
ಹುಬ್ಬಳ್ಳಿ 13 : ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರು ಹಾಗೂ ಬಡ ಕುಟುಂಬಗಳು ತೀವ್ರ ತೊಂದರೆಗೆ ಒಳಗಾಗಿದ್ದು, ಸರಕಾರ ತಕ್ಷಣವೇ ಸ್ಪಂಧಿಸಬೇಕೆಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಒತ್ತಾಯಿಸಿದ್ದಾರೆ.
ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿ ಮನೆ ಬಿದ್ದ ತಕ್ಷಣವೇ ಎಬಿಸಿ ಮಾದರಿಯಲ್ಲಿ 50 ಸಾವಿರ, ಮೂರು ಲಕ್ಷ ಹಾಗೂ ಐದು ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗುತ್ತಿತ್ತು. ಈಗ ಅದೇ ಮಾದರಿಯಲ್ಲಿ ಸರಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈಗಾಗಲೇ ಬಹುತೇಕ ರೈತರು ಬಿತ್ತನೆ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನ ವ್ಯಯಿಸಿದ್ದರು. ಇದೀಗ ಮಳೆಯಿಂದ ಮೊಳಕೆಯಲ್ಲೇ ಬೆಳೆ ಹಾಳಾಗಿದೆ. ಹಾಗಾಗಿ, ರೈತರ ಜೀವನಕ್ಕೆ ಉಪಯೋಗವಾಗುವ ರೀತಿಯಲ್ಲಿ ಪರಿಹಾರವನ್ನ ಕೂಡಲೇ ನೀಡಬೇಕೆಂದು ಶಂಕರ ಪಾಟೀಲ ಮುನೇನಕೊಪ್ಪ ಒತ್ತಾಯಿಸಿದ್ದಾರೆ.
ಮಳೆಯಲ್ಲಿ ಜಾನುವಾರಗಳು ಪ್ರಾಣವನ್ನ ಕಳೆದುಕೊಂಡಿದ್ದು, ಅವುಗಳಿಗೆ ತಕ್ಷಣ ಪರಿಹಾರ ನೀಡುವ ಮೂಲಕ ಅವರ ಬದುಕಿಗೆ ಆಸರೆಯಾಗಬೇಕು. ಮನೆಯಲ್ಲಿ ನೀರು ಹೋಗಿ ತೊಂದರೆಗೆ ಒಳಗಾದವರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಮಾಜಿ ಸಚಿವರು ಆಗ್ರಹಿಸಿದ್ದಾರೆ.