ಕಾರ್ಮಿಕರ ಸಮಸ್ಯೆ, ಅಹವಾಲು ಆಲಿಸಿದ ಸಚಿವರು

ಬೆಂಗಳೂರು : ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಇಂದು ವಿಕಾಸಸೌಧದಲ್ಲಿ ವಿವಿಧ ಕಂಪನಿಗಳ ಆಡಳತ ಮಂಡಳಿಗಳೊಂದಿಗೆ ಸಭೆ ನಡೆಸಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ಎಂ ವಿ ಫೋಟೋ ವೋಲ್ಟಾಯಿಕ್ ಪವರ್ ಪ್ರೈವೇಟ್ ನ ಸಭೆ ಬೆಂಗಳೂರಿನ ಎಂ ವಿ ಫೋಟೋ ವೋಲ್ಟಾಯಿಕ್ ಪವರ್ ಪ್ರೈವೇಟ್ ಲಿಮಿಟೆಡ್ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಹಾಗೂ ಆಡಳಿತ ಮಂಡಳಿಯ ನಡುವಿನ ಸಮಸ್ಯೆಗಳನ್ನು ಇತ್ಯರ್ಥ ಗೊಳಿಸಲು ಸಚಿವ ಲಾಡ್‌ ಅವರು ಸಭೆ ನಡೆಸಿದರು.

ಈ ಸಂಸ್ಥೆಯಲ್ಲಿ ಸುಮಾರು 15 ರಿಂದ 20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ 125 ಮಂದಿ ನೌಕರರ ಪೈಕಿ 100 ಮಂದಿ ಸಿಬ್ಬಂದಿಯನ್ನು ಕಾನೂನುಬಾಹಿರವಾಗಿ ಕೆಲಸದಿಂದ ತೆಗೆದು ಹಾಕಿರುವ ಬಗ್ಗೆ ಸಂಸ್ಥೆಯ ಆಡಳಿತ ವರ್ಗದವರೊಂದಿಗೆ ಚರ್ಚೆ ನಡೆಸಿದರು. ನೌಕರರು ತಮಗೆ ನೌಕರಿ ಅವಶ್ಯಕತೆ ಬಗ್ಗೆ ಸಚಿವರಿಗೆ ಮನವಿ ಮಾಡಿದರು.

ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವರಾದ ಶ್ರೀ ಎಂ.ಸಿ.ಸುಧಾಕರ್ ವಿಧಾನ ಪರಿಷತ್ ಸದಸ್ಯರಾದ ಸುಧಾಮದಾಸ್, ಕಾರ್ಮಿಕ ಆಯುಕ್ತರಾದ ಡಾ. ಗೋಪಾಲಕೃಷ್ಣ, ಅಪರ ಕಾರ್ಮಿಕ ಆಯುಕ್ತರಾದ ಮಂಜುನಾಥ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಮಂಜುನಾಥ್ ಹಾಗೂ ಸಂಸ್ಥೆಯ ಕಾನೂನು ಸಲಹೆಗಾರರು ಭಾಗವಹಿಸಿದ್ದರು.

ವಿಸ್ತಾರ ಮೀಡಿಯಾ ಪ್ರೈವೇಟ್ ಆಡಳಿತ ಮಂಡಳಿ ಜೊತೆ ಸಭೆ ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಸಂಸ್ಥೆಯ ನೌಕರರಿಗೆ ವೇತನ ನೀಡದೆ ಇರುವ ಬಗ್ಗೆ ಸಚಿವರು ಇಂದು ಸಭೆ ನಡೆಸಿದರು.

ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತು ಸಂಸ್ಥೆಯ ಆಡಳಿತ ವರ್ಗದವರೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವಂತೆ ಸೂಚನೆ ನೀಡಿದರು.

ಈ ಸಭೆಯಲ್ಲಿ ಕಾರ್ಮಿಕ ಆಯುಕ್ತರಾದ ಡಾ. ಗೋಪಾಲಕೃಷ್ಣ, ಅಪರ ಕಾರ್ಮಿಕ ಆಯುಕ್ತರಾದ ಮಂಜುನಾಥ, ಉಪ ಕಾರ್ಮಿಕ ಆಯುಕ್ತರಾದ ಸೋಮಣ್ಣ ಮತ್ತು ಸಂಸ್ಥೆಯ ನೌಕರರು ಹಾಜರಿದ್ದರು.

ಹಿಮಾಲಯ ವೆಲ್ ನೆಸ್ ಕಂಪನಿಯ ಕಾರ್ಮಿಕರ ಸಮಸ್ಯೆ ಚರ್ಚೆ ಬೆಂಗಳೂರಿನ ಹಿಮಾಲಯ ವೆಲ್ ನೆಸ್ ಕಂಪನಿಯ ಕಾರ್ಮಿಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಆಡಳಿತ ವರ್ಗದವರೊಂದಿಗೆ ಮತ್ತು ಕಂಪನಿಯ ಕಾರ್ಮಿಕ ಸಂಘಟನೆಯ ಕರ್ನಾಟಕ ವರ್ಕರ್ಸ್ ಯೂನಿಯನ್ ಮುಖಂಡರ ಜೊತೆ ಸಚಿವ ಲಾಡ್‌ ಅವರು ಸಭೆ ನಡೆಸಿದರು.

ಈ ಸಭೆಯಲ್ಲಿ ಕಾರ್ಮಿಕ ಆಯುಕ್ತರಾದ ಡಾ. ಗೋಪಾಲಕೃಷ್ಣ, ಅಪರ ಕಾರ್ಮಿಕರಾದ ಮಂಜುನಾಥ್, ಉಪ ಕಾರ್ಮಿಕ ಆಯುಕ್ತರಾದ ರವಿಕುಮಾರ್, ಸೋಮಣ್ಣ ಮತ್ತು ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು