
ಧಾರವಾಡ 10 : ನಗರದ ಮರಾಠ ವಿದ್ಯಾ ಪ್ರಸಾರಕ ಮಂಡಳದ ಛತ್ರಪತಿ ಶಿವಾಜಿ ಮಹಾರಾಜ ಕಲಾ ಮತ್ತು ವಾಣಿಜ್ಯ ಪದವಿ-ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆವರಣದ ಮೈದಾನದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಮಹಾವಿದ್ಯಾಲಯಗಳ ಪುರುಷರ ಪ್ರಥಮ ವಲಯ ಕಬಡ್ಡಿ ಪಂದ್ಯಾವಳಿಯಲ್ಲಿ ಕವಿವಿ ಬಿಪಿಇಡಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಕವಿವಿ ಬಿಪಿಇಡಿ ತಂಡ ಹಾಗೂ ಶಿವಾಜಿ ಕಾಲೇಜಿನ ತಂಡದ ನಡುವಿನ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿದ್ದು, ಕೊನೆಯ 4 ಸೆಕೆಂಡ್ ಅವಧಿಯಲ್ಲಿ 2 ಅಂಕ ಗಳಿಸುವ ಮೂಲಕ ಬಿಪಿಇಡಿ ತಂಡ ವಿನ್ನರ್ ಪಟ್ಟ ಅಲಂಕರಿಸಿದರೆ, ಛತ್ರಪತಿ ಶಿವಾಜಿ ಮಹಾರಾಜ ಪದವಿ ಕಾಲೇಜು ರನ್ನರ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಧಾರವಾಡ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಹಾಗೂ ಕೆ.ಇ.ಬೋರ್ಡ್ ಪದವಿ ಕಾಲೇಜು ತಂಡಗಳ ನಡುವೆ ಮೂರನೇ ಸ್ಥಾನಕ್ಕೆ ನಡೆದ ಅತ್ಯಂತ ರೋಚಕ ಪಂದ್ಯದಲ್ಲಿ ಕೆ.ಇ. ಬೋರ್ಡ್ ಮಹಾವಿದ್ಯಾಲಯ ಮೇಲು ಗೈ ಸಾಧಿಸಿದೆ.
ಕೆಯುಡಿ ಬಿಪಿಇಡಿ ಕಾಲೇಜು ಮತ್ತು ಛತ್ರಪತಿ ಶಿವಾಜಿ ಮಹಾರಜ ಪದವಿ ಕಾಲೇಜು ತಂಡಗಳು ಅಂತರ ವಿಶ್ವವಿದ್ಯಾಲಯಗಳ ಕಬಡ್ಡಿ ಪಂದ್ಯಾವಳಿಗೆ ಅರ್ಹತೆ ಪಡೆದವು. ಶಿವಾಜಿ ಕಾಲೇಜಿನ ಸಚಿನ್ ಅತ್ಯುತ್ತಮ ಆಲ್ ರೌಂಡರ್, ಕೆ.ಇ. ಬೋರ್ಡ್ ಕಾಲೇಜಿನ ಗಜಾ ಅತ್ಯುತ್ತಮ ರೈಡರ್, ಕೆಯುಡಿ ಬಿಪಿಇಡಿ ಕಾಲೇಜಿನ ಕಾರ್ತಿಕ ಗೌಡ ಅತ್ಯುತ್ತಮ ಡಿಪೆಂಡರ್ ಪ್ರಶಸ್ತಿ ಭಾಜನರಾದರು.
ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನಿಸಿದ ಮರಾಠಾ ಮಂಡಳದ ಕಾರ್ಯಾಧ್ಯಕ್ಷ ಸುಭಾಸ ಶಿಂಧೆ ಮಾತನಾಡಿ, ಸೋಲೇ ಗೆಲವಿನ ಸೋಪಾನ. ಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ ಸೋತವರು ಭವಿಷ್ಯದಲ್ಲಿ ಗೆಲುವಿಗೆ ಪ್ರಯತ್ನ ಮಾಡಬೇಕು. ಉನ್ನತ ಸಾಧನೆ ಮೂಲಕ ಸಂಸ್ಥೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶಿವಾನಂದ ನಡಕಟ್ಟಿ, ವಿದ್ಯಾರ್ಥಿ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆ ಸಹಕಾರಿ. ಮುಖ್ಯವಾಗಿ ಕ್ರೀಡೆಯಲ್ಲಿ ಯಶಸ್ಸು ಗಳಿಸಲು ತಾಳ್ಮೆ ಬಹಳ ಮುಖ್ಯ. ವಿದ್ಯಾರ್ಥಿಗಳು ಕಲಿಸಿದ ಗುರು ಹಾಗೂ ಕಲಿತ ಸಂಸ್ಥೆಗೆ ವಿದೆಯರಾಗಿ ಇರಬೇಕು ಎಂದರು.
ಸಮಾರಂಭದಲ್ಲಿ ಮರಾಠಾ ಮಂಡಳ ಗೌರವ ಕಾರ್ಯದರ್ಶಿ ರಾಜು ಬಿರಜೆನ್ನವರ, ಸಹ ಕಾರ್ಯದರ್ಶಿ ಮಲ್ಲೇಶಪ್ಪ ಶಿಂಧೆ, ಕಾಲೇಜು ಸುಧಾರಣಾ ಸಮಿತಿ ಅಧ್ಯಕ್ಷ ಶಿವಾಜಿ ಸೂರ್ಯವಂಶಿ, ನಿರ್ದೇಶಕರಾದ ಸುನೀಲ ಮೋರೆ, ರಾಜು ಕಾಳೆ, ಸುಭಾಸ ಪವಾರ, ದತ್ತಾತ್ರೇಯ ಮೋಟೆ, ಈಶ್ವರ ಪಾಟೀಲ, ಎ ಬಿ ಬಾಬರ ಮೀನಾಕ್ಷಿ ಘಾಟಿಗೆ ಪ್ರಾಚಾರ್ಯ ಎಂ.ಎಸ್. ಗಾಣಿಗೇರ, ದೈಹಿಕ ಶಿಕ್ಷಣ ನಿರ್ದೇಶಕ ವಿನಾಯಕ ದಾವಣೆ, ಇದ್ದರು.