ಧಾರವಾಡ : ಪ್ರಸ್ತುತ ದಿನದಲ್ಲಿ ಬಹುತೇಕ ಸಾರ್ವಜನಿಕರಿಗೆ ಆಗಲಿ ಸರ್ಕಾರಿ ನೌಕರರೆ ಆಗಿರಲಿ ತಂತ್ರಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ಇರುವುದಿಲ್ಲ. ಅದಕ್ಕಾಗಿಯೇ ದಿನದಿನಕ್ಕೆ ಸೈಬರ್ ವಂಚನೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು (ಡಿ.02) ಸಂಜೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಯಿಂದ ಸರ್ಕಾರಿ ನೌಕರರಿಗೆ ಆಯೋಜಿಸಿದ್ದ ಆರ್ಥಿಕ ವಂಚನೆ, ಸೈಬರ್ ಕ್ರೈಮ್, ಡಿಜಿಟಲ್ ಅರೆಸ್ಟ್ ಬಗ್ಗೆ ಮತ್ತು ಕೆಜಿಐಡಿ ಸೌಲಭ್ಯಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಇಲಾಖೆಯಲ್ಲಿರುವ ಎಲ್ಲ ಅಧಿಕಾರಿಗಳು ಅವರ ಸಂಬಂಧಪಟ್ಟ ವ್ಯಕ್ತಿಗನುಗುಣವಾಗಿ ಹುದ್ದೆಯ ಅರ್ಹತೆ ತಿಳಿದುಕೊಳ್ಳಬೇಕು. ಬೇರೆ ಎಲ್ಲ ಇಲಾಖೆಗಳ ಬಗ್ಗೆಯೂ ಮಾಹಿತಿಯನ್ನು ತಿಳಿದುಕೊಂಡಿರಬೇಕು. ಹಾಗೂ ಮೇಲಾಧಿಕಾರಿಗಳು ಕೆಳ ವರ್ಗದ ಸಿಬ್ಬಂದಿಗಳವರಿಗೆ ಯಾವ ರೀತಿ ಕಾರ್ಯಗಾರದ ಅವಶ್ಯಕತೆ ಇದೆ ಎಂಬುದನ್ನು ತಿಳಿದುಕೊಂಡು ಅವರಿಗೆ ತರಬೇತಿಯನ್ನು ನೀಡುವುದು ಅತಿ ಸೂಕ್ತ ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿಕೊಂಡು ಅವರಿಗೆ ಮಾಹಿತಿಯನ್ನು ನೀಡಿದರೆ, ಅತಿ ಉತ್ತಮ. ಪ್ರತಿಯೊಂದು ಹಂತದಲ್ಲಿಯೂ ಸಿಬ್ಬಂದಿ ವರ್ಗದವರಿಗೆ ಕಾರ್ಯಗಾರ ಮುಖಾಂತರ ತರಬೇತಿಯನ್ನು ನೀಡಿದರೆ ಉತ್ತಮ ಹಾಗೂ ಎಲ್ಲ ಇಲಾಖೆಯವರು ಯಾವ ರೀತಿ ತಮಗೆ ತರಬೇತಿ ಬೇಕು ಎಂಬುದನ್ನು ನಮಗೆ ಹೇಳಿದರೆ ಜಿಲ್ಲಾಡಳಿತದಿಂದ ಎಲ್ಲ ಅನುಕೂಲವನ್ನು ಮಾಡಿಕೊಡುತ್ತೇವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಹಿರಿಯ ಪೆÇಲೀಸ್ ಅಧಿಕಾರಿ, ಸೆನ್ ಪೆÇಲೀಸ್ ಠಾಣೆಯ ಡಿವೈಎಸ್ಪಿ ಶಿವಾನಂದ ಕಟಗಿ ಅವರು ಮಾತನಾಡಿ, ಇಂದಿನ ಕಾಲದಲ್ಲಿ ಸೈಬರ್ ಜಾಗೃತಿ ಅತ್ಯಂತ ಅಗತ್ಯವಾದ ಒಂದು ಕೌಶಲ್ಯವಾಗಿದೆ. ಮಾನವೀಯ ಸಂಬಂಧಗಳು, ಬ್ಯಾಂಕಿಂಗ್ ವ್ಯವಸ್ಥೆಗಳು, ವ್ಯಾಪಾರ ವ್ಯವಹಾರಗಳು ಎಲ್ಲವೂ ಡಿಜಿಟಲ್ ಆಗುತ್ತಿರುವ ಈ ಯುಗದಲ್ಲಿ ವಂಚನೆಗಳ ರೂಪವೇ ಬದಲಾಗಿದೆ. ನಾವು ಜಾಗೃತರಾಗಿರದಿದ್ದರೆ, ಅಪರಾಧಿಗಳು ಕೆಲವೇ ಕ್ಷಣಗಳಲ್ಲಿ ನಮ್ಮ ಸಂಪೂರ್ಣ ಸಂಗ್ರಹ ಹಣವನ್ನು ದೋಚಬಹುದು ಎಂದು ಅವರು ಹೇಳಿದರು.
ಬ್ಯಾಂಕ್ ಖಾತೆ ವಿವರಗಳು, ಓಟಿಪಿ, ಎಟಿಎಮ್ ಪಿನ್, ಆಧಾರ್ ಅಥವಾ ಪ್ಯಾನ್ ವಿವರಗಳನ್ನು ಕೇಳುವ ಯಾವುದೇ ಕರೆ ಅಥವಾ ಸಂದೇಶವನ್ನು ನಂಬಬಾರದು ಹಾಗೂ ಯಾವುದೇ ಬ್ಯಾಂಕ್ ಅಥವಾ ಸರ್ಕಾರಿ ಇಲಾಖೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಫೋನ್ ಮೂಲಕ ಕೇಳುವುದಿಲ್ಲ. ಕೇಳಿದರೆ ಅದು ವಂಚನೆ ಎನ್ನುವುದು ನಿಶ್ಚಿತ ಎಂದು ಅವರು ಹೇಳಿದರು.
ನಕಲಿ ಕಸ್ಟಮ್ಸ್, ಸಿಬಿಐ, ಸೈಬರ್ ಕ್ರೈಮ್, ಪೆÇಲೀಸ್ ಅಧಿಕಾರಿ ಎಂದು ಕರೆ ಮಾಡುವ ಮೂಲಕ ನಿಮ್ಮ ಮೇಲೆ ಪ್ರಕರಣವಿದೆ, ಹಣಕಾಸು ಗೊಂದಲವಿದೆ, ವೀಡಿಯೋ ಕಾಲ್ ಮೂಲಕ ವಿಚಾರಣೆ ನಡೆಯುತ್ತದೆ ಎಂದು ಹೇಳಿ ಜನರನ್ನು ಹೆದರಿಸುತ್ತಿದ್ದಾರೆ ಆ ರೀತಿ ಕಾನೂನಿನಲ್ಲಿ ಇಲ್ಲ ಎಂದು ತಿಳಿಸಿದರು.
ಪೆÇಲೀಸರು ದೂರವಾಣಿ ಅಥವಾ ವಿಡಿಯೋ ಕಾಲ್ ಮೂಲಕ ಯಾರನ್ನೂ ಬಂಧಿಸುವುದಿಲ್ಲ. ಯಾವುದೇ ಶಂಕೆ ಬಂದರೆ, ತಕ್ಷಣ 112 ಅಥವಾ ಸೈಬರ್ ಹೆಲ್ಪ್ಲೈನ್ 1930 ನ್ನು ಸಂಪರ್ಕಿಸಿ ಎಂದು ಅವರು ನೌಕರರಿಗೆ ಮನವಿ ಮಾಡಿದರು.
ಕಳೆದ 8 ದಿನಗಳಲ್ಲಿ ಸೈಬರ್ ಕ್ರೈಮ್ದಿಂದ 48 ಲಕ್ಷ ಹಣ ಧಾರವಾಡದಲ್ಲಿ ವಂಚನೆ ಆಗಿದೆ. ದೆಹಲಿಯಲ್ಲಿ 26 ಕೋಟಿ ಮತ್ತು ಬೆಂಗಳೂರಲ್ಲಿ 11 ಕೋಟಿ ಹಣ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಭಾರತದಲ್ಲಿ ಸೈಬರ್ ಸಹಾಯವಾಣಿ 1930 ಗೆ ಮತ್ತು ಪೆÇಲೀಸ್ ಠಾಣೆಗೆ ಎಫ್ಐಆರ್ ದಾಖಲು ಆಗುತ್ತಿವೆ. 23 ಸಾವಿರ ಕೋಟಿ ಹಣ ಭಾರತದಲ್ಲಿ ಲ್ಯಾಪ್ಸ್ ಆಗುತ್ತಿದೆ ಇದು ಸೈಬರ್ಯಿಂದಾಗಿ ಮಾತ್ರ ಎಂದು ಅವರು ಹೇಳಿದರು.
ಸೈಬರ್ದಿಂದ ವಂಚಿತರಾದವರು ಕೇವಲ ಶೇ. 10 ರಷ್ಟು ಜನ ಮಾತ್ರ ದೂರನ್ನು ದಾಖಲಿಸುತ್ತಾರೆ. ಆದರೆ ಉಳಿದ ಜನ ಐದು ಮತ್ತು ಹತ್ತು ಸಾವಿರ ಕಳೆದುಕೊಂಡವರು ಮತ್ತು ಓಟಿಪಿ ವರ್ಗಾಯಿಸಿದವರು, ಅನಾಮದೆಯ ಕರೆಗಳಿಂದ ಹಣ ಕಳೆದುಕೊಂಡು ವಂಚಿತರಾದವರು ಯಾವುದೇ ದೂರುಗಳನ್ನು ಕೊಡುವುದಿಲ್ಲ ಎಂದು ಅವರು ತಿಳಿಸಿದರು.
ಕೆಜಿಐಡಿ ಜಿಲ್ಲಾ ವಿಮಾ ಅಧಿಕಾರಿ ಜೆ.ಸಿ.ಕಠಾರಿ ಅವರು ಕೆಜಿಐಡಿ ವಿಮೆ, ವಂತಿಗೆ, ಬೋನಸ್, ಲಾಭ ಮತ್ತು ಹೂಡಿಕೆ ಕುರಿತು ವಿವರವಾಗಿ ವಿವರಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೆದಾರ ಕೆ.ಶ್ರೀಧರ ಸ್ವಾಗತಿಸಿದರು. ಮಲ್ಲಿಕಾರ್ಜುನ ಸೊಲಗಿ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ.ಸುರೇಶ ಹಿರೇಮಠ ವಂದಿಸಿದರು.
ಉಪನ್ಯಾಸ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಡಿಡಿಓಗಳು, ವಿಷಯ ನಿರ್ವಾಹಕರು ಭಾಗವಹಿಸಿದ್ದರು.