ಬೆಂಗಳೂರು, ಜನವರಿ ೦೩: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ರಚಿಸಲು ಇಂದು ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ರಚಿಸುವುದು ಬಹುದಿನಗಳ ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ನಾಡಿಗೆ ಮೂರು ಜ್ಞಾನ ಪೀಠ ಪ್ರಶಸ್ತಿ ವಿಜೇತರನ್ನು ನೀಡಿದ್ದಷ್ಟೇ ಅಲ್ಲ ರಾಜ್ಯದಲ್ಲೇ ವಿದ್ಯಾಕಾಶಿ ಎಂದೇ ಹೆಸರು ಪಡೆದಿರುವ ನಮ್ಮ ಧಾರವಾಡ ನಗರವು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಬಹುದೊಡ್ಡ ಕೊಡುಗೆಯನ್ನು ರಾಜ್ಯಕ್ಕೆ, ಕನ್ನಡ ಭಾಷೆಗೆ ನೀಡಿದೆ. ಇದೀಗ ಎರಡು ಮಹಾನಗರ ಪಾಲಿಕೆ ರಚನೆಯಾದರೆ ಉಭಯ ನಗರಗಳ ಅಭಿವೃದ್ಧಿಗೆ ಆದ್ಯತೆ ಸಿಗಲಿದೆ ಎಂದು ಸಚಿವ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ.
ಧಾರವಾಡ ನಗರವನ್ನು ಪ್ರತ್ಯೇಕ ಮಹಾನಗರ ಪಾಲಿಕೆಯನ್ನಾಗಿಸಿ, ನಗರದ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಿದ ರಾಜ್ಯ ಸರ್ಕಾರಕ್ಕೆ ವಿಶೇಷವಾಗಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರು ಹಾಗೂ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೂ ಧಾರವಾಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವಿಭಜನೆಯಾಗಬೇಕೆಂದು ಸಾಕಷ್ಟು ವರ್ಷಗಳಿಂದ ಬೇಡಿಕೆ ಸರ್ಕಾರದ ಮುಂದೆ ಇತ್ತು. ಪ್ರತ್ಯೇಕ ಪಾಲಿಕೆ ರಚನೆ ಮಾಡಿ ಎಂಬ ಬೇಡಿಕೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರಿಂದಲೂ ಕೇಳಿಬರುತ್ತಿತ್ತು. ಈ ಬೇಡಿಕೆಗೆ ಇದೀಗ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ಸೂಚಿಸಿದೆ.