ಧಾರವಾಡ : ಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ಎಂಬ ದೂರದೃಷ್ಠಿಯ ಹಿನ್ನೆಲೆಯಲ್ಲಿ, ಇಲಾಖೆಯು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಜಾರಿಯಲ್ಲಿರುವ ನೀತಿ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿ ಶ್ರಮಿಸುತ್ತಿದೆ. ಈ ಶ್ರಮವು ದೇಶದ ಮುಂದಿನ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಹೂಡುತ್ತಿರುವ ಬಂಡವಾಳವಾಗಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಪ್ರಾಯೋಗಿಕವಾಗಿ 2ನೇ ಅಕ್ಟೋಬರ್ 1975 ರಂದು ಮೈಸೂರು ಜಿಲ್ಲೆಯ, ಟಿ. ನರಸೀಪುರ ತಾಲ್ಲೂಕಿನಲ್ಲಿ 100 ಅಂಗನವಾಡಿ ಕೇಂದ್ರಗಳೊಂದಿಗೆ ಪ್ರಾರಂಭಿಸಲಾಯಿತು. ಈಗ ರಾಜ್ಯದ ಎಲ್ಲಾ ತಾಲ್ಲೂಕುಗಳಿಗೆ ವಿಸ್ತರಿಸಲಾಗಿದೆ. ಗರ್ಭಿಣಿ,ಬಾಣಂತಿ, ಕಿಶೋರಿಯರು ಮತ್ತು 6 ವರ್ಷದೊಳಗಿನ ಮಕ್ಕಳ ಅಭಿವೃದ್ಧಿಯು ಈ ಯೋಜನೆಯ ಮುಖ್ಯ ಗುರಿಯಾಗಿರುತ್ತದೆ.
ಯೋಜನೆಯ ಉದ್ದೇಶ : 0-6 ವರ್ಷದ ಮಕ್ಕಳ ಆರೋಗ್ಯ, ಪೌಷ್ಠಿಕ ಮಟ್ಟವನ್ನು ವೃದ್ಧಿಸುವುದು. ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು. ಮಕ್ಕಳಲ್ಲಿ ಸಾವು, ಅನಾರೋಗ್ಯ, ಅಪೌಷ್ಠಿಕತೆ ಮತ್ತು ಶಾಲಾ ಬಿಡುವಿಕೆಯನ್ನು ಕಡಿಮೆಗೊಳಿಸುವುದು. ಶಿಶು ಅಭಿವೃದ್ಧಿ ಕಾರ್ಯಕ್ರಮವನ್ನು ಉತ್ತಮಗೊಳಿಸುವ ಕಾರ್ಯನೀತಿ ಮತ್ತು ಅನುಷ್ಠಾನಗೊಳಿಸುವ ದಿಸೆಯಲ್ಲಿ ಪರಿಣಾಮಕಾರಿಯಾದ ಸಮನ್ವಯತೆಯನ್ನು ಸಾಧಿಸುವುದು. ಆರೋಗ್ಯ ಮತ್ತು ಪೌಷ್ಠಿಕತೆಯ ಶಿಕ್ಷಣವನ್ನು ನೀಡುವುದರ ಮೂಲಕ ತಾಯಂದಿರಲ್ಲಿ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆಯ ಅಗತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವ ಸಾಮಥ್ರ್ಯವನ್ನು ಹೆಚ್ಚಿಸುವುದು.
ಐ.ಸಿ.ಡಿ.ಎಸ್. ಸೇವಾ ಸೌಲಭ್ಯಗಳು: ಪೂರಕ ಪೌಷ್ಠಿಕ ಆಹಾರವನ್ನು 6 ವರ್ಷ ಒಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ, ಪ್ರಾಯ ಪೂರ್ವ ಬಾಲಕಿಯರಿಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನೀಡುವರು.
ಚುಚ್ಚುಮದ್ದುಗಳನ್ನು 6 ವರ್ಷದ ಒಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಕಿರಿಯ ಆರೋಗ್ಯ ಸಹಾಯಕಿಯರು ನೀಡುವರು. ಆರೋಗ್ಯ ತಪಾಸಣೆಯನ್ನು 6 ವರ್ಷದ ಒಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ವೈದ್ಯಾಧಿಕಾರಿಗಳು ಅಥವಾ ಕಿರಿಯ ಆರೋಗ್ಯ ಸಹಾಯಕಿಯರು ಅಥವಾ ಅಂಗನವಾಡಿ ಕಾರ್ಯಕರ್ತೆ ನೀಡುವರು.
ಮಾಹಿತಿ ಸೇವೆಯನ್ನು 6 ವರ್ಷದ ಒಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಮತ್ತು ಕಿಶೋರಿಯರಿಗೆ ವೈದ್ಯಾಧಿಕಾರಿಗಳು ಅಥವಾ ಕಿರಿಯ ಆರೋಗ್ಯ ಸಹಾಯಕಿ ಅಥವಾ ಅಂಗನವಾಡಿ ಕಾರ್ಯಕರ್ತೆಯರು ನೀಡುವರು. ಶಾಲಾಪೂರ್ವ ಶಿಕ್ಷಣವನ್ನು 3 ರಿಂದ 6 ವರ್ಷದ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರು ನೀಡುವರು.
ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣವನ್ನು 15 ರಿಂದ 45 ವಯಸ್ಸಿನ ಮಹಿಳೆಯರಿಗೆ ಮತ್ತು ಪ್ರಾಯ ಪೂರ್ವ ಬಾಲಕಿಯರಿಗೆ ಅಂಗನವಾಡಿ ಕಾರ್ಯಕರ್ತೆ, ಕಿರಿಯ ಆರೋಗ್ಯ ಸಹಾಯಕಿಯರು, ಎ.ಎನ್.ಎಂ., ಆಹಾರ ಮತ್ತು ಪೌಷ್ಠಿಕತೆ ಮಂಡಳಿಯ ಸಿಬ್ಬಂದಿಗಳು ನೀಡುವರು.
ರಾಜ್ಯದ 204 ಶಿಶು ಅಭಿವೃದ್ಧಿ ಯೋಜನೆಗಳ ಮುಖಾಂತರ ಒಟ್ಟು 69,922 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಪೂರಕ ಪೌಷ್ಠಿಕ ಅಹಾರ ಕಾರ್ಯಕ್ರಮ: ಸಮಗ್ರ ಶಿಶು ಅಭಿವೃದ್ದಿ ಯೋಜನೆ ಫಲಾನುಭವಿಗಳು ಪರಿಷ್ಕøತ ಮಾರ್ಗಸೂಚಿಯಂತೆ 0-6 ವರ್ಷದ ಮಕ್ಕಳಿಗೆ 500 ಕ್ಯಾಲೊರಿಗಳನ್ನು, 12-15 ಗ್ರಾಂ ಪ್ರೊಟೀನ್, ಗರ್ಭಿಣಿ, ಬಾಣಂತಿಯರಿಗೆ 600 ಕ್ಯಾಲೊರಿಗಳನ್ನು ಮತ್ತು 18-20 ಗ್ರಾಂ ಪ್ರೊಟೀನ್ ಅಲ್ಲದೆ ತೀರ್ವ ಅಪೌಷ್ಠಿಕತೆಯುಳ್ಳ ಮಕ್ಕಳಿಗೆ 800 ಕ್ಯಾಲೊರಿಗಳನ್ನು ಮತ್ತು 20-25 ಗ್ರಾಂ ಪ್ರೊಟೀನ್ ನೀಡುವ ಉದ್ದೇಶದಿಂದ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ.
ಯೋಜನೆಯ ಮಾರ್ಗಸೂಚಿಯಂತೆ ವರ್ಷದಲ್ಲಿ 300 ದಿನಗಳಿಗೆ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಸಾಮಾನ್ಯ ಮಕ್ಕಳಿಗೆ ಪ್ರತಿ ದಿನ ರೂ.8.00 ರಂತೆ, ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಘಟಕ ವೆಚ್ಚ ರೂ.21.00 ರಂತೆ, ಮತ್ತು ತೀರ್ವ ಅಪೌಷ್ಠಿಕತೆಯುಳ್ಳ ಮಕ್ಕಳಿಗೆ ರೂ.12.00 ರ ಘಟಕ ವೆಚ್ಚವನ್ನು ಪರಿಷ್ಕರಿಸಲಾಗಿದ್ದು, ಪರಿಷ್ಕೃತ ಘಟಕ ವೆಚ್ಚದಂತೆ ಆಹಾರವನ್ನು ನೀಡಲಾಗುತ್ತಿದೆ.
ಕ್ಷೀರಭಾಗ್ಯ ಯೋಜನೆ: ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 5 ದಿನ 15 ಗ್ರಾಂ ಹಾಲಿನ ಪುಡಿ ಮತ್ತು 05 ಗ್ರಾಂ ಸಕ್ಕರೆಯನ್ನು ನೀಡಲಾಗುತ್ತಿದೆ. 6 ತಿಂಗಳಿಂದ 6 ವರ್ಷದ ತೀವ್ರ ಮತ್ತು ಸಾಧಾರಣಾ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 3 ದಿನ ಹೆಚ್ಚುವರಿಯಾಗಿ 20 ಗ್ರಾಂ ಹಾಲಿನ ಪುಡಿ ಹಾಗೂ 5 ಗ್ರಾಂ ಸಕ್ಕರೆಯನ್ನು ಮನೆಗೆ ವಿತರಿಸಲಾಗುತ್ತಿದೆ.
ಸೃಷ್ಠಿ ಯೋಜನೆ: ಈ ಯೋಜನೆಯಡಿ 3 ರಿಂದ 6 ವರ್ಷದ ಸಾಮಾನ್ಯ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆಯನ್ನು ನೀಡಲಾಗುತ್ತಿದೆ. 6 ತಿಂಗಳಿಂದ 3 ವರ್ಷದ ತೀವ್ರ ಮತ್ತು ಸಾಧಾರಣಾ ಅಪೌಷ್ಠಿಕ ಮಕ್ಕಳಿಗೆ ವಾರಕ್ಕೆ 3 ದಿನ ಮೊಟ್ಟೆ ನೀಡಲಾಗುತ್ತಿದೆ. 3 ರಿಂದ 6 ವರ್ಷದ ತೀವ್ರ ಮತ್ತು ಸಾಧಾರಣಾ ಅಪೌಷ್ಠಿಕ ಮಕ್ಕಳಿಗೆ ವಾರಕ್ಕೆ 5 ದಿನ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ಸೇವಿಸದ ಮಕ್ಕಳಿಗೆ 6 ದಿನ ಹಾಲು ನೀಡಲಾಗುತ್ತಿದೆ. ಕ್ಷೀರಭಾಗ್ಯ ಹಾಗೂ ಸೃಷ್ಟಿ ಯೋಜನೆ ರಾಜ್ಯ ಪುರಷ್ಕೃತ ಯೋಜನೆಯಾಗಿರುತ್ತದೆ.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ನೀಡುತ್ತಿರುವ ಸೌಲಭ್ಯಗಳು: ಸೇವಾ ಹಿರಿತನದ ಆಧಾರದ ಮೇಲೆ ಗೌರವಧನ ಪಾವತಿ. ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಸೇವೆಯಲ್ಲಿದ್ದಾಗ ಮರಣ ಹೊಂದಿದರೆ ಅವಲಂಬಿತರಿಗೆ ರೂ.50,000/- ಪರಿಹಾರ ಧನ. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಅನಾರೋಗ್ಯಕ್ಕೆ ತುತ್ತಾದ ಸಮಯದಲ್ಲಿ ಗರಿಷ್ಠ ರೂ.50,000 ಗಳ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯ.
ಎನ್.ಪಿ.ಎಸ್.ಲೈಟ್ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆ ರೂ.150 ಸಹಾಯಕಿಯರಿಗೆ ರೂ.84 ಸರ್ಕಾರದ ಸಮ ಪ್ರಮಾಣದ ವಂತಿಗೆ ಪ್ರತಿ ಮಾಹೆ ಜಮೆ ಮಾಡಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ವರ್ಷಕ್ಕೆ 2 ಜೊತೆ ಸಮವಸ್ತ್ರ. (ರೂ.500 ರ ಘಟಕ ವೆಚ್ಚ), 180 ದಿನಗಳ ಗೌರವಧನ ಸಹಿತ ಹೆರಿಗೆ ರಜೆ. ವಾರ್ಷಿಕ 20 ದಿನಗಳ ಸಾಂದರ್ಭಿಕ ರಜೆ. 30 ದಿನಗಳ ಬೇಸಿಗೆ ರಜೆ, ಸೇವೆಯಲ್ಲಿದ್ದಾಗ ಮರಣ ಹೊಂದಿದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಅರ್ಹ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಹುದ್ದೆಗೆ ನೇಮಕ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ 2023-24 ನೇ ಸಾಲಿನ ಆರ್ಥಿಕ ವರ್ಷದಿಂದ ಚಾಲ್ತಿಗೆ ಬರುವಂತೆ ನಿವೃತ್ತಿ ಉಪಧನ (ಗ್ರಾಚ್ಯುಟಿ) ಸೌಲಭ್ಯ ಒದಗಿಸಲಾಗುತ್ತಿದೆ.
ಈ ಮೇಲೆ ತಿಳಿಸಿದ ಉದ್ದೇಶಗಳೊಂದಿಗೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು 06 ತಾಲ್ಲೂಕುಗಳಲ್ಲಿ 1,622 ಅಂಗನವಾಡಿ ಕೇಂದ್ರಗಳು ಕರ್ತವ್ಯ ನಿರ್ವಹಿಸುತ್ತಿವೆ. 1,622 ಅಂಗನವಾಡಿ ಕೇಂದ್ರಗಳ ಪೈಕಿ 835 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಹೊಂದಿದ್ದು, 456 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಹಾಗೂ 331 ಕೇಂದ್ರಗಳು ಇತರೆ ಸರ್ಕಾರಿ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 1,24,206 ಫಲಾನುಭವಿಗಳು (6-3 ವರ್ಷದ ಮಕ್ಕಳು, 3-6 ವರ್ಷದ ಮಕ್ಕಳು, ಗರ್ಭಿಣಿ, ಬಾಣಂತಿಯರು, ಅಂಗನವಾಡಿ ಕಾರ್ಯಕರ್ತೆಯು ಹಾಗೂ ಸಹಾಯಕರು) ದಾಖಲಾಗಿದ್ದು ಯೋಜನೆಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಯೋಜನೆಯ ಫಲಾನುಭವಿಗಳ ದಾಖಲಾತಿ, ಹಾಜರಾತಿ ಹಾಗೂ ಯೋಜನೆಯ ಸೌಲಭ್ಯವನ್ನು ಪಡೆಯುತ್ತಿರುವುದನ್ನು ಪ್ರೊಷಣ ಟ್ರಾಕರ್ ಎಂಬ ಆ್ಯಪ್ ಮುಖಾಂತರ ನಿರ್ವಹಿಸಲಾಗುತ್ತಿದೆ.