ಧಾರವಾಡ : ಪ್ರಸ್ತುತ ಉದ್ಯೋಗ ಮಾರುಕಟ್ಟೆಗೆ ಬೇಕಾಗುವ ಕೌಶಲ್ಯ, ಸೃಜನಶೀಲ, ಜ್ಞಾನ ಮತ್ತು ಅಧ್ಯಯನದಲ್ಲಿ ಅರ್ಪಣಾ ಮನೋಭಾವ ಹೊಂದಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಬಿ.ಕರಡೋಣಿ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿಜ್ಞಾನ ಕಾಲೇಜಿನ ಸಂಖ್ಯಾಶಾಸ್ತ್ರ ಅಧ್ಯಯನ ವಿಭಾಗವು ಕಾಲೇಜಿನ ಬಿಬಿಎ ಸಭಾಂಗಣದಲ್ಲಿ ಪ್ರಥಮ ಪದವಿ ವರ್ಷದ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮ ಮತ್ತು ಮಹಾಲಾನೋಬಿಸ್ ಸ್ಟಡಿ ಸರ್ಕಲ್ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು, ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಅಧ್ಯಯನ ಶೀಲರಾಗಬೇಕು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಆಳವಾದ ಅಧ್ಯಯನದೊಂದಿಗೆ ಉತ್ತಮವಾದ ಜ್ಞಾನವನ್ನು ಹೊಂದಲು ಪ್ರಯತ್ನಿಸಬೇಕು ಎಂದ ಅವರು ವಿಷಯದ ಜೊತೆಗೆ ಸಾಹಿತ್ಯವನ್ನು ಅಧ್ಯಯನ ಮಾಡಿ ಎಂದರು.
ಕರ್ನಾಟಕ ವಿಜ್ಞಾನ ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಆರ್.ವಾಯ್.ಬೂದಿಹಾಳ ಮಾತನಾಡಿ ಪದವಿ ಹಂತದಿಂದಲೇ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ಹೊಂದಬೇಕು. ವಿಜ್ಞಾನ ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗ ಅವಕಾಶಗಳು ಇವೆ. ಸಂವಹ ಭಾಷಾ ಕೌಶಲವನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು ಎಂದ ಅವರು ಕರ್ನಾಟಕ ಕಾಲೇಜು ತನ್ನದೇ ಜ್ಞಾನದ ಪರಂಪರೆಯನ್ನು ಹೊಂದಿದೆ ಆ ಪರಂಪರೆಯನ್ನು ಮುಂದುವರೆಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜಲಿ ಸಾಳುಂಕೆ ಮಾತನಾಡಿ ಕರ್ನಾಟಕ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮದೇ ಆದ ಪ್ರತಿಭೆ, ಸೃಜನಶಿಲತೆಯನ್ನು ಹೊಂದಿರುತ್ತಾರೆ. ಕರ್ನಾಟಕ ಕಾಲೇಜು ಅಧ್ಯಯನ ಮಾಡಿದ ಅನೇಕರು ಉನ್ನತ ಸ್ಥಾನಕ್ಕೆ ತಲುಪಿಬ ಸಮಾಜದಲ್ಲಿ ತಮ್ಮದೇ ಆದ ವ್ಯಕ್ತಿತ್ವವನ್ನು ಗಳಿಸಿಕೊಂಡು ಸಾಧನೆ ಮಾಡಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳು ಮೊಬೈಲ್, ತಂತ್ರಜ್ಞಾನದಿಂದ ದೂರ ಇರಿ ಎಂದರು. ಕಾಲೇಜಿನಲ್ಲಿ ಇರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಸಂಖ್ಯಾಶಾಸ್ತ್ರದ ಪ್ರಥಮ ವರ್ಷದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿಜ್ಞಾನ ಕಾಲೇಜಿನ ಡೀನ್ ಡಾ.ಆರ್.ವಾಯ್ ಬೂದಿಹಾಳ, ಕರ್ನಾಟಕ ಕಲಾ ಕಾಲೇಜಿನ ಡಾ.ಮುಕುಂದ ಲಮಾಣಿ , ಸಂಖ್ಯಾಶಾಸ್ತ್ರದ ಮುಖ್ಯಸ್ಥರಾದ ಡಾ.ಶ್ರೀಶೈಲ ಗಣಿ, ಡಾ.ಎಮ್.ಎನ್.ಮ್ಯಾಗೇರಿ, ಡಾ.ಕೀರ್ತಿ ಅಷ್ಠಗಿಮಠ, ಡಾ.ಶ್ರೀದೇವಿ ಹಾಲವರ,ಡಾ.ಶ್ವೇತಾ, ಡಾ.ಭಿಮಣ್ಣ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ತನ್ಮಯ.ಬಿ, ಚನ್ನಮ್ಮಾ.ಬಿ.ಸೇರಿದಂತೆ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.