ಧಾರವಾಡ 02 : ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ಹಾಗೂ ಡಾ. ಎಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ‘ಧಾರವಾಡದ ಶಾಲಾಶಿಕ್ಷಣ ಸಂಕಥನ’ ಪುಸ್ತಕ ಲೋಕಾರ್ಪಣೆ ಜ.04 ರಂದು ಮುಂಜಾನೆ 11 ಗಂಟೆಯಿಂದ ಇಡೀ ದಿನ ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಸಭಾಭವನದಲ್ಲಿ ನಡೆಯಲಿದೆ ಎಂದು ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಧಾರವಾಡದ ಶಾಲಾಶಿಕ್ಷಣ ಸಂಕಥನ’ ಕೃತಿಯು 1961 ರಿಂದ 2020 ರವರೆಗೆ ಧಾರಾನಗರಿಯ ಪ್ರತಿಷ್ಠಿತ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು (ಗಂಟ್ರೇಕಾ) ಕೇಂದ್ರಿತವಾದ ತಮ್ಮ 60 ವರ್ಷಗಳ ಶಿಕ್ಷಣ ಸೇವಾನೆನಪುಗಳ ವಿದ್ಯಾ ವಿಕಾಸದ ಅನೇಕ ಚಿಂತನೆಗಳನ್ನು ಒಳಗೊಂಡಿದ್ದು, ಕನ್ನಡದ ಶಕ್ತಿ ಕೇಂದ್ರವೆಂದೇ ಬಿಂಬಿತವಾದ ‘ಗಂಟ್ರೇಕಾ’ ದ ಚಾರಿತ್ರಿಕ ಸಂಗತಿಗಳ ದಾಖಲೆಯಾಗಿ ಇದು ಮೂಡಿ ಬಂದಿದೆ ಎಂದರು.

ಉದ್ಘಾಟನೆ ಗದಗ ತೋಂಟದಾರ್ಯಮಠದ ಜಗದ್ಗುರು ಡಾ. ಸಿದ್ದರಾಮ ಸ್ವಾಮೀಜಿ ಸಮಾರಂಭ ಉದ್ಘಾಟಿಸಲಿದ್ದು, ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಅಧ್ಯಕ್ಷತೆ ವಹಿಸುವರು. ಭಾರತೀಯ ತಂತ್ರಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕ ಎಸ್. ಎಂ. ಶಿವಪ್ರಸಾದ್ ‘ಧಾರವಾಡದ ಶಾಲಾಶಿಕ್ಷಣ ಸಂಕಥನ’ ಕೃತಿಯನ್ನು ಲೋಕಾರ್ಪಣೆಗೊಳಿಸುವರು. ಶಾಲಾ ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಪುಸ್ತಕ ಪರಿಚಯ ಮಾಡುವರು.

ಮಧ್ಯಾಹ್ನ 3 ಗಂಟೆಗೆ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ‘ಧಾರವಾಡದ ಶಾಲಾಶಿಕ್ಷಣ ಸಂಕಥನ’ ಕೃತಿ ಕುರಿತು ಹಿರಿಯ ಸಾಹಿತಿ ಡಾ. ಬಾಳಣ್ಣ ಸೀಗೀಹಳ್ಳಿ ಹಾಗೂ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಕಾಲೇಜು ಪ್ರಾಚಾರ್ಯ ಶಶಿಧರ ತೋಡಕರ ಸಂವಾದ ನಡೆಸಿ ಕೊಡುವರು. ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ನಿರ್ದೇಶಕ ಈಶ್ವರ ನಾಯಕ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹಾಗೂ ಅವರ ಪತ್ನಿ ಲೀಲಕ್ಕ ಬೆಲ್ಲದ ಪಾಲ್ಗೊಳ್ಳುವರು.

ಗೌರವಾರ್ಪಣೆ ಇದೇ ಸಮಾರಂಭದಲ್ಲಿ ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಹಾಗೂ ಅವರ ಪತ್ನಿ ಶಿಕ್ಷಕಿಯರ ಸರಕಾರಿ ತರಬೇತಿ ಕಾಲೇಜಿನ ವಿಶ್ರಾಂತ ಪ್ರಿನ್ಸಿಪಾಲ್ ಶಾಂತಲಾ ಹಿರೇಮಠ ಅವರ ಧಾರವಾಡದ ವಿದ್ಯಾ ವಿಕಾಸ ಸೇವಾ ಜೀವನಕ್ಕೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಹಾಗೂ ಅವರ 60 ವರ್ಷಗಳ ದಾಂಪತ್ಯದ ‘ಶಾಂತ-ಶಿಹಿ’ ನೆನಪುಗಳ ಸಂದರ್ಭ ಕೇಂದ್ರೀಕರಿಸಿ ವಿವಿಧ ಸಂಘಟನೆಗಳ ವತಿಯಿಂದ ವಿಶಿಷ್ಟವಾಗಿ ಅವರನ್ನು ಗೌರವಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿದ್ದ ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಗೌರವ ನಿರ್ದೇಶಕ, ನಿವೃತ್ತ ಡಿಡಿಪಿಐ ಎಸ್.ಬಿ. ಕೊಡ್ಲಿ ತಿಳಿಸಿದರು.

ಒಂದು ದಿನದ ಈ ಶೈಕ್ಷಣಿಕ ಸಮಾವೇಶದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವಿವಿಧ ನಿವೃತ್ತ ಅಧಿಕಾರಿಗಳು, ಪ್ರಶಿಕ್ಷಕರು, ಪ್ರಶಿಕ್ಷಣಾರ್ಥಿಗಳು, ಅಧ್ಯಾಪಕರು, ಶಿಕ್ಷಣ ಚಿಂತಕರು ಹಾಗೂ ಇತರ ಸಿಬ್ಬಂದಿ ಪಾಲ್ಗೊಂಡು ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ ಎಂದರು.

ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ವಿಜಯಲಕ್ಷ್ಮಿ ಅರ್ಕಸಾಲಿ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ಡಾ. ರೇಣುಕಾ ಅಮಲಝರಿ, ನಿವೃತ್ತ ಅಧ್ಯಾಪಕ ಮಲ್ಲಿಕಾರ್ಜುನ ಚಿಕ್ಕಮಠ, ಕನ್ನಡ ಪತ್ರಿಕಾರಂಗದ ಹಿರಿಯ ನಿಯತಕಾಲಿಕ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಸುದ್ದಿಗೋಷ್ಠಿಯಲ್ಲಿದ್ದರು.