ಧಾರವಾಡ 08 : ರಕ್ಷಿತ ಅರಣ್ಯ ವಲಯದಲ್ಲಿನ ಅಕ್ರಮ ಕುರಿತು ರಾಜ್ಯ ಸರಕಾರದ ಅಧಿಕಾರಿಗಳನ್ನು‌ ಮತ್ತು ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ‌ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಈ ಕಾರಣಗಳಿಂದ ತಪ್ಪಿತಸ್ಥರ ಮೇಲೆ ಕ್ರಮ‌ ಆಗಬೇಕೆಂಬ ಉದ್ದೇಶದಿಂದ ‌ಜಿಲ್ಲಾ ಮಟ್ಟದ
ನ್ಯಾಯಾಧೀಶರಿಂದ‌‌ ತನಿಖೆ ನಡೆಸಲು ಸರಕಾರ‌‌ ಒಪ್ಪಿಸಬೇಕು.

ಸರಕಾರ‌ ಈ‌ ತೀರ್ಮಾನ ಮಾಡದಿದ್ದರೆ‌‌, ಬೀದಿಗಿಳಿದು‌ ಹೋರಾಟ ಮತ್ತು ನ್ಯಾಯಾಲಯದ ‌ಮೊರೆ‌ ಹೋಗಲಾಗುವುದು ಎಂದು ಜನ ಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ತಿಳಿಸಿದರು.
“ಅರಣ್ಯ ಇಲಾಖೆಯ ಅವಾಂತರ‌” ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಧಾರವಾಡ ಸಿಸಿಎಫ್ ರವರಿಗೆ ದೂರು ನೀಡಿಲಾಗಿದೆ. ದೂರು /ಮನವಿ ಮೇರೆಗೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮರಗಳನ್ನು ಕಡಿಯುತ್ತಿದ್ದವರನ್ನು ಬಂಧಿಸಿ, ಕಡಿಯಲು ಉಪಯೋಗಿಸಿದ ಪರಿಕರಗಳನ್ನು
ಜಪ್ತಿ ಮಾಡಬೇಕಿತ್ತು.

ಆದರೆ, ಅರಣ್ಯ ಅಧಿಕಾರಿಗಳು ಸ್ವತಃ ಮುಂದೆ ನಿಂತು ತಮ್ಮ ಹಿರಿಯ ಅಧಿಕಾರಿಗಳ ಮೌಖಿಕ ಆದೇಶದಂತೆ ರಸ್ತೆಗೆ ಹಾಕಿರುವ ಜಲ್ಲಿ ಕಲ್ಲಿನ ಮೇಲೆ ಮಣ್ಣು ಹಾಕಿಸುತ್ತಿದ್ದು ನಮ್ಮ ಮತ್ತು ಮಾಧ್ಯಮದವರ ಕಣ್ಣಿಗೆ ಕಂಡು ಬಂದಿತು.
ನಮ್ಮನ್ನು ನೋಡಿದ ತಕ್ಷಣ ಆ ಸ್ಥಳದಿಂದ ಅರಣ್ಯ ಅಧಿಕಾರಿಗಳು ತಮ್ಮ ಬೈಕ್ ಗಳ ಮೇಲೆ ಓಡಿ ಹೋಗುತ್ತಿರುವ ದೃಶ್ಯ ಮಾಧ್ಯಮದ ಕ್ಯಾಮರಾಗಳಲ್ಲಿ ಸೆರೆಯಾಗಿವೆ ಎಂದಿದ್ದಾರೆ.
‌ಮರಗಳನ್ನು ಕಡೆದಿರುವ ಅರಣ್ಯ ಪ್ರದೇಶ ಸರ್ವೆ ನಂ. 22, 23, 24 ರಲ್ಲಿ ಮರಗಳನ್ನು ಕಡಿಯಲು ತಂದಂತಹ ವಾಹನಗಳಾದ ಒಂದು ಕ್ರೂಸರ್ ( ಕೆಎ-17 ಎ-0547), ಮರಗಳನ್ನು ಕಡಿಯಲು ಕಾರ್ಮಿಕರನ್ನು ಕರೆದುಕೊಂಡು ಬಂದ ಟ್ರ್ಯಾಕ್ಟರ್ (
ಕೆಎ-27, ಟಿ- 5057೦ ), ( ಕೆಎ-05ಎಎಚ್-1915), ಹಾಲಿನ ಕ್ಯಾನುಗಳಲ್ಲಿ ಕುಡಿಯಲು ನೀರು ತಂದ ಇಸುಜು ಡಿ ಮ್ಯಾಕ್ಸ್ ವಾಹನ ( ಕೆಎ-25 ಎಮ್‌ಡಿ-2124), ಮರಗಳನ್ನು ಬುಡಸಮೇತ ಕೀಳಲು, ರಸ್ತೆ ಮತ್ತು ಕಾಲುವೆ ನಿರ್ಮಾಣಕ್ಕೆ ಬಳಸಿದ ಜೆ.ಸಿ.ಬಿ. ( ಕೆಎ-25, ಎಂಡಿ-22124)
ಸ್ಥಳದಲ್ಲಿದ್ದುದು ಕಂಡು ಬಂದಿತ್ತು ಎಂದಿದ್ದಾರೆ.

ಅಲ್ಲದೇ ಸ್ಥಳದಿಂದ ಪಲಾಯನ ಮಾಡುತ್ತಿರುವ ಅರಣ್ಯ ಅಧಿಕಾರಿಗಳ ವಾಹನಗಳ ನಂಬರಗಳು ಈ‌ ಕೆಳಗಿನಂತಿವೆ (ಕೆಎ-25, ಇ-3825), (ಕೆಎ-24,ಆರ್- ಆರ್-7451), (ಕೆಎ-25, ಜಿ-1313). ನಮ್ಮ‌ ಮನವಿ ಸ್ವೀಕರಿಸಿದ ಹಿರಿಯ ಅಧಿಕಾರಿಗಳು ನೀಡಿದ ಮೌಖಿಕ ಆದೇಶದ ಮೇರೆಗೆ, ಸ್ಥಳದಲ್ಲಿದ್ದ ಅಧಿಕಾರಿಗಳು ವಾಹನಗಳು, ಪರಿಕರಗಳನ್ನು ಜಪ್ತಿ ಮಾಡುವುದು, ಮರಗಳನ್ನು ಕಟಾವು ಮಾಡಲು ಬಂದವರನ್ನು ಬಂಧಿಸಲು ಮುಂದಾಗಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು. ಆದರೆ, ರಸ್ತೆಗೆ ಮಣ್ಣು ಹಾಕಿ ಮುಚ್ಚಿ ಹಾಕುವ ಪ್ರಯತ್ನ ಮಾಡಿರುವುದು ಕಣ್ಣೆದುರಿಗೆ ಕಂಡ ವಾಸ್ತವ.
ನಾವು ದೂರು ನೀಡಿದ ನಂತರ, ಸಂಬಂದಪಟ್ಟ ವಲಯ ಅರಣ್ಯ ಅಧಿಕಾರಿ ಕಿರಣಕುಮಾರ ಕರತಂಗಿ ಅವರಿಗೆ ವಾಟ್ಸ್ಅಪ್ ಮೂಲಕ ದಾಖಲೆಗಳನ್ನು ನೀಡಲಾಯಿತು. ಜೊತೆಗೆ ಮೊಬೈಲ್ ಮುಖಾಂತರ ಕರೆ ಮಾಡಿದಾಗ 10-15 ನಿಮಿಷದಲ್ಲಿ ಸ್ಥಳಕ್ಕೆ ಹೋಗಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.
ಆದರೆ,ಸಾಯಂಕಾಲ 6:00 ಗಂಟೆಯವರೆಗೆ ಮಾಧ್ಯಮ ಮಿತ್ರರು ಹಾಗೂ ನಾವು ಸ್ಥಳದಲ್ಲಿ ಇದ್ದರೂ ಕೂಡ ಆರ್.ಎಫ್.ಓ. ರವರು ಸ್ಥಳಕ್ಕೆ ಬಂದು ಅಗತ್ಯ ಕ್ರಮ ಕೈಗೊಂಡಿರುವುದಿಲ್ಲ ಎಂದಿದ್ದಾರೆ.

‌‌‌‌ಈ ಮಧ್ಯೆ ಹಳ್ಳಿಗೇರಿ ಮೀಸಲು ಅರಣ್ಯ ಪ್ರದೇಶ ಸರ್ವೆ ನಂ. 22, 25 ರಲ್ಲಿ ರಸ್ತೆ ನಿರ್ಮಾಣ ಹಾಗೂ ಮರಗಳ ಕಟಾವಣೆ ಮಾಡಿರುವ ಕುರಿತು ದಿ29:3:25 ರಂದು 30.03.2025 ರಂದು ಎರಡು ಪ್ರತ್ಯೇಕ ಎಫ್.ಆಯ್.ಆರ್.ಗಳನ್ನು ದಾಖಲಿಸಿದ್ದಾರೆ. ಮಾಲ್ಕಿ‌ ಜಮೀನು ಸ.ನಂ. 23 ಮತ್ತು 24 ರಲ್ಲಿ‌ 3 ನೇ‌ ದರ್ಜೆಯ 177 ಎಳೆಗಳು, ಸ.ನಂ.22 ರಲ್ಲಿ 3 ನೇ ದರ್ಜೆಯ 26 ಎಳೆಗಳು( ಸಾಗವಾನಿ,‌ಮತ್ತಿ ,‌ ಜಂಗ್ಲಿ ಜಾತಿಯ ಮರಗಳು) ಎಂದು ಎಫ್ ಆಯ್ ಆರ್ ನಲ್ಲಿ ದಾಖಲಿಸಲಾಗಿದೆ. ದಿ.29.03.2025 ರಂದು ನವೀನಸಿಂಗ್ ದೌಲತ್ ಸಿಂಗ್ ಠಾಕೂರ್ ಇವರ ಮೇಲೆ ರಸ್ತೆ ನಿರ್ಮಿಸಿದ ಆರೋಪದ‌ ಮೇಲೆ
ದಾಖಲಿಸಿದ‌ ಎಫ್ ಐ ಆರ್ ನಲ್ಲಿ ಒಂದು ಡೂಜರ್ ಟ್ರ್ಯಾಕ್ಟರ್ (ಕೆಎ-28, ಡಿ-8680) ಅನ್ನು‌ ಜಪ್ತಿ ಮಾಡಲಾಗಿದೆ. ಅಧಿಕಾರಿಗಳು ಜಪ್ತಿ ಮಾಡಿದ ಡೂಜರ್ ಟ್ರ್ಯಾಕ್ಟರ್ ನಂಬರ
ನಕಲಿ ಆಗಿದೆ. ಈ‌ ನಂಬರ ವಾಹನವು ಅಪ್ಪೆ ಅಟೋ(ತ್ರಿಚಕ್ರ ವಾಹನ). ಜಪ್ತಿ‌ ಮಾಡಿರುವ ವಾಹನಗಳ ಮೇಲೆ ಕೆಎಫ್‌ಎ-71(ಎ) ಪ್ರಕರಣದಡಿ ಎಫ್‌ಆಯ್‌ಆರ್ ದಾಖಲಿಸಿರುವುದಿಲ್ಲ.ಎರಡೂ ಎಫ್.ಆಯ್.ಆರ್. ಗಳಲ್ಲಿ ಬಣದೂರು ಶಾಖೆಯ ಉಪ ವಲಯ ಅರಣ್ಯ ಅಧಿಕಾರಿ ಅಂತಾ ಸಹಿ
ಜಪ್ತು ವರದಿಯಲ್ಲಿದೆ ಎಂದಿದ್ದಾರೆ.

ಜಪ್ತಿ ವರದಿಯಲ್ಲಿ ‌ ಸಹಿ ಮಾಡಿದ ಡಿಆರ್‌ಎಫ್‌ಓ ಜೀತೆಂದ್ರ ಕಾಂಬಳೆ ಅವರೇ ನಾವು ಹೋದ ಸಂದರ್ಭದಲ್ಲಿ ಸ್ಥಳದಿಂದ ಓಡಿ ಹೋದ ಅಧಿಕಾರಿ. ಈ‌‌ ಬಗ್ಗೆ ಅರಣ್ಯ ರಕ್ಷಕರುಗಳ ಫೋಟೋಗಳು ಮಾಧ್ಯಮದವರ ಹಾಗೂ ನಮ್ಮ ಬಳಿಯೂ ಲಭ್ಯವಿವೆ.
ಇನ್ನೂ ಆಶ್ಚರ್ಯಕರ ಸಂಗತಿ‌ ಎಂದರೆ, ಅಧಿಕಾರಿಗಳು ದಾಖಲಿಸಿದ‌ ಎಫ್ಐಆರ್ ನಲ್ಲಿ ಪಹಣಿಯಲ್ಲಿರುವ ಜಮೀನಿನ‌‌ ಮಾಲಿಕ ನವೀನಸಿಂಗ್ ನ‌ನ್ನು ಮಾತ್ರ ಆರೋಪಿ‌ ಎನ್ನಲಾಗಿದೆ.
ಈಗ ಕಡೆಯಲಾದ ಎಲ್ಲ‌‌ ಮರಗಳನ್ನು ಮೇಲೆ‌ ಉಲ್ಲೇಖಿಸಿದ ಸಕಲ‌‌ ಸಾಮಗ್ರಿಗಳನ್ನು ಬಳಸಿದ್ದು ನವೀನಸಿಂಗ್ ಮಾತ್ರನಾ ಎಂದು ಪ್ರಶ್ನಿಸಿದ್ದಾರೆ. ಇನ್ಮೊಂದೆಡೆ,‌ ಮರಗಳನ್ನು‌ ಕಡೆದ ಸಂದರ್ಭದಲ್ಲಿನ
ಮೊಬೈಲ್ ಟಾವರ್ ಡಂಪ್‌ನ ಉಪಯೋಗ, ಸ್ಥಳದಲ್ಲಿ ‌ಇದ್ದವರ‌ ಪತ್ತೆ, ಅವರೊಂದಿಗೆ ಸಂಭಾಷಣೆ ನಡೆಸಿದವರನ್ನು‌ ಆಧುನಿಕ ‌ತಂತ್ರಜ್ಞಾನದ‌ ಮೂಲಕ ಶೋಧಿಸಬಹುದಾಗಿತ್ತು.

ಈ ಕೆಲಸವನ್ನು ಅನೇಕ ಪ್ರಕರಣಗಳಲ್ಲಿ ಇಲಾಖೆ ಮಾಡಿ ಯಶಸ್ವಿ ಕೂಡ ಆಗಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ 1 ಮೀಟರಗಿಂತ ಹೆಚ್ಚಿನ ಸುತ್ತಳತೆ ಹೊಂದಿರುವ ಮರಗಳನ್ನು ಕಟಾವಣೆ ಮಾಡಿದ್ದರೂ ಸಹ , ಕೇವಲ 3 ನೇ ದರ್ಜೆಯ 26 ಎಳೆಗಳು ಎಂದು ತೋರಿಸಿದ್ದಾರೆ.
ಕರ್ನಾಟಕ ಅರಣ್ಯ ಕಾಯಿದೆ 1963 ರಲ್ಲಿ ಉಲ್ಲೇಖಿಸಿರುವಂತೆ 60-ಸೆಂ.ಮೀ. ಗಿಂತಲೂ ಹೆಚ್ಚು ಸುತ್ತಳತೆ ಮರಗಳಿದ್ದರೆ, ಅಂತಹ ಮರಗಳನ್ನು“ನಾಟಾ”ಅಂತಾ ಪರಿಗಣಿಸಬೇಕು. ಆದರೆ , ಅಧಿಕಾರಿಗಳು 3 ದರ್ಜೆಯ ಎಳೆಗಳು ಅಂತಾ ಎಫ್‌ಆಯ್‌ಆರ್ ನಲ್ಲಿ ನಮೂದಿಸಿರುವುದು ಏಕೆ?.
‌‌‌ಹಳ್ಳಿಗೇರಿ ಸರ್ವೇ ನಂ. 22, 25 ಹಾಗೂ ಮಾಲ್ಕಿ ಅರಣ್ಯ ಸ. ನಂ. 23, 24 ರ ಮಧ್ಯೆ ಗಡಿ ಗುರುತು ಮಾಡಿ ಬೌಂಡರಿ ಟ್ರೆಂಚ್ ಹಾಕಲಾಗಿದೆ.

ಇದು ಜಂಟಿ ಸರ್ವೇ ಮಾಡಲಾಗಿದೆಯಾ?.
ಫಾರೆಸ್ಟ್ ಸೆಟಲ್‌ಮೆಂಟ್ ಆಫೀಸ್ ಅವರಿಂದ ಬೌಂಡರಿ ನಿಗದಿ ಮಾಡಲಾಗಿದೆಯೇ?.
ಮಾಲ್ಕಿದಾರರು ಬೌಂಡರಿ ಟ್ರಂಚೆ ಮಾಡಿದ್ದಾರೆಯೇ?.

ಹಾಗಿದ್ದರೆ ಮಾಲ್ಕಿದಾರರು ಬೌಂಡರಿ ಹಾಕಲು ಅನುಮತಿ ನೀಡಿದವರಾರು?. ಅರಣ್ಯ ಇಲಾಖೆಯವರು ಮಾಡಿದ್ದರೆ ಎಸ್ಟಿಮೇಟ್ ಟೇಡರ್ ನೀಡಲಾಗಿದೆಯಾ? ಎಂದಿದ್ದಾರೆ.
ಹಳ್ಳಿಗೇರಿ ಸರ್ವೇ ನಂ. 22 ಮೀಸಲು ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲಾಗಿದೆಯಾ?.ಫಾರೆಸ್ಟ್ ಕ್ಲಿಯರೆನ್ಸ್ ಅರಣ್ಯ ಸಂರಕ್ಷಣಾ ಕಾಯಿದೆ-1980 ರನ್ವಯ ಕ್ರಮ ಕೈಗೊಂಡಿರುವುದಿಲ್ಲ.
ಸ.ನಂ. 23,24 ರಲ್ಲಿ ಟಿ.ಎನ್. ಗೋದಾವರ್ಮನ್ ವಿರುದ್ಧ ಭಾರತ ಸರಕಾರ ಪ್ರಕರಣದಲ್ಲಿ “ಅರಣ್ಯ ಸಂರಕ್ಷಣಾ ಕಾಯ್ದೆ 1980”ರಲ್ಲಿ‌ ಹೇಳಿರುವುದನ್ನೇ ಸುಪ್ರೀಮ್ ಕೋಟ್೯ ಆದೇಶದಲ್ಲಿ ಉಲ್ಲೇಖಿಸಿದೆ.

ಅರಣ್ಯ ಶಬ್ದದ ಅರ್ಥ ಹಾಗೂ‌ ಅರಣ್ಯ ಪ್ರದೇಶ ಎಂದು‌ ಪರಿಗಣಿಸಬೇಕಾದರೆ, ಸರಕಾರಿ ‌ಹಾಗೂ ಮಾಲ್ಕಿ‌ ಜಮೀನುಗಳಲ್ಲಿ ಎಷ್ಟು ಮರಗಳು ಇರಬೇಕು‌ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಪ್ರತಿ ಹೆಕ್ಟೇರಗೆ
ಸರಕಾರಿ ‌ಜಮೀನಿನಲ್ಲಿ ಕಡಿಮೆ ಸಾಂದ್ರತೆಯ ನೈಸರ್ಗಿಕವಾಗಿ 50 ಮರಗಳಿದ್ದು, 30 ಸೆಂಟಿ ಮೀಟರ್ ಸುತ್ತಳತೆ, ಎದೆಯತ್ತರ ಇರಬೇಕು.
ಮಾಲ್ಕಿ‌ ಜಮೀನಿನಲ್ಲಿ 5 ಹೆಕ್ಟೇರ್ ಗಿಂತಲೂ‌ ಹೆಚ್ಚಿಗೆ ಜಮೀನಿನಲ್ಲಿ ಪ್ರತಿ ಹೆಕ್ಟೇರ್ ಗೆ ನೈಸರ್ಗಿಕವಾಗಿ ಬೆಳೆದ‌ 50 ಮರಗಳ ಸುತ್ತಳತೆ ‌30‌‌ ಸೆಂಟಿ ಮೀಟರ್ ಮತ್ತು ‌ಎದೆಯತ್ತರ ಇದ್ದರೆ ಅದು‌ ಅರಣ್ಯ ಎಂದು‌ ಪರಿಗಣಿಸಬೇಕು.
‌‌ಅರಣ್ಯ ಇಲಾಖೆಯ ಅಧಿಕಾರಿಗಳು ಸದರಿ ಅಂಶವನ್ನು ಪರಿಗಣಿಸದೇ ಅರಣ್ಯ ರಕ್ಷಣಾ ಕಾಯಿದೆ 1980 ಹಾಗೂ ಸರ್ವೊಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ‌ ಕಂಡು ಬರುತ್ತದೆ.
ಇದಕ್ಕೂ ಹೆಚ್ಚಾಗಿ ಅನೇಕ ವರ್ಷಗಳಿಂದ ಅರಣ್ಯದಲ್ಲಿ‌ ನೈಸರ್ಗಿಕವಾಗಿ ಬೆಳೆದ ವಿವಿಧ ಜಾತಿಯ ಔಷಧಿ, ಬೆಲೆ ಬಾಳುವ ಮರಗಳ ಮಾರಣ ಹೋಮ ನಡೆದಿದೆ.
ಇದರಿಂದ ಆ ಪ್ರದೇಶದಲ್ಲಿ ವಾಸಿಸುವ ‌ಮತ್ತು ಸಂತಾನೋತ್ಪತ್ತಿ ‌ಉದ್ದೇಶಕ್ಕೆ ಬಂದ ವನ್ಯಜೀವಿಗಳ ಬದುಕಿಗೆ ಬೆಂಕಿ ಇಟ್ಟಂತಾಗಿದೆ. ಆದ ಕಾರಣ, ಇಡೀ ಪ್ರಕರಣದಲ್ಲಿ ಕಾನೂನು ಉಲ್ಲಂಘನೆ ತಮ್ಮ ಅರಿವಿಗೆ ಇದ್ದರೂ ಅಕ್ರಮಕ್ಕೆ ಸಹಕರಿಸಿದ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಅಧಿಕಾರಿ ಡಿ.ಯತೀಶಕುಮಾರ, ವಲಯ ಅರಣ್ಯ ಅಧಿಕಾರಿ ವಿವೇಕ ಕವರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ಹುಲಗಣ್ಣವರ, ಉಪ ವಲಯ ಅರಣ್ಯ ಅಧಿಕಾರಿ ಜೀತೆಂದ್ರ ಕಾಂಬಳೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು.

ಈ ಪ್ರಕರಣ ಕುರಿತು ಈಗಾಗಲೆ ಕೇಂದ್ರ ಪರಿಸರ ,ಅರಣ್ಯ ಹಾಗೂ ಹವಾಮಾನ ಬದಲಾವಣೆ ಮಂತ್ರಾಲಯಕ್ಕೆ ದೂರು ಸಲ್ಲಿಸಲಾಗಿದೆ. ಇತ್ತ, ರಾಜ್ಯ ಸರಕಾರದ ಅಧಿಕಾರಿಗಳನ್ನು‌ ಮತ್ತು ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ‌ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಈ ಕಾರಣಗಳಿಂದ ತಪ್ಪಿತಸ್ಥರ ಮೇಲೆ ಕ್ರಮ‌ ಆಗಬೇಕೆಂಬ ಉದ್ದೇಶದಿಂದ ‌ಜಿಲ್ಲಾ ಮಟ್ಟದ ನ್ಯಾಯಾಧೀಶರಿಂದ‌‌ ತನಿಖೆ ನಡೆಸಲು ಸರಕಾರ‌‌ ಒಪ್ಪಿಸಬೇಕು.
ಸರಕಾರ‌ ಈ‌ ತೀರ್ಮಾನ ಮಾಡದಿದ್ದರೆ‌‌, ಬೀದಿಗಿಳಿದು‌ ಹೋರಾಟ ಮತ್ತು ನ್ಯಾಯಾಲಯದ ‌ಮೊರೆ‌ ಹೋಗಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷ

ರಾಘು ಶೆಟ್ಟಿ, ಸುರೇಶ ಕೋರಿ, ನವೀನ ಪ್ಯಾಟಿ, ಸುಮಿತ ಸಿಂಗ್ ಉಪಸ್ಥಿತರಿದ್ದರು.