ಅ. 16ರ ಬದಲು ನ. 20ಕ್ಕೆ ಸಿನಿಮಾ ಬಿಡುಗಡೆ | ಹುಬ್ಬಳ್ಳಿಯಲ್ಲಿ ಚಿತ್ರದ 6ನೇ ಗೀತೆ ಅನಾವರಣ

ಹುಬ್ಬಳ್ಳಿ: ಗ್ರಾಮೀಣ ಬದುಕಿನ ಸ್ಥಿತಿಗತಿಗಳನ್ನು ತೆರೆಮೇಲೆ ಬಿಂಬಿಸುವ ಮೂಲಕ ಸಿನಿರಸಿಕರ ಗಮನ ಸೆಳೆಯುತ್ತಿರುವ ಹೊಸಬರ ತಂಡದ ‘ಪ್ರೇಮದ ಊರಲಿ’ ಚಿತ್ರಕ್ಕೆ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಅಕ್ಟೋಬರ್ 16ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಇದೀಗ ನವೆಂಬರ್ 20ರಂದು ತೆರೆಗೆ ಬರಲಿದೆ ಎಂದು ನಾಯಕ ನಟ ಗಣೇಶ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಬರು ಸೇರಿಕೊಂಡು ನಿರ್ಮಿಸಿರುವ ‘ಪ್ರೇಮದ ಊರಲಿ’ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ನಮ್ಮ ಚಿತ್ರದ ಬಿಡುಗಡೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ನಿರ್ಮಾಪಕರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿರ್ಮಾಪಕರೂ ಇದಕ್ಕೆ ಸಹಮತ ಸೂಚಿಸಿದ್ದಾರೆ ಎಂದರು.

1945ರ ಕಾಲಘಟ್ಟದಲ್ಲಿ ಅರಳುವ ಪ್ರೇಮಕಥೆ!

‘ಬೃಂದಾವಿಹಾರಿ’ ಚಿತ್ರವು 1945ರ ಕಾಲಘಟ್ಟದ ಕಲಾ ಹಂದರ ಹೊಂದಿದ್ದು, ಪ್ರೇಮಕಥೆ ಹಾಗೂ ಕೌಟುಂಬಿಕ ಭಾವನೆಗಳ ಸಮ್ಮಿಲನವಾಗಿದೆ. ನಾಯಕಿಯಾಗಿ ದೇವಿಕಾ ಭಟ್ ಕಾಣಿಸಿಕೊಂಡಿದ್ದು, ಮಾಳವಿಕಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟ ರಂಗಾಯಣ ರಘು, ಹಾಸ್ಯನಟ ಸಾಧು ಕೋಕಿಲ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಸ್ಯ, ಮನರಂಜನೆ ಹಾಗೂ ಭಾವನಾತ್ಮಕ ಸನ್ನಿವೇಶಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ವಿಶ್ವಾಸವಿದೆ ಎಂದು ಗಣೇಶ್ ಹೇಳಿದರು.

ಉತ್ತರ ಕರ್ನಾಟಕದ ಕಥೆಗೆ ಆದ್ಯತೆ

ನಿರ್ಮಾಪಕ ಸಮೃದ್ಧಿ ಮಂಜುನಾಥ ಮಾತನಾಡಿ, ಉತ್ತರ ಕರ್ನಾಟಕದ ಕಲಾವಿದರಿಗೆ ಅವಕಾಶ ನೀಡಿ, ಈ ಭಾಗದಲ್ಲಿಯೇ ಚಿತ್ರೀಕರಣ ನಡೆಸುವಂತೆ ಹಲವು ವರ್ಷಗಳಿಂದ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮರ್ಯಾದಾ ಹತ್ಯೆ ಘಟನೆಯನ್ನು ಆಧರಿಸಿ ಚಿತ್ರ ನಿರ್ಮಿಸಲು ಸಿದ್ಧತೆ ನಡೆಸಿದ್ದೇನೆ. ದೇಶದ ಯಾವುದೇ ಹೆಣ್ಣಿಗೂ ಅನ್ಯಾಯವಾಗಬಾರದು ಎಂಬ ಸಂದೇಶವನ್ನು ಸಾರುವ ಉದ್ದೇಶವಿದೆ. ಚಿತ್ರ ನಿರ್ಮಾಣಕ್ಕೆ ಸರ್ಕಾರದ ಅನುಮತಿ ದೊರೆತ ಬಳಿಕ ಚಿತ್ರೀಕರಣ ಆರಂಭಿಸಲಾಗುವುದು ಎಂದು ತಿಳಿಸಿದರು.

ಕೆವಿಎನ್ ಪ್ರೊಡಕ್ಷನ್‌ನಿಂದ ವಿತರಣೆ

ನಿರ್ದೇಶಕ ಶ್ರೀನಿವಾಸ್ ರಾಜ್ ಮಾತನಾಡಿ, ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ವಿತರಣೆ ಮಾಡುತ್ತಿದೆ. ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ಅಚ್ಚುತ್ ಕುಮಾರ್, ಲಕ್ಷ್ಮೀ ಸೇರಿದಂತೆ ಹಿರಿಯ ಹಾಗೂ ಯುವ ಕಲಾವಿದರು ಅಭಿನಯಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದು, ವೆಂಕಟ್ ಪ್ರಸಾದ್ ಛಾಯಾಗ್ರಹಣ, ವಿಜಯ್ ಈಶ್ವರ್ ಸಂಭಾಷಣೆ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ಶೇಖರ್ ವಿ.ಜೆ. ನೃತ್ಯ ನಿರ್ದೇಶನದ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದರು.

ನಾಯಕಿಯರಾದ ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮಾ ಚಿತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಹುಬ್ಬಳ್ಳಿಯಲ್ಲಿ ‘ಬೃಂದಾವಿಹಾರಿ’ 6ನೇ ಗೀತೆ ಬಿಡುಗಡೆ

ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದ್ದರೂ, ಚಿತ್ರದ ಆರನೇ ಗೀತೆಯನ್ನು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು. ಈಗಾಗಲೇ ಚಿತ್ರದ ಐದು ಹಾಡುಗಳು ಡಿಜಿಟಲ್ ವೇದಿಕೆಗಳಲ್ಲಿ ಉತ್ತಮ ವೀಕ್ಷಣೆ ಗಳಿಸಿವೆ.

ಚಿತ್ರದ ಹಾಡುಗಳ ವೀಕ್ಷಣೆ ವಿವರಗಳು:

  • ‘ರಾಧಾ ರಾಧಾ’ ಲಿರಿಕಲ್ ಹಾಡು – 1.1 ಕೋಟಿ ವೀಕ್ಷಣೆ
  • ‘ಜೀವ ಜೀವ’ – 42 ಲಕ್ಷ ವೀಕ್ಷಣೆ
  • ‘ರಾಮ ರಾಮ ದೇವ’ – 23 ಲಕ್ಷ ವೀಕ್ಷಣೆ
  • ‘ಒಂದೇ ಒಂದು’ ವಿಡಿಯೋ ಸಾಂಗ್ – 90 ಲಕ್ಷ ವೀಕ್ಷಣೆ
  • ‘ನಾದಸುನಾದ’ – 19 ಲಕ್ಷ ವೀಕ್ಷಣೆ

ಚಿತ್ರದ ಹಾಡುಗಳಿಗೆ ದೊರೆತಿರುವ ಉತ್ತಮ ಪ್ರತಿಕ್ರಿಯೆ ಚಿತ್ರತಂಡದ ನಿರೀಕ್ಷೆಯನ್ನು ಹೆಚ್ಚಿಸಿದ್ದು, ನವೆಂಬರ್ 20ರಂದು ತೆರೆಗೆ ಬರಲಿರುವ ‘ಬೃಂದಾವಿಹಾರಿ’ ಸಿನಿಮಾ ಪ್ರೇಕ್ಷಕರ ಮನಗೆಲ್ಲುವ ನಿರೀಕ್ಷೆಯಲ್ಲಿದೆ.