ಬಿರುಸುಗೊಂಡ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ
ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಪರ ಸಚಿವ ಸಂತೋಷ್ ಲಾಡ್ ಪ್ರಚಾರ
ಹುಬ್ಬಳ್ಳಿಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ: ಮೋಹನ ಲಿಂಬಿಕಾಯಿ ಪರ ಸಚಿವ ಸಂತೋಷ್ ಲಾಡ್
ಹುಬ್ಬಳ್ಳಿ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಚಟುವಟಿಕೆಗಳು ಚುರುಕುಗೊಂಡಿದ್ದು, ಹುಬ್ಬಳ್ಳಿಯ ವಿವಿಧೆಡೆ ನಡೆದ ಪ್ರಚಾರ ಸಭೆಗಳಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್. ಲಾಡ್ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಪರವಾಗಿ ಮತಯಾಚಿಸಿದರು.
ಪ್ರಚಾರ ಸಭೆಗಳಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಮೋಹನ ಲಿಂಬಿಕಾಯಿ ಅವರು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಪದವೀಧರರ ಪರವಾಗಿ ಸದನದಲ್ಲಿ ಧ್ವನಿಯಾಗಿದ್ದಾರೆ ಎಂದು ಹೇಳಿದರು. ಈ ಬಾರಿಯೂ ಅವರಿಗೆ ಬೆಂಬಲ ನೀಡಿ, ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕರಿಸುವಂತೆ ಪದವೀಧರ ಮತದಾರರಲ್ಲಿ ಮನವಿ ಮಾಡಿದರು.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವಿವಿಧೆಡೆ ಸಭೆಗಳನ್ನು ನಡೆಸಿ, ಅಭ್ಯರ್ಥಿಯ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಎನ್. ಎಚ್. ಕೋನರಡ್ಡಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಕೆಪಿಸಿಸಿ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು, ಬ್ಲಾಕ್ ಅಧ್ಯಕ್ಷರು ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.




