲಕ ಪ್ರಪಂಚಕ್ಕೆ ಪರಿಚಯಿಸಿದರು. ಯೋಗ ಎಂಬುದು ಸಂಸ್ಕೃತ ಭಾಷೆಯ ‘ಯುಜ್’ ಎಂಬ ಪದದಿಂದ ಬಂದಿದೆ. ಇದರರ್ಥ ಐಕ್ಯವಾಗು, ಸೇರು, ಒಟ್ಟುಗೂಡು ಎಂಬುದಾಗಿದೆ. ಯೋಗ ಪಿತಾಮಹ ಪತಂಜಲಿ ಮುನಿಗಳು ತಿಳಿಸುವಂತೆ ‘ಚಿತ್ತ ವೃತ್ತಿಗಳ ನಿರೋಧ ಅಥವಾ ನಿಯಂತ್ರಿಸುವದೇ ಯೋಗ’ ಎಂದಿರುವರು. ಹಾಗೆಯೇ ಮನಸ್ಸನ್ನು ಪ್ರಶಮನಗೊಳಿಸುವ, ಶಾಂತಗೊಳಿಸುವ ಉಪಾಯವೇ ಯೋಗ. ಒಟ್ಟಾರೆ ಯೋಗವು ಒಂದು ಶುದ್ಧ ಮನಃಶಾಸ್ತçವಾಗಿದೆ. ಹೀಗಾಗಿಯೇ ಯೋಗದ ಮಹತ್ವವನ್ನು ಜಗತ್ತಿಗೆ ಸಾರಲು, ಜೂನ್ ೨೧ರಂದು ಪ್ರತಿವರ್ಷ ‘ವಿಶ್ವ ಯೋಗ ದಿನಾಚರಣೆ’ ಮಾಡಲಾಗುತ್ತದೆ.
೨೦೧೪ರ ಡಿಸೆಂಬರ್ ೧೧ರಂದು ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ವಿಶ್ವ ಯೋಗ ದಿನಾಚರಣೆ’ ಮಾಡುವ ಕರಡು ಪ್ರಸ್ತಾವನೆಗೆ ಅನುಮೋದನೆ ದೊರೆಯಿತು. ಅದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ, ಯೋಗಕ್ಕೆ ಒಂದು ದಿನ ಸೀಮಿತವಾಗಿರಸಬೇಕು ಮತ್ತು ಜಾಗತಿಕವಾಗಿ ಆಚರಿಸಲು ಅನುವು ಮಾಡಿಕೊಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ, ವಿಶ್ವ ಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಅನುಮೋದನೆ ನೀಡಿತು. ನಂತರ ಜೂನ್ ೨೧, ೨೦೧೫ರಂದು ಮೊದಲ ಬಾರಿಗೆ ಅಧಿಕೃತವಾಗಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ೧೦೦ಕ್ಕೂ ಹೆಚ್ಚು ದೇಶಗಳು ಯೋಗ ದಿನಾಚಣೆಯಲ್ಲಿ ಭಾಗವಹಿಸದ್ದವು. ಅಂದಿನಿಂದ ಪ್ರತಿವರ್ಷ ಜೂನ್ ೨೧ರಂದು ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತದೆ. ಜೂನ್ ೨೧ರಂದು ದೀರ್ಘಾವಧಿ ದಿನವೆಂದು ಪರಿಗಣಿಸಲಾಗಿದೆ. ಈ ದಿನವು ಉತ್ತರ ಗೋಳಾರ್ಧದಲ್ಲಿ ಸೂರ್ಯನ ಬೆಳಕು ಅತ್ಯಂತ ದೀರ್ಘಕಾಲ ಇರುತ್ತದೆ. ನಂತರ ಸೂರ್ಯನು ದಕ್ಷಿಣಾಯನವನ್ನು ಪ್ರವೇಶಿಸುತ್ತಾನೆ. ಈ ಕಾರಣಕ್ಕಾಗಿ ಜೂನ್ ೨೧ನ್ನು ಅಂತರರಾಷ್ಟಿçÃಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಯೋಗ ದಿನದ ಲಾಂಛನವು ಯೋಗ ಭಂಗಿಯಲ್ಲಿ ಚಿತ್ರಿಸಲಾದ ಮಾನವ ಆಕೃತಿಯು ಯೋಗಾಭ್ಯಾಸವನ್ನೇ ಸಂಕೇತಿಸುತ್ತದೆ. ಮಾನವ ಆಕೃತಿಯ ತಲೆಯ ಸುತ್ತಲಿನ ಕಿತ್ತಳೆ ಬಣ್ಣದ ಪ್ರಭಾವಲಯವು ಜ್ಞಾನೋದಯ, ಆಧ್ಯಾತ್ಮಿಕ ಜಾಗೃತಿ ಅಥವಾ ಯೋಗವು ಬೆಳೆಸಲು ಸಹಾಯ ಮಾಡುವ ಆಂತರಿಕ ಬೆಳಕನ್ನು ಪ್ರತಿನಿಧಿಸುತ್ತದೆ. ಗ್ಲೋಬ್‌ನ ಚಿತ್ರಣವು ಯೋಗದ ಸಾರ್ವತ್ರಿಕತೆಯನ್ನು ಸೂಚಿಸುತ್ತದೆ. ಕಂದು ಮತ್ತು ಹಸಿರು ಬಣ್ಣದ ಜೋಡಿ ಎಲೆಗಳು ಯೋಗ ಮತ್ತು ಪ್ರಕೃತಿಯ ನಡುವಿನ ಸಂಪರ್ಕವನ್ನು ಪ್ರತಿನಿಧಿಸುತ್ತವೆ. ಕಂದು ಎಲೆಗಳು ಭೂಮಿಯ ಅಂಶವನ್ನು ಸಂಕೇತಿಸುತ್ತವೆ. ಹಸಿರು ಎಲೆಗಳು ಪ್ರಕೃತಿ ಮತ್ತು ಹೊಸ ಬೆಳವಣಿಗೆಯನ್ನು ಪ್ರತಿನಿಧಿಸುತ್ತವೆ. ‘ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ’ ಎಂಬ ಧ್ಯೇಯ ವಾಕ್ಯವು ಜಗತ್ತಿನಲ್ಲಿ ಸಾಮರಸ್ಯವನ್ನು ಸಾಧಿಸುವದರೊಂದಿಗೆ, ಶಾಂತಿಯನ್ನು ಉತ್ತೇಜಿಸುವದಾಗಿದೆ. ಒಟ್ಟಾರೆ ಈ ಲಾಂಛನವು ಆಂತರಿಕ ಶಾಂತಿಯನ್ನು ಬೆಳೆಸುವ, ಪ್ರಕೃತಿಯೊಂದಿಗೆ ನಮ್ಮನ್ನು ಸಂಪರ್ಕಿಸುವ ಸಂದೇಶವನ್ನು ನೀಡುತ್ತದೆ.
೨೦೨೬ರ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯ ವಾಕ್ಯವು ‘ಆರೋಗ್ಯಕರ ವಯಸ್ಸಿಗೆ ಯೋಗ’ ವೆಂದು ಆಯುಷ್ ಸಚಿವಾಲಯವು ಘೋಷಿಸಿದೆ. ಒಳ್ಳೆಯ ಆರೋಗ್ಯ ಎಂದರೆ ಕೇವಲ ರೋಗದಿಂದ ದೂರವಿರುವದು ಮಾತ್ರವಲ್ಲ ಮನಸ್ಸು ಮತ್ತು ಭಾವನೆಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವದು ಮುಖ್ಯ. ಯೋಗ ಮಾಡುವದಿರಂದ ದೃಢವಾಗಿ ಇರಲು ಜೊತೆಗೆ ಹಲವಾರು ರೋಗಗಳಿಂದ ದೂರವಾಗಿ ಸಂತೋಷ ಉಲ್ಲಾಸದಿಂದ ಇರಲು ಸಹಾಯವಾಗುತ್ತದೆ. ಯೋಗದ ಮೂಲಕ ಏಕಾಗ್ರತೆ ಸಾಧಿಸಬಹುದು. ಯೋಗವೆಂದರೆ ಬರಿ ಆಸನಗಳನ್ನು ಮಾಡುವದು ಅಷ್ಟೇ ಅಲ್ಲ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಅಭ್ಯಾಸ, ಪ್ರಯತ್ನಗಳಿಂದ ಶರೀರದ ಬೇರೆ ಬೇರೆ ಅಂಗಗಳಿಗೆ, ಸ್ನಾಯುಗಳಿಗೆ ಮತ್ತು ನರನಾಡಿಗಳಿಗ ಸುಖ ವ್ಯಾಯಾಮದಿಂದ ಹೊಸ ಚೈತನ್ಯ ನೀಡಬಹುದೆಂಬುದನ್ನು ಯೋಗವು ವೈಜ್ಞಾನಿಕ ವಿಧಾನದಲ್ಲಿ ತಿಳಿಸುತ್ತದೆ. ಪ್ರತಿದಿನ ಒಂದು ಗಂಟೆ ಯೋಗಾಭ್ಯಾಸ ಕ್ರಮದಲ್ಲಿ ತೊಡಗಿಕೊಂಡರೆ, ಅಂಗಾಂಗಗಳಿಗೂ ಸೂಕ್ತವಾದ ವ್ಯಾಯಾಮ ದೊರೆತು ಆರೋಗ್ಯವರ್ಧನೆಗೆ ಪೂರಕವಾಗುತ್ತದೆ.
ಯೋಗ ಎನ್ನುವದು ಬರಿಯ ಆಸನ ಪ್ರಾಣಾಯಾಮ ಧ್ಯಾನವಷ್ಟೇ ಅಲ್ಲ. ಅದೊಂದು ದರ್ಶನ ಅದೊಂದು ಬದುಕಿನ ಮಾರ್ಗ. ಸರಳವಾಗಿ ಹೇಳಬೇಕೆಂದರೆ ಬೇಕಾಬಿಟ್ಟಿ ಬದುಕಿ, ಬೆಳಿಗ್ಗೆ ಎದ್ದು ಯೋಗಾಸನ ಪ್ರಾಣಾಯಾಮದ ಮೂಲಕ ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇನೆ ಎಂಬುದು ಯೋಗದ ದೃಷ್ಟಿ ಅಲ್ಲ. ಹಾಗಾಗಿ ಜಿಮ್, ಫಿಟ್ನೆಸ್ Practice ಇತ್ಯಾದಿಗಳನ್ನು ನೋಡುವಂತೆ ಯೋಗವನ್ನು ನೋಡಲಾಗದು. ನಿಯಮಿತವಾಗಿ ರೂಢಿಸಿಕೊಂಡು ಬಂದಿರುವ ಆಸನ, ಪ್ರಾಣಾಯಾಮಗಳು ತಪಸ್ಸಿನಂತೆಯೇ ಸರಿ. ಅವುಗಳಿಗೆ ಬದುಕಿಗೊಂದು ಶ್ರುತಿ ಹಿಡಿದು ಲಯ ತಪ್ಪದಂತೆ ಮುನ್ನಡೆಸುವ ಶಕ್ತಿ ಇದೆ. ಭಗವಾನ್ ಶ್ರೀ ಕೃಷ್ಣನ ಗೀತೊಪದೇಶವೆಲ್ಲವೂ ಯೋಗಮಯವೇ. ಗೀತೆಯೇ ಹೇಳುವಂತೆ ನಾವು ಕೈಗೆತ್ತಿಕೊಂಡ ಕಾರ್ಯವನ್ನು ಅತ್ಯಂತ ಕುಶಲವಾಗಿ ನಿರ್ವಹಿಸುವದು ಯೋಗದ ಒಂದು ನಿರ್ವಚನ. ಭಗವಾನ್ ಶ್ರೀಕೃಷ್ಣನೂ ಸ್ವಯಂ ಯೋಗೀಶ್ವರರು ಹೌದು. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವದು ಮತ್ತು ಆಹಾರ ಪದ್ದತಿ, ಜೀವನಶೈಲಿಯಿಂದ ಬರಬಹುದಾದ ವಿವಿಧ ಕಾಯಿಲೆಗಳಿಂದ ಮುಕ್ತಿ ಪಡೆಯುವದು, ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳುವದು ಕೂಡ ಯೋಗದ ಮಹತ್ವಗಳಲ್ಲಿ ಒಂದು.
ಜಾಗತಿಕವಾಗಿ ವಿವಿಧ ಸಂಘ-ಸಂಸ್ಥೆಗಳು, ಸರ್ಕಾರಗಳು, ಎನ್.ಜಿ.ಓ.ಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿವರ್ಷ ಜೂನ್ ೨೧ರಂದು ಯೋಗ ದಿನಾಚರಣೆ ಮಾಡುವ ಮೂಲಕ, ಯೋಗದ ಮಹತ್ವವನ್ನು ಸಾರಲಾಗುತ್ತದೆ. ಪ್ರತಿವರ್ಷ ಯೋಗ ಕಲಿಯಲೆಂದೇ ಸಾವಿರಾರು ವಿದೇಶಿಗರು ಭಾರತಕ್ಕೆ ಬರುತ್ತಾರೆ. ಅಂತಾರಾಷ್ಟ್ರೀಯ ಯೋಗ ದಿನವು ಜಾಗತಿಕ ಸ್ವಾಸ್ಥö್ಯವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಯೋಗ, ಧ್ಯಾನ ಮತ್ತು ನೈತಿಕ ಶಿಕ್ಷಣ ವಿದ್ಯಾರ್ಥಿ ದಿಸೆಯಿಂದಲೇ ಆರಂಭಗೊಳ್ಳಬೇಕು. ನಮ್ಮ ಗ್ರಾಮೀಣರು ಶತಾಯುಷಿಗಳಾಗಿ ಒಂದು ದಿನವೂ ವೈದ್ಯರ ಹತ್ತಿರ ಹೋಗದೆ ಬದುಕಿ ಬಾಳಿದ್ದು ನೆನಪಿಸಿಕೊಳ್ಳೋಣ. ಕಾರಣ ದೈಹಿಕ ಶ್ರಮ. ದಿನನಿತ್ಯದ ಬದುಕಿನ ಒತ್ತಡ, ಉದ್ವೇಗ, ಅತೃಪ್ತಿಗಳಿಗೆ ನಿಯಂತ್ರಣ ಸಾಧಿಸುವಲ್ಲಿ ಯೋಗ ಮತ್ತು ಧ್ಯಾನ ಪರಿಹಾರ ಒದಗಿಸಬಲ್ಲದು. ನಿಯಮಿತತೆ ಮತ್ತು ಸಂಯಮ ಇವೆರಡು ಯೋಗ ಜೀವನದ ಆದ್ಯ ತತ್ವಗಳು.
ಇಂದಿನ ಬದಲಾಗುತ್ತಿರುವ ಕಾಲದಲ್ಲಿ ನಾವು ಆರೋಗ್ಯದ ಮೇಲೆ ಗಮನಹರಿಸಬೇಕಿದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ. ಈ ಶಕ್ತಿ ಸಿಗಲು ಯೋಗದಿಂದ ಮಾತ್ರ ಸಾಧ್ಯ ಎಂದು ಸಾರಿದ ನರೇಂದ್ರ ಮೋದಿ ಅವರ ಆದರ್ಶ ಇಡೀ ವಿಶ್ವಕ್ಕೆ ಮಾದರಿ.
ಸುರೇಶ ಗುದಗನವರ
ಲೇಖಕರು
ಧಾರವಾಡ
9449294694




