ಧಾರವಾಡ : ಕೆಲವರು ವೃತ್ತಿಯಿಂದ ನಿವೃತ್ತರಾದರೂ ಸಮಾಜ ಸೇವೆಯ ಪ್ರವೃತ್ತಿ ಮಾತ್ರ ನಿರಂತರವಾಗಿರುತ್ತದೆ. ಅಂತಹ ಸಾಲಿನಲ್ಲಿ ಪ್ರೊ.ವಸುದೇವ ಪರ್ವತಿ ನಿಲ್ಲುತ್ತಾರೆ ಎಂದು ಅಸೋಸಿಯೇಶನ್‌ ಆಫ್‌ ಕನಸ್ಟಲಿಂಗ್‌ ಎಂಜಿನಿಯರ್ಸ್‌ ಅಧ್ಯಕ್ಷ ಸುನೀಲ ಬಾಗೇವಾಡಿ ಹೇಳಿದರು.

ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಪ್ರೊ.ವಸುದೇವ ಪರ್ವತಿ ಅವರ ಗೆಳೆಯರ ಬಳಗ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಅಭಿನಂದನೆಯಲ್ಲಿ ಅವರು ಮಾತನಾಡಿ, ಪರ್ವತಿ ಅವರನ್ನು ಇಷ್ಟು ವರ್ಷಗಳ ಕಾಲ ಗಮನಿಸಿದ್ದು ತಮ್ಮ ಶೈಕ್ಷಣಿಕ ಕ್ಷೇತ್ರದ ಜೊತೆಗೆ ಸಮಾಜ ಸೇವೆ ಅದರಲ್ಲೂ ಪರಿಸರಕ್ಕೆ ಪೂರಕ ಕಾರ್ಯಗಳಿಗೆ ತುಂಬ ಸಹಕಾರ ನೀಡಿದ್ದಾರೆ ಎಂದರು.
ಪರಿಸರವಾದಿ ಪಿ.ವಿ. ಹಿರೇಮಠ ಮಾತನಾಡಿ, ಧಾರವಾಡದ ಪರಿಸರ ಉಳಿಸಲು ನಮ್ಮೊಂದಿಗೆ ಪ್ರೊ. ಪರ್ವತಿ ಅವರು ಸಹ ಕೈಜೋಡಿಸಿದ್ದಾರೆ. ಅಗತ್ಯ ಬಿದ್ದಾಗ ತಮ್ಮ ಕಾಲೇಜಿನ ಮಕ್ಕಳನ್ನು ಕರೆದುಕೊಂಡು ಬಂದು ಪರಿಸರದ ನಡೆಗೆ ಸಹಕಾರ ನೀಡಿದ್ದಾರೆ ಎಂದರು.

ಎಸ್‌ಡಿಎಂ ಎಂಜನಿಯರಿಂಗ್‌ ಕಾಲೇಜು ನಿವೃತ್ತ ಪ್ರಾಚಾರ್ಯ, ಐಐಐಟಿ ಡೀನ್‌ ಡಾ.ಕೆ. ಗೋಪಿನಾಥ, ಪ್ರೊ. ಪರ್ವತಿ ಅವರೊಂದಿಗೆ ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಇಡೀ ದೇಶದಲ್ಲಿ ಎಸ್‌ಡಿಎಂ ಕಾಲೇಜು ಉತ್ತಮ ಸ್ಥಾನ ಪಡೆಯಲು ನಮ್ಮಿಬ್ಬರ ಪಾತ್ರ ಸಾಕಷ್ಟಿದೆ. ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮಾತ್ರವಲ್ಲದೇ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಕಾಲೇಜು ಕೀರ್ತಿ ಹೆಚ್ಚಿಸಿದ್ದು, ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಹಿರಿಯ ಪತ್ರಕರ್ತ ಗುರುರಾಜ ಜಮಖಂಡಿ, ಗೆಳೆಯರ ಬಳಗದ ಸತೀಶ ಕೆ.ಎಸ್‌., ಕೇಶವ ಜೋಶಿ, ಡಾ. ಕಿರಣ ಶಿಂಧೆ ಹಾಗೂ ಮಾರ್ತಾಂಡಪ್ಪ ಕತ್ತಿ ಅಭಿನಂದನಾ ಪರ ಮಾತನಾಡಿದರು.