
ಹುಬ್ಬಳ್ಳಿ – ಧಾರವಾಡದಲ್ಲಿ ಚಿತ್ರೀಕರಣವಾದ ಹೊಸತರದ ಪ್ರೇಮಕಥೆಯೊಂದಿಗೆ ಕೌಟುಂಬಿಕ ಕಥಾಹಂದರ ಹೊಂದಿರುವ ‘ಮಾತೊಂದ ಹೇಳುವೆ’ ಚಲನಚಿತ್ರ ಜೂನ್20 ರಂದು ರಾಜ್ಯಾದ್ಯಂತ ಬಿಡುಗಡೆ – ನಾಯಕ ನಟ ಮತ್ತು ನಿರ್ದೇಶಕನಾಗಿ ಧಾರವಾಡದ ಪ್ರತಿಭೆ ಮಯೂರ್ ಕಡಿ
ಧಾರವಾಡ 14 : ಹಲವು ಹೊಸತುಗಳಿಗೆ ಹೆಸರಾಗಿರುವ ಸ್ಯಾಂಡಲ್ ವುಡ್ ಈಗ ಮತ್ತೊಂದು ಹೊಸತನಕ್ಕೆ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಮನೆಮಾತಾಗಿರುವ ‘ಮಾತೊಂದ ಹೇಳುವೆ’ ಚಿತ್ರ ಜೂನ್ 20 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹೊಸತನದ ಪ್ರೇಮಕಥೆಯೊಂದಿಗೆ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಹುಬ್ಬಳ್ಳಿ- ಧಾರವಾಡದ ಆರ್ ಜೆ ಆಗಿ ಹೆಸರು ಮಾಡಿದ್ದ ಧಾರವಾಡದ ಪ್ರತಿಭೆ ಮಯೂರ್ ಕಡಿ ನಿರ್ದೇಶಿಸಿದ್ದಾರೆ ಜೊತೆಗೆ ನಾಯಕನಾಗೂ ನಟಿಸಿದ್ದಾರೆ.
ಹುಬ್ಬಳ್ಳಿ – ಧಾರವಾಡ ಅವಳಿ ನಗರಗಳನ್ನು ವಿಶೇಷ ರೀತಿಯಲ್ಲಿ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ. ಚಿತ್ರದ ಕಥೆಯಲ್ಲಿ ನಾಯಕ ಉತ್ತರ ಕರ್ನಾಟಕದ ರೇಡಿಯೋ ಜಾಕಿ ಆಗಿರುತ್ತಾನೆ. ನಾಯಕಿ ಮೈಸೂರಿನಿಂದ ಧಾರವಾಡಕ್ಕೆ ಆಗಮಿಸುತ್ತಾಳೆ.
ಇಬ್ಬರೂ ಭೇಟಿ ಆದಾಗ ನಡೆಯುವ ರೋಚಕ ಘಟನೆಗಳೇ ಚಿತ್ರದ ಜೀವಾಳ. ಇದೊಂದು ವಿಭಿನ್ನ ಪ್ರೇಮಕಥೆ. ಕುಟುಂಬ ಸಮೇತ ನೋಡಬಹುದಾದ ಚಿತ್ರ. ಪ್ರಚಾರ ಕಾರ್ಯಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ.
ತಾರಾಗಣದಲ್ಲಿ ಮಯೂರ್ ಕಡಿ ಅವರ ಜೊತೆಯಲ್ಲಿ ಅಪೂರ್ವ ಆರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ ಸತೀಶ್ ಚಂದ್ರ, ಪ್ರತೀಕ್ ರಡ್ಡೆರ್, ವಿದ್ಯಾಸಾಗರ ದೀಕ್ಷಿತ್ ,ಕಾರ್ತಿಕ್ ಪತ್ತಾರ್ , ಸುನಿಲ್ ಪತ್ರಿ, ಜ್ಯೋತಿ ಪುರಾಣಿಕ್ ಮುಂತಾದವರಿದ್ದಾರೆ.
ಮಹೇಶ್ವರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ಮಾತೊಂದ ಹೇಳುವೆ” ಚಿತ್ರಕ್ಕೆ ಪ್ರಭು ಸವಣೂರ್ ಹಾಗೂ ಅವಿನಾಶ್ ಯು. ಎಸ್ ಅವರ ಸಹ ನಿರ್ಮಾಣವಿದೆ. ಪರ್ವತೇಶ್ ಪೋಳ ಛಾಯಾಗ್ರಹಣ, ಉಲ್ಲಾಸ್ ಕುಲಕರ್ಣಿ ಸಂಗೀತ ನಿರ್ದೇಶನ ಹಾಗೂ ಅಭಯ್ ಕಡಿ ಸಂಕಲನವಿರುವ ಈ ಚಿತ್ರಕ್ಕೆ ಪ್ರಸನ್ನ ಕುಮಾರ್ ಎಮ್ ಎಸ್ ಹಿನ್ನೆಲೆ ಸಂಗೀತ ನೀಡಿದ್ದಾರೆ.