ಅಳ್ನಾವರ ಅಂಜುಮನ್ ಇಸ್ಲಾಂ ಹಣ ದುರುಪಯೋಗ — ಅಬ್ದುಲ್ ಮುನಸಿ.

ಧಾರವಾಡ : ಅಳ್ನಾವರ ಪಟ್ಟಣದ ಮೂರು ಮಸೀದಿಗೆ ನೀಡಬೇಕಾಗಿರುವವಾಣಿಜ್ಯ ಮಳಿಗೆ ಹಣ ಅಳ್ನಾವರದ ಅಂಜುಮನ್ ಇಸ್ಲಾಂ ದುರ್ಬಳಕೆ ಮಾಡಿಕೊಂಡಿದೆ ಎಂದು ಮುಸ್ಲಿಂ ಸಮಾಜದ ಮುಖಂಡ ಅಬ್ದುಲ್ ರೇಹಮಾನ್ ಮುನಸಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಳ್ನಾವರ ಪಟ್ಟಣದ ಪ್ಲಾಟ್ ನಂ-320 ಮತ್ತು 321 ರ ಆಸ್ತಿಯನ್ನು ಅಭಿವೃದ್ಧಿಪಡಿಸಿ, ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣಕ್ಕೆ ವಕ್ಫ ಬೋರ್ಡ್ 20 ಲಕ್ಷ ಅನುದಾನ ನೀಡಿತ್ತು ಎಂದು ಹೇಳಿದರು.

2007-2008 ರಲ್ಲಿ ಕಟ್ಟಡ ನಿರ್ಮಿಸಿದ ಬಳಿಕ ಬರುವ ಆದಾಯದಲ್ಲಿ ಖರ್ಚು ತೆಗೆದು, ಉಳಿದ ಹಣ ಅಳ್ನಾವರದ ಜಾಮೇ ಮಸೀದಿ, ಮದನಿ ಮಸೀದಿ, ಕೂಬಾ ಮಸೀದಿಗೆ ನೀಡಲು 1990 ರಲ್ಲಿ ಅಂಜುಮನ್ ಸಮಿತಿ ಠಾರಾವ್ ಮಾಡಿದ್ದಾಗಿ ತಿಳಿಸಿದರು.

ಅಳ್ನಾವರದ ಈ ಆಸ್ತಿಯಿಂದ ಈಗ ತಿಂಗಳಿಗೆ ಲಕ್ಷಕ್ಕೂ ಅಧಿಕ ಆದಾಯವಿದೆ. ಆದರೆ ಅಳ್ನಾವರ ಅಂಜುಮನ್ ಸಮಿತಿ ಈ ಮೂರು ಮಸೀದಿಗಳಿಗೆ ಹಣ ನೀಡದ ಕುರಿತು ಸ್ವತಃ ಮಸೀದಿಗಳೇ ಮಾಹಿತಿ ಹಕ್ಕಿನಲ್ಲಿ ಸ್ಪಷ್ಟೀಕರಣ ನೀಡಿದ್ದಾಗಿ ಹೇಳಿದರು.

ಮಸೀದಿಗಳಿಗೆ ಸೇರಿಬೇಕಾದ ಹಣ ಹೋಗಿದ್ದು ಎಲ್ಲಿ? ಎಂದು ಪ್ರಶ್ನಿಸಿದರಲ್ಲದೇ, ಮುಸ್ಲಿಂ ಸಮಾಜದ ಹಣ ದುರ್ಬಳಕೆ ಕುರಿತು ಶಂಕೆ ವ್ಯಕ್ತಪಡಿಸಿದ ಅಬ್ದುಲ್ ಮುನಸಿ, ಈ ಬಗ್ಗೆ ಉತ್ತರ ಕೊಡುವಂತೆ ಅಳ್ನಾವರ ಅಂಜುಮನ್ ಇಸ್ಲಾಂನ ಸಮಿತಿಗೆ ಆಗ್ರಹಿಸಿದರು.