ಧಾರವಾಡದಲ್ಲಿ ನವಿಲುಗರಿ ಸಪ್ತೋತ್ಸವ ಸಂಭ್ರಮ; ಡಾ. ಸುಧಾ ಹುಲಗೂರ ಅವರ ಕವನ ಸಂಕಲನ ಲೋಕಾರ್ಪಣೆ

 

'Navilugari Saptotsava' celebrations in Dharwad; Dr. Sudha Hulagur's poetry collection released.

ಸಾಹಿತ್ಯ, ಸಂಸ್ಕೃತಿ ಮತ್ತು ಸಾಧಕರಿಗೆ ಗೌರವ; ಏಳನೇ ವಾರ್ಷಿಕೋತ್ಸವದಲ್ಲಿ ಕವಿಗೋಷ್ಠಿ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಧಾರವಾಡ: ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಧಾರವಾಡದ ಏಳನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ‘ನವಿಲುಗರಿ ಸಪ್ತೋತ್ಸವ’ ಕಾರ್ಯಕ್ರಮವು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು. ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜಮುಖಿ ಚಟುವಟಿಕೆಗಳ ಸಮ್ಮಿಲನಕ್ಕೆ ಸಾಕ್ಷಿಯಾದ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಡಾ. ಸುಧಾ ಹುಲಗೂರ ಅವರ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಲಾಯಿತು.

ಪ್ರಕೃತಿ ಮತ್ತು ಕಾವ್ಯದ ಅವಿನಾಭಾವ ಸಂಬಂಧ: ಡಾ. ಬಸು ಬೇವಿನಗಿಡದ

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಹಾಗೂ ಆಕಾಶವಾಣಿ ಧಾರವಾಡದ ನಿವೃತ್ತ ನಿರ್ದೇಶಕ ಡಾ. ಬಸು ಬೇವಿನಗಿಡದ ಅವರು ಮಾತನಾಡಿ, ಮಾನವ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಕಾವ್ಯಾತ್ಮಕವಾಗಿ ವಿವರಿಸಿದರು. ಪ್ರಕೃತಿಯಲ್ಲಿ ಯಾವುದೂ ದೊಡ್ಡದಲ್ಲ ಅಥವಾ ಚಿಕ್ಕದಲ್ಲ; ಪ್ರತಿಯೊಂದು ಜೀವಿಯೂ ಮತ್ತೊಂದರ ಮೇಲೆ ಅವಲಂಬಿತವಾಗಿದೆ. ಮನುಷ್ಯನ ಬದುಕು, ಪ್ರಕೃತಿ ಮತ್ತು ಕಾವ್ಯ ಪರಸ್ಪರ ಬೆಸೆದುಕೊಂಡಿವೆ ಎಂದು ಅವರು ಅಭಿಪ್ರಾಯಪಟ್ಟರು.

'Navilugari Saptotsava' celebrations in Dharwad; Dr. Sudha Hulagur's poetry collection released. 12

ಬದುಕಿನ ಸವಾಲುಗಳನ್ನು ಎದುರಿಸಿ ಬೆಳೆಯಬೇಕು: ಡಾ. ಸಿದ್ದೇಶ್ವರ ಎಂ.ಪಿ.ಎಂ.

ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ತೋರಣಗಲ್ಲಿನ ಡಾ. ಸಿದ್ದೇಶ್ವರ ಎಂ.ಪಿ.ಎಂ. ಅವರು ‘ಬದುಕು ಮತ್ತು ಭವಣೆ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಬದುಕಿನ ವಿವಿಧ ಆಯಾಮಗಳು ಹಾಗೂ ಸವಾಲುಗಳನ್ನು ಎದುರಿಸಿ ಯಶಸ್ಸು ಕಂಡ ಮಹನೀಯರ ಜೀವನದ ಉದಾಹರಣೆಗಳ ಮೂಲಕ ಜೀವನದ ಮೌಲ್ಯಗಳನ್ನು ವಿವರಿಸಿದರು. ಅನಾಥ ಮಕ್ಕಳಿಗೆ ಆಸರೆಯಾದ ಸಿಂಧುತಾಯಿ ಅವರ ಬದುಕನ್ನು ಉದಾಹರಿಸಿದ ಅವರು, ಜೀವನವು ಕೇವಲ ನಮಗಾಗಿ ಬದುಕುವುದಲ್ಲ; ಇತರರಿಗೆ ಆಸರೆಯಾಗಿ ಬದುಕುವುದೂ ಆಗಿದೆ ಎಂಬ ಸಂದೇಶ ನೀಡಿದರು.

ವೇದಿಕೆಯ ಏಳಿಗೆಯ ಹಾದಿ ಅನಾವರಣ

ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ಪ್ರತಿಭಾ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವೇದಿಕೆ ಬೆಳೆದು ಬಂದ ಹಾದಿ, ಸಾಹಿತ್ಯಿಕ ಚಟುವಟಿಕೆಗಳು ಹಾಗೂ ಸಂಸ್ಥೆಯ ಉದ್ದೇಶಗಳನ್ನು ಹಂಚಿಕೊಂಡರು. ಜಯಲಕ್ಷ್ಮಿ ಹೊಳೆಆಲೂರು ಅವರು ಮಾತನಾಡಿ, ಸಮಾಜದಲ್ಲಿ ಉತ್ತಮ ಸಂಸ್ಕಾರಗಳನ್ನು ರೂಢಿಸಿಕೊಂಡು ಬೆಳೆಯುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು.

ಡಾ. ಸುಧಾ ಹುಲಗೂರ ಅವರ ಕವನ ಸಂಕಲನ ಲೋಕಾರ್ಪಣೆ

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಡಾ. ಸುಧಾ ಹುಲಗೂರ ಅವರ ಕವನ ಸಂಕಲನವನ್ನು ಸಂಗೀತಗಾರ್ತಿ ಹಾಗೂ ಸಾಹಿತಿ ಮೇಘಾ ಹುಕ್ಕೇರಿ ಅವರು ಬಿಡುಗಡೆಗೊಳಿಸಿ ಕೃತಿಯ ಪರಿಚಯ ಮಾಡಿಕೊಟ್ಟರು. ಡಾ. ಸುಧಾ ಅವರ ಬಹುಮುಖ ಪ್ರತಿಭೆಯನ್ನು ಪ್ರಶಂಸಿಸಿದ ಅವರು, ಸರಳ ಪದಗಳ ಮೂಲಕ ಗಹನ ಅರ್ಥಗಳನ್ನು ಅಭಿವ್ಯಕ್ತಿಸುವ ಅವರ ಬರವಣಿಗೆಯ ವೈಶಿಷ್ಟ್ಯವನ್ನು ಗುರುತಿಸಿದರು. ಮಕ್ಕಳಲ್ಲಿ ರಾಷ್ಟ್ರಪ್ರೇಮ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಆಶಯ ಕೃತಿಯಲ್ಲಿದೆ ಎಂದು ತಿಳಿಸಿ, ಅವರ ಸಾಹಿತ್ಯಿಕ ಪ್ರಯತ್ನಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.

ನಂತರ ಮಾತನಾಡಿದ ಕೃತಿಕಾರರಾದ ಡಾ. ಸುಧಾ ಹುಲಗೂರ ಅವರು, ತಮ್ಮ ಕವನ ಸಂಕಲನವನ್ನು ಈ ವೇದಿಕೆಯಲ್ಲಿ ಲೋಕಾರ್ಪಣೆಗೊಳಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

20 ಕವಿಗಳಿಂದ ಕವನ ವಾಚನ

ಸವದತ್ತಿಯಿಂದ ಆಗಮಿಸಿದ್ದ ಭರತನಾಟ್ಯ ಕಲಾವಿದೆ ಹಾಗೂ ಸಾಹಿತಿ ಸೀಮಾ ಶಶಿರಾಜ ವನಕಿ ಅವರು ಕವಿಗೋಷ್ಠಿಗೆ ಚಾಲನೆ ನೀಡಿದರು. ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ಮಾತುಗಳನ್ನು ಸ್ಮರಿಸಿದ ಅವರು, ಗೀಗೀ ಪದವನ್ನು ಹಾಡುವ ಮೂಲಕ ಸಭಿಕರ ಗಮನ ಸೆಳೆದರು. ಬಳಿಕ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 20 ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.

'Navilugari Saptotsava' celebrations in Dharwad; Dr. Sudha Hulagur's poetry collection released.212

ಸಂಗೀತ, ನೃತ್ಯದಿಂದ ಕಳೆಗಟ್ಟಿದ ಸಪ್ತೋತ್ಸವ

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳಿಂದ ಸೀತಾರ್ ವಾದನ, ಭರತನಾಟ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಿ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸಿದವು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಮಾಲತಿ ಮುದಕವಿ ಅವರು ಮಾತನಾಡಿ, ನವಿಲುಗರಿ ವೇದಿಕೆಯ ಸಾಹಿತ್ಯಿಕ ಚಟುವಟಿಕೆಗಳನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿಯೂ ಇಂತಹ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿ, ಕವಿಗಳು ಹಾಗೂ ಮಕ್ಕಳಿಗೆ ಶುಭ ಹಾರೈಸಿದರು.

ಯಶಸ್ವಿನಿ ಎಂ.ಡಿ. ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಶಿವು ಖನ್ನೂರ ಅವರು ಸ್ವಾಗತಿಸಿದರು. ಕಸ್ತೂರಿ ಬೀರಪ್ಪನವರ ಅವರು ಪ್ರಾರ್ಥನೆ ನೆರವೇರಿಸಿದರು