ಕೆಆಯ್‌ಎಡಿಬಿ ವಿಶೇಷ ಭೂ-ಸ್ವಾಧೀನ ಅಧಿಕಾರಿಗಳ ಕಚೇರಿ ಎದುರು ರೈತರು ಪ್ರತಿಭಟನೆ.

ಧಾರವಾಡ : ಧಾರವಾಡ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ರೈತರಿಗೆ ಭೂ ಪರಿಹಾರದ ಹಣ ಪಾವತಿಸಲು ವಿಳಂಬ ಮತ್ತು ರೈತರಿಂದ ಲಂಚ ಕೇಳುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜನಜಾಗೃತಿ ಸಂಘದ ನೇತೃತ್ವದಲ್ಲಿ ಇಲ್ಲಿನ ಕೆಆಯ್‌ಎಡಿಬಿ ವಿಶೇಷ ಭೂ-ಸ್ವಾಧೀನ ಅಧಿಕಾರಿಗಳ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.

ಬಿ.ಎಮ್.ಆಯ್.ಸಿ. ಯೋಜನೆಗಾಗಿ ಧಾರವಾಡ ತಾಲೂಕಿನ ಕಲ್ಲಾಪೂರ, ಹೊಸವಾಳ, ವೆಂಕಟಾಪೂರ, ಕುಮ್ಮನಾಯಕನಕೊಪ್ಪ, ಮದಿಕೊಪ್ಪ, ಶಿಂಗನಹಳ್ಳಿ, ಕೋಟೂರ ಗ್ರಾಮಗಳ ಒಟ್ಟು 2170 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಪಡಿಸಿಕೊಂಡಿದೆ.

ಈ ಗ್ರಾಮಗಳ ರೈತರು ಭೂ ಪರಿಹಾರದ ಹಣ ಪಡೆದುಕೊಳ್ಳಲು ದಾಖಲಾತಿಗಳನ್ನು ಸಲ್ಲಿಸಿ ಕಚೇರಿಗೆ ಪದೇ ಪದೇ ಅಲೆದಾಡುತ್ತಿದ್ದಾರೆ. ಆದರೆ ಈ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಪರಿಹಾರದ ಹಣವನ್ನು ಪಾವತಿಸಲು ಶೇ.5 ರಷ್ಟು ಕಮೀಶನ್ ಕೇಳುತ್ತಿದ್ದಾರೆ. ನೊಂದಣಿ ರಿಯಾಯಿತಿ ಪ್ರಮಾಣ ಪತ್ರ ನೀಡಲು 30 ಸಾವಿರ ರೂಪಾಯಿಗಳನ್ನು ಕೊಡುವಂತೆ ಕೇಳುತ್ತಿದ್ದಾರೆ. ಈ ಲಂಚವನ್ನು ನೀಡದ ರೈತರಿಗೆ ಅಲ್ಲಿನ ಸಿಬ್ಬಂದಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ.

ಸ್ವಾಧೀನ ಪಡಿಸಿಕೊಂಡ ಭೂ ಪರಿಹಾರದ ಹಣವನ್ನು ಪಡೆಯಲು 21 ದಾಖಲಾತಿಗಳನ್ನು ತಯಾರಿಸಿ ಸಲ್ಲಿಸುವಂತೆ ಭೂ ಮಾಲೀಕರಿಗೆ ತಿಳಿಸಲಾಗಿದೆ. ಈ ದಾಖಲಾತಿಗಳನ್ನು ತಯಾರಿಸಲು ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳಿಂದ ತಹಶೀಲ್ದಾರ ವರೆಗಿನ ಅಧಿಕಾರಿಗಳು ಪ್ರತಿ ಕಡತಕ್ಕೆ 50 ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದು, ಈ ಅವ್ಯವಹಾರದಲ್ಲಿ ಕೆ.ಆಯ್.ಎ.ಡಿ.ಬಿ. ಕಚೇರಿ ಸಿಬ್ಬಂದಿ ಮತ್ತು ತಹಶೀಲ್ದಾರ ಕಚೇರಿಯ ಸಿಬ್ಬಂದಿ ಶಾಮೀಲಾಗಿದ್ದಾರೆ.

ಲಂಚವನ್ನು ನೀಡದ ರೈತರ ಕಡತಗಳಲ್ಲಿ ಅನವಶ್ಯಕ ನೆಪಗಳನ್ನು ಹೇಳಿ ಪರಿಹಾರದ ಹಣವನ್ನು ಪಾವತಿಸಲು ವಿಳಂಬ ಮಾಡುತ್ತಿದ್ದಾರೆ.
ಈಗಾಗಲೇ ಕೆ.ಆಯ್.ಎ.ಡಿ.ಬಿ ಹಗರಣದಲ್ಲಿರುವ ಆರೋಪಿಗಳ ಒಂದೇ ಜಮೀನಿಗೆ ಎರಡು ಬಾರಿ ಹಣವನ್ನು ಸಂದಾಯ ಮಾಡಿಸಿಕೊಂಡ ಆರೋಪಿಗಳ ಜೊತೆ ವಿಶೇಷ ಭೂಸ್ವಾಧೀನ ಕಚೇರಿಯ ಅಧಿಕಾರಿಗಳು ಮತ್ತೇ ಶಾಮೀಲಾಗಿದ್ದಾರೆ. ಅವರು ಹೇಳಿದ ರೈತರಿಗೆ ಮಾತ್ರ ಹಣ ಪಾವತಿಸಲಾಗುತ್ತಿದೆ.

ಇದಕ್ಕೆ ಪೂರಕ ಎನ್ನುವಂತೆ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ವೀರನಗೌಡ ಪಾಟೀಲ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಕುಳಿತಿರುವ ವಿಡಿಯೋ ದಾಖಲೆ ಕೂಡ ಇದೆ.

ಈ ರೀತಿ ಭೂ ಪರಿಹಾರ ಪಾವತಿಸುವಲ್ಲಿ ರೈತರಿಗೆ ಆಗುತ್ತಿರುವ ತೊಂದರೆ ಮತ್ತು ಅನ್ಯಾಯವನ್ನು ಸರಿಪಡಿಸಲು ಲಂಚ ಪಡೆಯುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು.

ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ 7 ದಿನಗಳ ಒಳಗಾಗಿ ಭೂಸ್ವಾಧೀನ ಪಡಿಸಿಕೊಂಡ ಪರಿಹಾರ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ಶೀಘ್ರ ಪರಿಹಾರದ ಹಣವನ್ನು ಪಾವತಿಸಲು ಆಗದಿದ್ದಲ್ಲಿ ನಮ್ಮ ಜಮೀನುಗಳನ್ನು ಭೂ ಸ್ವಾಧೀನದಿಂದ ಕೈಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಸ್‌ಎಲ್‌ಓ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದರು.

ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬಸವರಾಜ ಸಾವಳಗಿ, ಮಹ್ಮದಗೌಸ ಜಮಾದಾರ, ರಾಕೇಶ ರಾಮನಗೌಡರ, ಭೀಮಪ್ಪ ಮಾದರ, ಮಂಜುನಾಥ ಪಾಟೀಲ, ಯಲ್ಲಪ್ಪ ಅಂಗಡಿ
ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.