ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ನಾಯಕತ್ವ ಗುಣವನ್ನು ರೂಢಿಸಿಕೊಳ್ಳಿ: ಪ್ರಾಚಾರ್ಯ ಲಿಂಗರಾಜ ಎ.ಬೆಲ್ಲದ

ಧಾರವಾಡ ಜನೇವರಿ.01: ವಿದ್ಯಾರ್ಥಿಗಳು ಜೀವನದಲ್ಲಿ ಕೌಶಲ್ಯ, ಆತ್ಮವಿಶ್ವಾಸ ಮತ್ತು ಉತ್ತಮ ನಾಯಕತ್ವದ ಗುಣವನ್ನು ರೂಡಿಸಿಕೊಳ್ಳಬೇಕೆಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಲಿಂಗರಾಜ ಎ. ಬೆಲ್ಲದ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಕೋಶ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಎನ್.ಎಸ್.ಎಸ್. ಬಾಲಕ ಮತ್ತು ಬಾಲಕಿಯರ ನಾಯಕತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ ವಿಷಯಗಳನ್ನು ಜೀವನದಲ್ಲಿ ರೂಢಿಸಿಕೊಂಡು ಸುತ್ತಮುತ್ತಲಿನ ಜನರಿಗೂ ತಿಳಿಸಿಕೊಡಬೇಕು. ನಾಯಕತ್ವದ ಗುಣವನ್ನು ಹೊಂದಿರುವ ವ್ಯಕ್ತಿ ಉತ್ತಮವಾದ ರಂಗದಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಬೆಳಗಾವಿ ವಿಭಾಗ ಮಟ್ಟದ ಎನ್.ಎಸ್.ಎಸ್. ಬಾಲಕ ಮತ್ತು ಬಾಲಕಿಯರ ನಾಯಕತ್ವ ತರಬೇತಿ ಶಿಬಿರದಲ್ಲಿ ವಿಜಯಪುರ, ಗದಗ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ ಹಾಗೂ ಹಾವೇರಿ ಸೇರಿ ಒಟ್ಟು 8 ಜಿಲ್ಲೆಯ 300 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಸುಶ್ಮಾ ಮಳಿಮಠ, ಶ್ರೀ ಹಿರೇಮಲ್ಲೂರ ಈಶ್ವರನ್ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಶಶಿಧರ ತೋಡಕರ, ಸೃಷ್ಟಿ ಪಿಯು ಕಾಲೇಜಿನ ಪ್ರಾಚಾರ್ಯ ರವಿ ಕೆಮ್ಮನ್ನವರ, ಬೆಳಗಾವಿ ವಿಭಾಗೀಯ ಎನ್.ಎಸ್.ಎಸ್. ಅಧಿಕಾರಿ ರವಿಕುಮಾರ ಅಂಬೋರೆ, ಹಾಗೂ ವಿಜಯಪುರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಭಾಗೀಯ ಅಧಿಕಾರಿ ಎಮ್.ಎಸ್.ಮುಲ್ಲಾ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಧಾರವಾಡ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಶಿಬಿರಾಧಿಕಾರಿ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ರಾಜಕುಮಾರ ಎಸ್. ಭಜಂತ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿ ಹಾಗೂ ಸಹಾಯಕ ಶಿಬಿರಾಧಿಕಾರಿ ಆರ್.ಬಿ.ಚವ್ಹಾಣ, ಹಾಗೂ ಶ್ರೀ ಸಾಯಿ ಪಿಯು ಕಾಲೇಜಿನ ಪ್ರಾಚಾರ್ಯ ನಾಗರಾಜ ಶಿರೂರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ವಿವಿಧ ಜಿಲ್ಲೆಯ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೆಲಸಗಳನ್ನು ಜವಾಬ್ದಾರಿಯಿಂದ ನಿಭಾಯಿಸುವ ಗುಣ ಮತ್ತು ಮತ್ತೊಬ್ಬರ ಮೇಲೆ ಅವಲಂಬನೆ ಆಗದೆ ಸ್ವಯಂ ಪ್ರೇರಿತವಾಗಿ ಮುನ್ನಡೆಯುವ ಮನೋಭಾವದ ಜೊತೆಗೆ ಶಿಸ್ತು, ಸಮಯಪ್ರಜ್ಞೆ, ಕ್ರಿಯಾಶೀಲತೆ, ನಾಯಕತ್ವದ ಗುಣ, ಮತ್ತು ಕೆಲವು ಮೌಲ್ಯಯುತವಾದ ನಂಬಿಕೆ, ಆತ್ಮವಿಶ್ವಾಸ, ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಮನೋಭಾವವನ್ನು ಈ ಶಬಿರದಿಂದ ತಿಳಿದುಕೊಂಡಿದ್ದೇನೆ ಎಂದು ಶಿಬಿರದಲ್ಲಿ ಭಾಗವಹಿಸಿದ್ದ ಬಾಗಲಕೋಟ ಜಿಲ್ಲೆಯ ವಿದ್ಯಾರ್ಥಿನಿ ಅನ್ನಪೂರ್ಣ ಜಾಡರ್ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಬಿರಾರ್ಥಿಗಳಾಗಿದ್ದ ವಿದ್ಯಾರ್ಥಿನಿಯರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

  • Related Posts

    ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

    ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    RSS
    Follow by Email
    Telegram
    WhatsApp
    URL has been copied successfully!