ಧಾರವಾಡ: ಸೊಸೈಟಿಯ ಸದಸ್ಯರಿಗೆ ಠೇವಣಿ ಮರಳಿಸದ ಡಾ. ವಿ.ಎಸ್. ಸಾಧುನವರ ಸೊಸೈಟಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ.
ಹುಬ್ಬಳ್ಳಿಯ ನಿವಾಸಿ ಸತ್ಯನಾರಾಯಣ ಯಲ್ಲೂರ ಎದುರುದಾರ ವಿ.ಎಸ್. ಸಾಧುನವರ ಸೊಸೈಟಿಯ ಸದಸ್ಯರಾಗಿ ವಿವಿಧ ಮೊತ್ತಗಳ ಠೇವಣಿಗಳನ್ನು ಮತ್ತು ಆರ್.ಡಿ/ಎಸ್.ಬಿ. ಖಾತೆಯನ್ನು ಹೊಂದಿದ್ದರು. ದೂರುದಾರನಿಗೆ ತಮ್ಮ ವೈಯಕ್ತಿಕ ಅಡಚಣೆಯಿಂದ ಹಣ ಬೇಕಾಗಿದ್ದರಿಂದ ತಮ್ಮ ಎಫ್.ಡಿ/ಎಸ್.ಬಿ. ಮತ್ತು ಆರ್.ಡಿ. ಖಾತೆಯಲ್ಲಿರುವ ಹಣವನ್ನು ಕೊಡುವಂತೆ ಎದುರುದಾರರಿಗೆ ಸಾಕಷ್ಟು ಸಲ ಕೇಳಿಕೊಂಡಿರುತ್ತಾರೆ. ಆದರೆ ಎದುರುದಾರರು ಹಣವನ್ನು ಕೊಡದೇ ತಮಗೆ ಮೋಸ ಮಾಡಿದ್ದು, ವಿ.ಎಸ್. ಸಾಧುನವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪಿ.ಸಿ.ಹಿರೇಮಠ ದೂರುದಾರರು ಎದುರುದಾರರ ಸೊಸೈಟಿಯಲ್ಲಿ ಎಫ್.ಡಿ/ಎಸ್.ಬಿ. ಮತ್ತು ಆರ್. ಡಿ. ಖಾತೆಯನ್ನು ಹೊಂದಿರುತ್ತಾರೆ. ಎದುರುದಾರರು ದೂರುದಾರ ಸತ್ಯನಾರಾಯಣ ಅವರಿಗೆ ಹಣ ಮರಳಿಸದಿರುವುದು ಸೇವಾ ನ್ಯೂನತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಎಫ್.ಡಿ/ಎಸ್.ಬಿ ಮತ್ತು ಆರ್.ಡಿ. ಖಾತೆಯಲ್ಲಿದ್ದ ರೂ.೫,೫೮,೦೦೦ ಗಳನ್ನು ಅದರ, ಬಡ್ಡಿಯೊಂದಿಗೆ ಲೆಕ್ಕ ಹಾಕಿ ದೂರುದಾರನಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವAತೆ ಆಯೋಗ ಆದೇಶಿಸಿದೆ. ಅಲ್ಲದೇ ದೂರುದಾರರಿಗೆ ಆಗಿರುವ ಅನಾನುಕೂಲಕ್ಕಾಗಿ ರೂ. ೫೦,೦೦೦ ಪರಿಹಾರ ಮತ್ತು ರೂ. ೧೦,೦೦೦ ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಎದುರುದಾರರ ಸೊಸೈಟಿಯ ಚೇರ್ಮನ್ ವಿರುಪಾಕ್ಷಿ ಎಸ್ ಸಾಧುನವರಗೆ ಆಯೋಗ ನಿರ್ದೇಶಿಸಿದೆ.



