ಧಾರವಾಡ 12 : ನಾಯಕತ್ವದ ಕೌಶಲಗಳನ್ನು ಬೆಳೆಸುವಲ್ಲಿ ಎನ್.ಎಸ್.ಎಸ್ ಶಿಬಿರಗಳ ಪಾತ್ರ ಬಹಳ ಇದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್‌.ಎಲ್.ಹೈದರಾಬಾದ್ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ವಿಶ್ವವಿದ್ಯಾಲಯ ಎನ್‌.ಎಸ್.ಎಸ್.ಕೋಶವು ಕವಿವಿ ಗಾಂಧಿ ಭವನದಲ್ಲಿ ಆಯೋಜಿಸಿದ ಏಳು ದಿನಗಳ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಭವಿಷ್ಯದಲ್ಲಿ ಯುವ ಸಮೂಹದಲ್ಲಿ ನಾಯಕತ್ವ ಬೆಳಸುವ ಉದ್ದೇಶದಿಂದ ಮತ್ತು ದೇಶವನ್ನು ಕಟ್ಟುವಲ್ಲಿ ನಾಯಕತ್ವದ ಅವಶ್ಯಕತೆ ಇದೆ ಎಂದ ಅವರು ಇಡೀ ವಿಶ್ವಕ್ಕೆ ಭಾರತದ ಮಹಾನ್ ನಾಯಕರು ತಮ್ಮದೇ ಪ್ರಭಾವವನ್ನು ಜಗತ್ತಿನಾದ್ಯಂತ ಬೀರಿದ್ದಾರೆ. ಸಮಾಜದ ಸೇವೆಗಾಗಿ ನಾಯಕತ್ವದ ಗುಣಗಳ ಅವಶ್ಯಕತೆ ಇದೆ ಎಂದರು. ಎನ್‌.ಎಸ್.ಎಸ್.ಸ್ವಯಂ ಸೇವಕರು ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಖಿ ಮತ್ತು ಈ ತರಬೇತಿ ಶಿಬಿರದ ಉಪಯೋಗ ಪಡಿಸಿಕೊಳ್ಳಿ ಎಂದರು.

ಸಿಂಡಿಕೇಟ್ ಸದಸ್ಯರಾದ ಮಹೇಶ ಹುಲ್ಲೆನ್ನವರ ಮಾತನಾಡಿ ನಾಯಕನಾದವನು ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕು. ನಾಯಕತ್ವವು ಎಲ್ಲರನ್ನೂ ಒಟ್ಟುಗೂಡಿಸಿಕೂಂಡು ಹೋಗುವ ಒಂದು‌ ಮಹತ್ವದ ಪ್ರಕ್ರಿಯೆ ಆಗಿದೆ ಎಂದರು. ರಾಷ್ಟ್ರೀಯ ಮಟ್ಟದಲ್ಲಿ ಎನ್.ಎಸ್.ಎಸ್.ಸ್ವಯಂ ಸೇವಕರು ತಮ್ಮ ನಾಯಕತ್ವದ ಗುಣಗಳ ಮೂಲಕ ಗುರುತಿಸಿಕೊಳ್ಳಬೇಕು ಎಂದರು.

ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವರಾದ ಡಾ.ಎ.ಚೆನ್ನಪ್ಪ ಮಾತನಾಡಿ ಶೈಕ್ಷಣಿಕ ಚಟುವಟಿಕೆಗಳೆ ಪೂರಕವಾಗಿ ಎನ್.ಎಸ್.ಎಸ್.ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಂವಹನ ಕೌಶಲಗಳನ್ನು ಬೆಳಸಿಕೊಳ್ಳಬೇಕು. ಅನೇಕ ಮಹಾನ್ ನಾಯಕರು ಮೂಲತಃ ಹುಟ್ಟಿನಿಂದ ‌ನಾಯಕರಾದವರಲ್ಲ ಅವರೆಲ್ಲರೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಜಗತ್ತಿನಲ್ಲಿ ನಾಯಕರಾದರು ಎಂದರು. ಉತ್ತಮ ವ್ಯಕ್ತಿತ್ವದ ಜೊತೆಗೆ ನಾಯಕತ್ವದ ಗುಣ ಮತ್ತು ಕೌಶಲಗಳನ್ನು ಬಳಸಿಕೊಳ್ಳಬೇಕು ಎಂದ ಅವರು ಮಹಾನ್ ನಾಯಕರು ದಾರ್ಶನಿಕರ ತತ್ವಗಳು ಮೂಲಕ ನಾಯಕತ್ವದ ಗುಣಗಳನ್ನು ಅಳವಡಿಸಿಕೊಳ್ಳಿ ಎಂದರು.‌ ಎನ್.ಎಸ್.ಎಸ್ ತರಬೇತಿ ಶಿಬಿರಗಳನ್ನು ವಿದ್ಯಾರ್ಥಿಗಳಲ್ಲಿ ಶಿಸ್ತು ಸಂಯಮ, ಸಂವಹನ ಕೌಶಲ್ಯಗಳನ್ನು ಬೆಳೆಸುವಲ್ಲಿ ಸಹಾಯಕವಾಗಿದೆ.

ಕರ್ನಾಟಕ ವಿಶ್ವವಿದ್ಯಾಲಯ ಎನ್‌.ಎಸ್.ಎಸ್ ಕೋಶದ ಸಂಯೋಜಕರಾದ ಡಾ.ಎಂ.ಬಿ.ದಳಪತಿ ಮಾತನಾಡಿ…ಈ ಎಳು ದಿನಗಳ ಎನ್.ಎಸ್.ಎಸ್ ನಾಯಕತ್ವ ಶಿಬಿರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಸಸಿಗಳನ್ನು ನೆಡುವದು, ಜೀವಜಲ ಸಂರಕ್ಷಣೆಯ ಮುಖ್ಯ ಉದ್ದೇಶ ಇಟ್ಟುಕೊಂಡು ಇಂಗು ಗುಂಡಿಗಳ ನಿರ್ಮಾಣ ಮತ್ತು ಎನ್.ಎಸ್.ಎಸ್.ಸ್ವಯಂ ಸೇವಕರಿಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಶ್ರಮಧಾನ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಎಂದ ಅವರು ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ 165 ವಿವಿಧ ಜಿಲ್ಲೆಗಳ ಕಾಲೇಜುಗಳಿಂದ 450 ಎನ್.ಎಸ್.ಎಸ್.ಸ್ವಯಂ ಸೇವಕರು ಭಾಗವಹಿಸಿದ್ದು, ಏಕ ಕಾಲಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳಲ್ಲಿ ಐದು ನಾಯಕತ್ವ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎನ್‌.ಎಸ್‌.ಎಸ್ ಅಧಿಕಾರಿಗಳಾದ ಡಾ.ಎಸ್..ಎ ಕೋಳೂರ, ಡಾ.ಎನ್.ಎಸ್.ತಳವಾರ, ಡಾ.ಎಸ್.ಎಸ್.ದೊಡಮನಿ, ಡಾ. ವಿ.ಎಸ್. ಕಟ್ಟಿಮಠ, ಪ್ರೊ.ರವಿ ದೊಡ್ಡಬಿದರಿ, ಪ್ರೊ.ರವಿ ಶೇಷಗಿರಿ, ಪ್ರೊ. ಕಿರಣ ತೊಟಗಂಟಿ, ಪ್ರೊ. ದಯಾನಂದ ಹಟ್ಟಿ, ಪ್ರೊ.ದೇವರಾಜ, ಸೇರಿದಂತೆ ಇತರರು ಇದ್ದರು.