“ಶಿಕ್ಷಣ ಪ್ರೇಮಿ ಸಾವಮ್ಮ ಹೊಂಗಲ ಇನ್ನಿಲ್ಲ” ತಮ್ಮೂರಿನ ಶಾಲೆಯ ಶಿಕ್ಷಕರಿಗೆ ಸತತ 42 ವರ್ಷಗಳವರೆಗೆ ತಮ್ಮ ಜೀವಿತಾವಧಿಯವರೆಗೂ ಅನ್ನದಾನದ ಮೂಲಕ ತಮ್ಮ ಗ್ರಾಮದ ಮಕ್ಕಳ ಶಿಕ್ಷಣ ಕಲಿಕೆಗೆ ಪ್ರೋತ್ಸಾಹ ನೀಡಿದ್ದ ಧಾರವಾಡ ತಾಲೂಕಿನ ಜೀರಿಗವಾಡ ಗ್ರಾಮದ ಶಿಕ್ಷಣ ಪ್ರೇಮಿ ಸಾವಮ್ಮ ಈರಪ್ಪ ಹೊಂಗಲ (92) ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ. ಇಬ್ಬರು ಪುತ್ರರನ್ನು ಹೊಂದಿದ್ದ ಇವರಿಗೆ ಈಗ ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದಾರೆ.
ಅತ್ಯಂತ ಸರಳ, ಸಜ್ಜನ, ಸಾತ್ವಿಕರಾಗಿದ್ದ ಇವರು, ತಮ್ಮ ಊರಿನ ಮಕ್ಕಳ ಶಿಕ್ಷಣ ಕಲಿಕೆಗೆ ಯಾವುದೇ ತೊಂದರೆ ಆಗಬಾರದೆಂದು ತಮ್ಮೂರಿನ ಶಾಲೆಯ ಶಿಕ್ಷಕರಿಗೆ ನಿರಂತರ ಅನ್ನದಾಸೋಹ ಮಾಡುತ್ತಾ ಬಂದಿರುವ ಈ ಅಜ್ಜಿ ಎಲ್ಲರಿಗೂ ಮಾದರಿಯಾಗಿದ್ದರು. ಕೇವಲ ಶಿಕ್ಷಕರಿಗೆ ಅಷ್ಟೇ ಅಲ್ಲದೇ ಮನೆಗೆ ಬರುವ ಪ್ರತಿಯೊಬ್ಬರಿಗೂ ಆದರಿಸುವ ಮೂಲಕ “ಅತಿಥಿ ದೇವೋಭವ” ಎಂಬ ಭವ್ಯ ಭಾರತೀಯ ಸಂಸ್ಕೃತಿಯನ್ನು ಈ ಅಜ್ಜಿ ಸಾಕಾರಗೊಳಿಸಿದ್ದರು. ಇವರ ಸಾಮಾಜಿಕ ಕಳಕಳಿಯ ಕುರಿತು ನಮ್ಮ ಹೆಮ್ಮೆಯ ಸಂಯುಕ್ತ ಕರ್ನಾಟಕ ಪತ್ರಿಕೆಯು 2017 ನವೆಂಬರ 13 ರಂದು “ಅನ್ನದಾನದ ಮೂಲಕ ಶಿಕ್ಷಣ ಅಬಾಧಿತ” ಎಂಬ ಶೀರ್ಷಿಕೆಯಲ್ಲಿ ರಾಜ್ಯವ್ಯಾಪಿ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಹೋಗಿ ಬನ್ನಿ ಅಜ್ಜಿ ನಿಮ್ಮ ನಿಸ್ವಾರ್ಥ ಬದುಕು ನಮೆಲ್ಲರಿಗೂ ಪ್ರೇರಣಾದಾಯಕವಾಗಿದೆ.
ನಿಮಗೆ ನನ್ನ ಭಾವಪೂರ್ಣ ಶೃದ್ಧಾಂಜಲಿ ಮತ್ತೆ ಹುಟ್ಟಿ ಬನ್ನಿ ಶರಣು ಶರಣಾರ್ಥಿಗಳು.