ಧಾರವಾಡ 28 : ಸಂಯೋಜನೆ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ 4,200 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನು ಖಂಡಿಸಿ ಇಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಖಚಾಂಜಿಗಳಾದ ಸಿಂಧು ಕೌದಿ ಅವರು ಮಾತನಾಡಿ ಇತ್ತೀಚೆಗಷ್ಟೆ ರಾಜ್ಯ ಸರ್ಕಾರವು ‘ ಹಬ್ ಅಂಡ್ ಸ್ಪೋಕ್’ ಅಡಿಯಲ್ಲಿ ಕಡಿಮೆ ಹಾಜರಾತಿ ಇರುವ ಸರ್ಕಾರಿ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ಸಂಯೋಜಿಸುವ ನಿರ್ಧಾರವನ್ನು ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸುಧಾರಣಾ ಸಮಿತಿಯನ್ನು ಸಹ ರಚಿಸಲಾಗಿದೆ. ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ರಾಜ್ಯದಲ್ಲಿ 4 ಸಾವಿರಕ್ಕೂ ಅಧಿಕ ಶಾಲೆಗಳು 10 ಮಕ್ಕಳಿಗಿಂತ ಕಡಿಮೆ ದಾಖಲಾತಿಯನ್ನು ಹೊಂದಿವೆ. ಈ ಶಾಲೆಗಳ ಭವಿಷ್ಯದ ಕುರಿತು ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ತಲೆದೊರಿದೆ. ಸರ್ಕಾರವು ರಾಜ್ಯದ ಬಡಜನರ ಮಕ್ಕಳ ಶಿಕ್ಷಣದ ಆಶಾಕಿರಣವಾಗಿರುವ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕೆಂಬುದು ಎಂದು ಆಗ್ರಹಿಸಿದರು.
ನಂತರ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಅವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ 6,000 ಕ್ಕಿಂತ ಹೆಚ್ಚು ಏಕೋಪಾಧ್ಯಾಯ ಶಾಲೆಗಳಿವೆ, 50,000 ಕ್ಕಿಂತ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ, ಶಾಲೆಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕ್ರಮಗಳನ್ನು ಕೈಗೊಳ್ಳದೆ ,ಹಾಜರಾತಿ ಕಡಿಮೆಯಿರುವ ಶಾಲೆಗಳನ್ನು ಮುಚ್ಚುವುದು, ‘ನೆಗಡಿ ಬಂದರೆ ಮೂಗು ಕತ್ತರಿಸಿದಂತೆ’! ಸರ್ಕಾರವು ತನ್ನ ಈ ಅವೈಜ್ಞಾನಿಕ ಮತ್ತು ಅಪ್ರಜಾತಾಂತ್ರಿಕ ಜನವಿರೋಧಿ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಆದ್ಯತೆಯ ಮೇರೆಗೆ ಸರ್ಕಾರವು ಶಿಕ್ಷಣಕ್ಕೆ ಬಜೆಟ್ ನಲ್ಲಿ ಅನುದಾನ ನಿಗದಿಪಡಿಸಬೇಕು, ಸರ್ಕಾರಿ ಶಾಲೆಗಳನ್ನು ಸಂಯೋಜನೆಗೊಳಿಸುವ ಬದಲು ಹಾಜರಾತಿ ಕಡಿಮೆಯಿರುವ ಶಾಲೆಗಳನ್ನು ಅವಶ್ಯಕ ಸೌಲಭ್ಯ ನೀಡಿ ರಕ್ಷಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಶಾಲೆಗಳ ಮುಚ್ಚುವಿಕೆಯ ವಿರುದ್ಧ ಬಲಿಷ್ಠ ಹೋರಾಟಗಳನ್ನು ಸಂಘಟಿಸುತ್ತೇವೆ. ಶಾಲೆಗಳಲ್ಲಿ ಹೋರಾಟದ ಸಮಿತಿಗಳನ್ನು ರಚಿಸಿ, ಪೋಷಕರ ಸಭೆಗಳನ್ನು ಸಂಘಟಿಸುತ್ತಿದ್ದೇವೆ
ಈ ಹೋರಾಟದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾ ಕಾರ್ಯಕರ್ತರಾದ ಶಾಂತೇಶ್, ರವಿ, ಸಿದ್ದು , ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.