ಧಾರವಾಡ 26 : ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲಬೇಕಾದರೆ ದೇಶದ ಮತದಾರರ ಪಾತ್ರ ಬಹಳ ಮುಖ್ಯ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಚುನಾವಣೆಯಲ್ಲಿ ಚಲಾಯಿಸುವದು ಪ್ರತಿಯೊಬ್ಬರ ಹಕ್ಕಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಮಹೇಶ ಹುಲೆಣ್ಣವರ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಕರ್ನಾಟಕ ಕಲಾ ಕಾಲೇಜು, ರಾಜ್ಯಶಾಸ್ತ್ರ ವಿಭಾಗ ಮತ್ತು ಕಾಲೇಜಿನ ಎನ್.ಎಸ್.ಎಸ್ ಘಟಕಗಳ ಸಹಯೋಗದಲ್ಲಿ ಕಾಲೇಜಿನ ಫ್ಯಾರನ್ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ದೇಶದ ಮತದಾರರು ಸರಕಾರ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದ ಅವರು ಮತದಾನದ ಮಹತ್ವವನ್ನು ಇಂದಿನ ವಿದ್ಯಾರ್ಥಿಗಳು ಅರಿಯಬೇಕು ಎಂದ ಅವರು ಮಾದರಿ ದೇಶವನ್ನಾಗಿ ರೂಪಿಸಲು ಸಾಧ್ಯ ಎಂದರು.
ಜಿಮಖಾನದ ಉಪಾಧ್ಯಕ್ಷರಾದ ಡಾ.ಐ.ಸಿ.ಮುಳಗುಂದ ಮಾತನಾಡಿ ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹೆಚ್ಚು ಯುವ ಮತದಾರರನ್ನು ಪ್ರೋತ್ಸಾಹಿಸುವ ಸಲುವಾಗಿ, ಭಾರತ ಸರ್ಕಾರ “ರಾಷ್ಟ್ರೀಯ ಮತದಾರರ ದಿನ” ವಾಗಿ ಪ್ರತಿ ವರ್ಷ ಜನವರಿ 25ರಂದು ಆಚರಿಸಲು ನಿರ್ಧರಿಸಿದೆ. ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು ಇದನ್ನು 25 ಜನವರಿ ರಂದು ಪ್ರಾರಂಭಿಸಲಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಬಿ.ಕರಡೋಣಿ ಮಾತನಾಡಿ ಪ್ರಜೆಗಳೇ ಪ್ರಭುಗಳು ಆದ್ದರಿಂದ ದೇಶದ ಸಕ್ರಿಯವಾದ ಬೆಳವಣಿಗೆಯಲ್ಲಿ ಮತದಾರರ ಪಾತ್ರ ಬಹಳ ಇದೆ ಎಂದ ಅವರು ಇಂದಿನ ಯುವಕರೇ ನಾಳಿನ ಭವಿಷ್ಯತ್ತಿನ ಪ್ರಜೆಗಳು ಹಾಗಾಗಿ ಮತದಾನದ ಕುರಿತು ಇಂದಿನ ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಅಕಾಡೆಮಿಕ್ ಡೀನ್ ಡಾ.ಮುಕುಂದ ಲಮಾಣಿ, ರಾಜ್ಯಶಾಸ್ತ್ರದ ಮುಖ್ಯಸ್ಥರಾದ ಡಾ.ಎಂ.ಬಿ.ದಳಪತಿ,
ಡಾ.ಸುರೇಶ ಹುಲ್ಲಣ್ಣವರ, ಡಾ.ಸತೀಶ್ ಜಾಧವ, ಡಾ.ಎಸ್.ಎ.ಕೊಳೂರ, ಡಾ.ವೀರೇಶ ಸುಣಗಾರ, ಡಾ.ಎಸ್.ಎಸ್.ಗಿರಿ ಸೇರಿದಂತೆ ಇತರರು ಇದ್ದರು.