ಧಾರವಾಡ 24 : ಅಂಜುಮನ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಧಾರವಾಡದ ವಾಣಿಜ್ಯ ವಿಭಾಗದ ವತಿಯಿಂದ 2026ನೇ ಸಾಲಿನ ಬೀಳ್ಕೊಡುಗೆ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ. ಅಸ್ಮಾನಾಜ್ ಎಸ್. ಬೆಳ್ಳಾರಿ ಅವರು, ವಿದ್ಯಾರ್ಥಿಗಳು ಆತ್ಮವಿಶ್ವಾಸ, ಪ್ರಾಮಾಣಿಕತೆ ಮತ್ತು ನಿರಂತರ ಕಲಿಕೆಯ ಮನೋಭಾವದೊಂದಿಗೆ ಜೀವನದಲ್ಲಿ ಮುನ್ನಡೆಯಬೇಕೆಂದು ಕರೆ ನೀಡಿದರು. “ವಿದಾಯವು ಅಂತ್ಯವಲ್ಲ, ಅದು ಹೊಸ ಅವಕಾಶಗಳು ಮತ್ತು ಸಾಧನೆಗಳತ್ತ ಸಾಗುವ ಹೊಸ ಆರಂಭವಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎನ್. ಬಿ. ನಾಲತವಾಡ ಅವರು ಪದವಿ ಪೂರ್ಣಗೊಳಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಜೀವನದಲ್ಲಿ ಶಿಸ್ತು, ಪರಿಶ್ರಮ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳ ಅನುಭವ ಹಂಚಿಕೆ, ಬೀಳ್ಕೊಡುಗೆ ಉಡುಗೊರೆ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯೂ ನಡೆಯಿತು.
ಈ ಸಂದರ್ಭದಲ್ಲಿ ಪ್ರೊ. ಶಬೀನಾ ಬಾನು ಬೀಡಿ, ಪ್ರೊ. ಶಬಾಜ್ ಸಿಂಗನಮಲ್ಲ, ಪ್ರೊ. ಮುಸ್ಕಾನ್ ಸಾವನೂರ, ಪ್ರೊ. ರಬಿಯಾ ದೊಡ್ಡವಾಡ ಹಾಗೂ ಪ್ರೊ. ರೇಶ್ಮಾ ಸಾವನೂರ ಸೇರಿದಂತೆ ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು. ಸಮಾರಂಭವು ಹಿರಿಯ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯದ ಶುಭಾಶಯಗಳನ್ನು ಕೋರುವ ಮೂಲಕ ಅರ್ಥಪೂರ್ಣವಾಗಿ ಸಮಾಪ್ತಿಯಾಯಿತು. ಕಾರ್ಯಕ್ರಮವು ಕುಮಾರಿ ಮುಸ್ಕಾನ್ ಖಾಜಿ ಅವರಿಂದ ಪವಿತ್ರ ಕುರ್ಆನ್ ಪಠಣ ಹಾಗೂ ಕುಮಾರಿ ಪವಿತ್ರಾ ಅವರಿಂದ ಶ್ಲೋಕ ವಾಚನದೊಂದಿಗೆ ಶುಭಾರಂಭಗೊಂಡಿತು. ಕುಮಾರಿ ಸಾದಿಯಾ ಮೊರಾಬ್ ಅವರು ಸ್ವಾಗತ ಭಾಷಣದ ಮೂಲಕ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮೊಹಮ್ಮದ್ ಕೈಫ್ ಜೆ. ಹಾಗೂ ಮೊಹಮ್ಮದ್ ಅಲಿ ಎನ್. ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಕುಮಾರಿ ಮುಸ್ಕಾನ್ ಖಾಜಿ ಹಾಗೂ ಕುಮಾರಿ ಸಾಯಿರಾ ಬಾನು ಅಥಿತಿ ಪರಿಚಿಯಿಸಿದರು, ಕುಮಾರಿ ಉಮ್ಮೈಮೆನ್ ಐ. ಪೀರ್ಜಾದೆ ಅವರು ವಂದನಾರ್ಪಣೆ ಸಲ್ಲಿಸಿದರು.





