ಸಿರಿಧಾನ್ಯ ನಡಿಗೆ ಆರೋಗ್ಯದ ಕಡೆಗೆ; ಸರಿಧಾನ್ಯ ಜಾಗೃತಿ ಜಾಥಾ: ಜಿಲ್ಲೆಯ ಸಿರಿಧಾನ್ಯ ಬೆಳೆಯುವ, ಸಂರಕ್ಷಿಸುವ ರೈತರಿಗೆ ಕೃಷಿ ಇಲಾಖೆಯಿಂದ ನಿರಂತರ ಪ್ರೋತ್ಸಾಹ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ 2,200 ಜನ ರೈತರು ಸಿರಿಧಾನ್ಯವನ್ನು ಬೆಳೆದು 2 ಕೋಟಿಗೂ ಹೆಚ್ಚು ಪ್ರೋತ್ಸಾಹವನ್ನು ಪಡೆದಿದ್ದಾರೆ. ಇದರಲ್ಲಿ 180 ರಷ್ಟು ರೈತರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಸಿರಿಧಾನ್ಯ ಬೆಳೆಯುವುದರಲ್ಲಿ ಕಲಘಟಗಿ ತಾಲೂಕು ಮುಂಚೂಣಿಯಲ್ಲಿದ್ದು 1500 ಕ್ಕೂ ಹೆಚ್ಚು ಜನರು ಈ ಬೆಳೆಗಳನ್ನು ಬೆಳೆದಿದ್ದಾರೆ. ಉಳಿದ ತಾಲೂಕಿನ ರೈತರು ಕೂಡ ಸಿರಿಧಾನ್ಯ ಕೃಷಿಯ ಕಡೆಗೆ ಲಕ್ಷ್ಯ ವಹಿಸಬೇಕಾಗಿದೆ. ಅದರ ಹಿಂದಿನ ಸಾಲಿಗೆ ಹೋಲಿಸಿದರೆ ಪ್ರಸ್ತುತ ವರ್ಷದಲ್ಲಿ ಸಿರಿಧಾನ್ಯ ಬೆಳೆಗಳ ವ್ಯಾಪ್ತಿ ಹೆಚ್ಚಾಗಿದ್ದು, ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಇಲಾಖೆಯಿಂದ ಅಗತ್ಯ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ತಿಳಿಸಿದರು.

ಅವರು ಇಂದು ಬೆಳಿಗ್ಗೆ ಕೃಷಿ ಇಲಾಖೆಯಿಂದ ನಗರದ ಕಡಪಾ ಮೈದಾನದಿಂದ ಕರ್ನಾಟಕ ಕಾಲೇಜು ವೃತ್ತದವರೆಗೆ ಆಯೋಜಿಸಿದ್ದ ಸಿರಿಧಾನ್ಯ ನಡಿಗೆ ಆರೋಗ್ಯದ ಕಡೆಗೆ ಜಾಥಾಗೆ ಚಾಲನೆ ನೀಡಿ, ಮಾತನಾಡಿದರು.

ಸಿರಿಧಾನ್ಯಗಳು ಭಾರತೀಯ ಜೀವನ ಪದ್ದತಿಯ ಪವಾಡ ಧಾನ್ಯಗಳು ಎಂದು ಹೇಳಬಹುದಾಗಿದೆ. ಜೋಳ, ರಾಗಿ, ಸಜ್ಜೆ, ನವಣೆ, ಸಾವಿ, ಬರಗು, ಊದಲು, ಕೊರಲೆ, ಹಾರಕ ಇವು ನಮ್ಮ ಸಂಪ್ರದಾಯಿಕ ಬೆಳೆಗಳಾಗಿದ್ದು, ನಮ್ಮ ಆಹಾರ ಸಂಸ್ಕøತಿಯ ಅವಿಭಾಜ್ಯ ಅಂಗಗಳಾಗಿವೆ. ಕಾಲಕ್ರಮೇಣ ಆಧುನಿಕ ಮತ್ತು ಆಮದು ಕೃಷಿಯ ಪ್ರಭಾವದಿಂದ ಅವುಗಳ ಸಾಗುವಳಿಯಲ್ಲಿ ಹಿನ್ನಡೆಯಾಗಿತ್ತು. ಆದರೆ ಇತ್ತೀಚಿನ ಕೆಲವು ದಶಕಗಳಿಂದ ಜನಸಾಮಾನ್ಯರಲ್ಲಿ ಸಿರಿಧಾನ್ಯಗಳ ಮಹತ್ವ ಕುರಿತು ಸಾಕಷ್ಟು ಅರಿವು ಮೂಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಾಗುತ್ತಿದ್ದು, ಗ್ರಾಹಕರು ಅವುಗಳನ್ನು ಕೊಳ್ಳಲು ಮುಂದೆ ಬರುತ್ತಿದ್ದಾರೆ. ಆದ್ದರಿಂದ ಈ ಬೆಳೆಗಳನ್ನು ಹೆಚ್ಚು ಹೆಚ್ಚು ಬೆಳೆಯುವುದರೊಂದಿಗೆ ಅವುಗಳ ಸಂಸ್ಕರಣೆ ಮಾರುಕಟ್ಟೆ ವಿಷಯಗಳಲ್ಲೂ ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಸರಕಾರವು ಕೃಷಿ ಇಲಾಖೆಯ ಮುಖಾಂತರ ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ರೈತಸಿರಿ ಯೋಜನೆಯನ್ನು ಜಾರಿಗೊಳಿಸಿದೆ. ಇದರಡಿಯಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ, ಇಲಾಖಾ ಮಾರ್ಗಸೂಚಿ ಪ್ರಕಾರ ಹೆಕ್ಟೇರಿಗೆ 10,000 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಸಿರಿಧಾನ್ಯವನ್ನು ವರ್ಷ ಪೂರ್ತಿ ಬೆಳೆಯಬಹುದಾಗಿದ್ದು, ಕಡಿಮೆ ಫಲವತ್ತಾದ ಜಮೀನಿಗೂ ಸೂಕ್ತವಾಗಿದೆ. ಒಣಬೇಸಾಯದಲ್ಲಿ ಹೆಚ್ಚು ವೆಚ್ಚವಿಲ್ಲದೇ ಇವುಗಳನ್ನು ಬೆಳೆಯ ಬಹುದಾಗಿದೆ ಎಂದು ಅವರು ಹೇಳಿದರು.

ರೈತರು ಬೆಳೆಯುವ ಸಿರಿಧಾನ್ಯಗಳ ಸಂಸ್ಕರಣೆಗೂ ಸರಕಾರವು ಪ್ರೋತ್ಸಾಹ ನೀಡುತ್ತದೆ. ರೈತ ಉತ್ಪಾದಕ ಗುಂಪುಗಳ ಮೂಲಕ ರೈತರ ಸಿರಿಧಾನ್ಯ ಉತ್ಪನ್ನಗಳನ್ನು ಖರೀದಿಸುತ್ತಿದೆ. ರೈತರು ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ತಾವು ಬಳಸಿ, ಗ್ರಾಹಕರಿಗೂ ಒದಗಿಸಿ ಸಮಾಜದ ಆರೋಗ್ಯ ಸ್ವಾಸ್ಥವನ್ನು ಸುಧಾರಿಸುವಲ್ಲಿ ನೆರವಾಗಬೇಕೆಂದು ತಿಳಿಸಿದರು.

ಜಾಥಾದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕರಾದ ಜಯಶ್ರೀ ಹಿರೇಮಠ, ಸಂದೀಪ ಆರ್.ಜಿ., ಸಹಾಯಕ ಕೃಷಿ ನಿರ್ದೇಶಕರಾದ ರಾಜಶೇಖರ ಆನಗೌಡರ, ಚನ್ನಪ್ಪ ಅಂಗಡಿ, ವಿಠ್ಠಲರಾವ್, ಸುಷ್ಮಾ ಮಳಿಮಠ, ಗೀತಾ ಕಡಪಟ್ಟಿ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ತಾಲೂಕ ಕೃಷಿ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಆತ್ಮ ಯೋಜನೆಯ ಸಿಬ್ಬಂದಿ, ಕೃಷಿ ಸಂಜೀವಿನಿ ಯೋಜನೆಯ ಸಿಬ್ಬಂದಿ, ಧರ್ಮಸ್ಥಳ ಸಿರಿ ಸಂಸ್ಥೆಯ ಸಿಬ್ಬಂದಿ ಮತ್ತು ಜಿಲ್ಲೆಯ ಸಿರಿಧಾನ್ಯ ಬೆಳೆಗಾರರು ಹಾಗೂ ಪ್ರಗತಿ ಪರ ರೈತರು ಜಾಥಾದಲ್ಲಿ ಭಾಗವಹಿಸಿದ್ದರು.

  • Related Posts

    ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

    ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    RSS
    Follow by Email
    Telegram
    WhatsApp
    URL has been copied successfully!