ಇಂದು ಮುಸ್ಲಿಂ ಸಮುದಾಯದ ಕೆಲವು ನಾಯಕರು ಮತ್ತು ಸಂಘಟನೆಗಳು, ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಗಲ್ಲಿ ಮಟ್ಟದ ಹೋರಾಟದಿಂದ ಹಿಡಿದು ಮುಖ್ಯಮಂತ್ರಿಯವರ ಬಾಗಿಲವರೆಗೆ ತಲುಪಿದ್ದಾರೆ. ಅವರು ಆ ನಾಯಕರಲ್ಲಿ ಯಾವ ನಾಯಕತ್ವದ ಗುಣಗಳನ್ನು ಕಂಡಿದ್ದಾರೆ ಎಂಬುದು ಅವರವರ ವಿವೇಚನೆಗೆ ಬಿಟ್ಟ ವಿಚಾರ.
ಆದರೆ ಒಂದು ಮೂಲಭೂತ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ: ನಿಜವಾಗಿಯೂ ಜನನಾಯಕನಾಗಿರುವ ವ್ಯಕ್ತಿಗೆ ಸಚಿವ ಸ್ಥಾನ ಪಡೆಯಲು ಲಾಬಿ, ಒತ್ತಡ ರಾಜಕೀಯ ಅಥವಾ ಗುಂಪುಗಾರಿಕೆಯ ಅವಶ್ಯಕತೆ ಏಕೆ ಬರಬೇಕು?
ಒಬ್ಬ ನಾಯಕನ ರಾಜಕೀಯ ತೂಕ, ಜನಬೆಂಬಲ, ಹೋರಾಟದ ಇತಿಹಾಸ ಮತ್ತು ಸಂಘಟನಾ ಸಾಮರ್ಥ್ಯ ಪ್ರಬಲವಾಗಿದ್ದರೆ, ಸಚಿವ ಸ್ಥಾನಕ್ಕಾಗಿ ಆತ ಯಾರ ಬಾಗಿಲಿಗೂ ಹೋಗಬೇಕಾಗಿಲ್ಲ. ಸಚಿವ ಸ್ಥಾನವೇ ಆತನನ್ನು ಹುಡುಕಿಕೊಂಡು ಬರಬೇಕು. ಪಕ್ಷದ ಹೈಕಮಾಂಡ್ ಆತನ ಸಾಮರ್ಥ್ಯ, ಕೊಡುಗೆ ಮತ್ತು ಜನಪ್ರಿಯತೆಯನ್ನು ಗುರುತಿಸಿ, ಕೇಳುವ ಮೊದಲೇ ಸಚಿವ ಸ್ಥಾನ ನೀಡಬೇಕು. ಅದುವೇ ನಿಜವಾದ ಗೌರವ, ಅದುವೇ ನಿಜವಾದ ರಾಜಕೀಯ ಮಾನ್ಯತೆ.
ಯಾವ ನಾಯಕನು ತನ್ನ ಸ್ಥಾನಮಾನಕ್ಕಾಗಿ ಶಿಫಾರಸ್ಸು, ಒತ್ತಡದ ರಾಜಕೀಯ ಅಥವಾ ಗುಂಪುಗಳ ಬೆಂಬಲದ ಮೇಲೆ ಅವಲಂಬಿತನಾಗುತ್ತಾನೋ, ಆತ ತನ್ನ ರಾಜಕೀಯ ಶಕ್ತಿಗಿಂತಲೂ ಇತರರ ಕೃಪೆಯ ಮೇಲೆ ನಿಂತಿದ್ದಾನೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತಾನೆ.
ನಾಯಕತ್ವ ಎಂದರೆ ಅಧಿಕಾರಕ್ಕಾಗಿ ಬೇಡಿಕೆ ಇಡುವುದು ಅಲ್ಲ; ತನ್ನ ಸಾಮರ್ಥ್ಯದಿಂದ ಅಧಿಕಾರವನ್ನೇ ತನ್ನತ್ತ ಸೆಳೆಯುವುದು. ನಿಜವಾದ ನಾಯಕನು ಯಾರ ಕೃಪಾಪಾತ್ರನಾಗಿರುವುದಿಲ್ಲ, ಯಾರ ಮೊರೆ ಹೋಗುವವನೂ ಆಗಿರುವುದಿಲ್ಲ. ಆತ ತನ್ನ ಜನಬೆಂಬಲ, ತತ್ವನಿಷ್ಠೆ ಮತ್ತು ರಾಜಕೀಯ ಸಾಮರ್ಥ್ಯದಿಂದಲೇ ಗೌರವ ಮತ್ತು ಸ್ಥಾನಮಾನವನ್ನು ಗಳಿಸುತ್ತಾನೆ.
ಡಾ. ಸೈಯದ್ ರೋಶನ್ ಮುಲ್ಲಾ
ಸಾಮಾಜಿಕ ಮತ್ತು ರಾಜಕೀಯ ಚಿಂತಕರು





