
ಧಾರವಾಡ 14 : ಶಾಲೆಗಳು ಪ್ರಾರಂಭವಾಗಿ ಎರಡು ವಾರ ಕಳೆದರೂ, ಎಲ್ಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸದೆ ಇರುವುದನ್ನು ವಿರೋಧಿಸಿ ಇಂದು ನಗರದ ಹಳೆ ಬಸ್ ನಿಲ್ದಾಣದ ಎದುರುಗಡೆ ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಸಿಂಧು ಕೌದಿ ರವರು ಮಾತನಾಡಿ “ರಾಜದಾದ್ಯಂತ ಶಾಲೆಗಳು ಪ್ರಾರಂಭವಾಗಿ ಎರಡು ವಾರ ಕಳೆದರು, ಧಾರವಾಡದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಬಸ್ ಪಾಸ್ ವಿತರಣೆಯಾಗಿಲ್ಲ ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಅದರಲ್ಲೂ ಬಡ ವಿದ್ಯಾರ್ಥಿಗಳು ಶಾಲೆಗೆ ಬರಲು ಪ್ರತಿದಿನ ಬಸ್ ಟಿಕೆಟ್ ಶುಲ್ಕ ಪಾವತಿಗೆ ಪರದಾಡುವಂತಾಗಿದೆ. ಸುಮಾರು ವಿದ್ಯಾರ್ಥಿಗಳು ದೂರದ ಊರಿಂದ ಶಾಲೆಗಳಿಗೆ ಬರಬೇಕಾಗಿರುವುದರಿಂದ ಪ್ರತಿ ದಿನ ಪೋಷಕರು ಟಿಕೆಟ್ ಶುಲ್ಕ ಪಾವತಿಗೆ ಹಣಕೊಡಲು ಕಷ್ಟಪಡುತ್ತಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲಾಗುತ್ತಿಲ್ಲ. ಶಾಲೆಗಳು ಪ್ರಾರಂಭವಾಗುವ ಮುನ್ನವೇ ಸರ್ಕಾರವು ಪೂರ್ವ ಸಿದ್ದತೆಯನ್ನು ಮಾಡಿಕೊಂಡಿರಬೇಕಿತ್ತು ಎಂದರು.
ಆದರೆ ಸರ್ಕಾರದ ಅವ್ಯವಸ್ಥೆ ಮತ್ತು ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಈ ಕೂಡಲೇ ಎಲ್ಲಾ ವಿದ್ಯಾರ್ಥಿಗಳಿಗೂ ಬಸ್ ಪಾಸ್ ವಿತರಿಸುವಂತೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಕಾರ್ಯಕರ್ತರಾದ ಶಾಂತೇಶ್, ಚಂದ್ರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.