
ಕ್ರಿಯಾಶೀಲರಾಗಿ ಸಮನ್ವಯತೆಯಿಂದ ಕೆಲಸ ಮಾಡಿ
ಹಾಸನ, ಫೆ.11 : ಕಾರ್ಮಿಕ ಇಲಾಖೆ ಅಧಿಕಾರಿಗಳು ಕ್ರಿಯಾಶೀಲರಾಗಿ ಸಮನ್ವಯತೆಯಿಂದ ಕೆಲಸ ಮಾಡುವಂತೆ ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುವ ಮುನ್ನ ಎಚ್ಚರವಹಿಸಿ ಪರಿಶೀಲನೆ ಮಾಡುವಂತೆ ಸೂಚಿಸಿದರು.
ಹಾಸನ ಜಿಲ್ಲೆಗೆ ಇದುವರೆಗೆ 1,10,000 ಕಟ್ಟಡ ಕಾರ್ಮಿಕರಿಗೆ 38 ಕೋಟಿ ರೂಗಳ ಆರ್ಥಿಕ ಸೌಲಭ್ಯ ನೀಡಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿ ಮಾಡಿ ಅವರ ಸಲಹೆಗಳನ್ನು ಪಡೆದು ಕೆಲಸ ನಿರ್ವಹಿಸಬೇಕು ಎಂದರು.
ಕಾರ್ಮಿಕರಿಗೆ ನಿಗದಿತ ಕನಿಷ್ಠ ವೇತನ ಪಾವತಿ ಮಾಡದೆ ಇರುವ ಗುತ್ತಿಗೆದಾರರ ಪರವಾನಗಿ ಹಿಂಪಡೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೆ, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದರು.
ಹಾಸನ ಜಿಲ್ಲೆಯಲ್ಲಿ ಹೊರಗುತ್ತಿಗೆ ನೌಕರರ ಸೊಸೈಟಿ ರಚಿಸಿ ನೋಂದಣಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸೊಸೈಟಿಗೆ 4ಜಿ ವಿನಾಯಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಪ್ಲಾಂಟೇಶನ್ ಮಾಲಿಕರೊಂದಿಗೆ ಚರ್ಚಿಸಿ ನಡೆಸಿ ಆಸಕ್ತಿ ಇರುವ ನರೇಗಾ ಕಾರ್ಮಿಕರನ್ನು ಪ್ಲಾಂಟೇಶನ್ ಕೆಲಸ ಮಾಡಲು ಬಳಸಿಕೊಳ್ಳ ಬಹುದಾಗಿದೆ ಈ ನಿಟ್ಟಿನಲ್ಲಿ ಗಮನಹರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹೊರ ರಾಜ್ಯದ ಕಾರ್ಮಿಕರ ಅಗತ್ಯವಿರುವುದಿಲ್ಲ ಜೊತೆಗೆ ಸ್ಥಳೀಯ ಕಾರ್ಮಿಕರಿಗೆ ಕೆಲಸ ದೊರಕುತ್ತದೆ ಎಂದು ತಿಳಿಸಿದರು.
ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಕಾರ್ಮಿಕ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಈಗಾಗಲೇ ನಿರ್ದೇಶನ ನೀಡಲಾಗಿದೆ ಆದರೂ ಸ್ಥಳೀಯ ಶಾಸಕರನ್ನು
ಭೇಟಿ ಮಾಡಿಲ್ಲ ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೀರಿ ಎಂದು ಕಾರ್ಮಿಕ ನಿರೀಕ್ಷಕರಿಗೆ ಎಚ್ಚರಿಸಿದರು.
ಬಾಲ ಕಾರ್ಮಿಕರ ಹಾಗೂ ಕಿಶೋರ ಕಾರ್ಮಿಕರ ಪತ್ತೆಗಾಗಿ ಅನಿರೀಕ್ಷಿತ ಭೇಟಿ ನೀಡಿ. ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಕೊಂಡಿರು ವವರು ಸವಲತ್ತು ಪಡೆಯುತ್ತಿದ್ದರೆ ಸರಿ, ಕೆಲವು ಕಟ್ಟಡ ಕಾರ್ಮಿಕರಲ್ಲದವರು ಸವಲತ್ತು ಪಡೆಯುತ್ತಿದ್ದರೆ ಅಂತಹ ಕಾರ್ಡ್ ವಜಾ ಮಾಡುವಂತೆ ಸೂಚಿಸಿದರು.
ಆಶಾದೀಪ ಕಾರ್ಯಕ್ರಮದಡಿ ಸಣ್ಣ ಕೈಗಾರಿಕೆಗಳಲ್ಲಿ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಕೆಲಸ ನೀಡಿದರೆ ಪ್ರತಿ ತಿಂಗಳಿಗೆ 6000 ರೂ ಶಿಷ್ಯ ವೇತನವನ್ನು 2 ವರ್ಷದವರೆಗೆ ನೀಡಲಾಗುವುದು. ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ ಜೊತೆಗೆ ಸಣ್ಣ ಕೈಗಾರಿಕೆ ಬೆಳವಣಿಗೆಗೆ ಸಹಾಯ ಮಾಡಿದಂತಾಗುತ್ತದೆ ಎಂದರು.
ಎರಡು ಅಥವಾ ಮೂರು ಜಿಲ್ಲೆಗಳನ್ನು ಸೇರಿಸಿ ಇ.ಎಸ್.ಐ ವಿಶೇಷ ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶವಿದೆ. ಈ ನಿಟ್ಟಿನಲ್ಲಿ ಸ್ಥಳ ಕೋರಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಸ್ವರೂಪ್ ಪ್ರಕಾಶ್, ಕಾರ್ಮಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಡಿ, ಕಾರ್ಮಿಕ ಆಯುಕ್ತರಾದ ಡಾ.ಹೆಚ್.ಎನ್. ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಉಪಸ್ಥಿತರಿದ್ದರು.