ಧಾರವಾಡ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಾಗೂ ಭಗತ್ ಸಿಂಗ್, ಸುಖದೇವ್, ಹಾಗೂ ರಾಜಗುರು ಬಲಿದಾನ ದಿನದ ಅಂಗವಾಗಿ ಸೇವಾ ಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ರಕ್ತ ನಿಧಿ, ಧಾರವಾಡ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ಧಾರವಾಡ ಲಿಂಗಾಯತ ಭವನದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಸೋಮವಾರ ಆಯೋಜನೆ ಮಾಡಲಾಗಿತ್ತು.

ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಣೆಯಿಂದ 1070 ಜನ ಯುವಕರು, ಸ್ಥಳೀಯ ಜನರು ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಸಾರ್ಥಕತೆ ಮೆರೆದರು. ಇದೇ ವೇಳೆ ಸೇವಾ ಭಾರತಿ ಟ್ರಸ್ಟ್ ವತಿಯಿಂದ ರಕ್ತದಾನ ಮಾಡಿದ ಎಲ್ಲರಿಗೂ ಅಭಿನಂದನಾ ಪತ್ರ ವಿತರಣೆ ಮಾಡಲಾಯಿತು.

ರಕ್ತದಾನ ಶಿಬಿರದ ದಿವ್ಯ ಸಾನಿಧ್ಯವನ್ನು ನಯಾನಗರದ ಶ್ರೀ ಗುರು ಅಭಿನವ ಸಿದ್ದಲಿಂಗ ಸ್ವಾಮೀಜಿ, ಮನಗುಂಡಿಯ ಬಸವಾನಂದ ಸ್ವಾಮೀಜಿ, ಗರಗ ಕಲ್ಮಠದ ಆತ್ಮರಾಮ ಸ್ವಾಮೀಜಿ ವಹಿಸಿದ್ದರು. ಈ ವೇಳೆ ಸೇವಾ ಭಾರತಿ ಟ್ರಸ್ಟ್ ಉತ್ತರ ಪ್ರಾಂತ ಟ್ರಸ್ಟಿ ಮಂಜುನಾಥ ಮಕ್ಕಳಗೇರಿ, ಸೇವಾ ಭಾರತಿ ಟ್ರಸ್ಟಿ ಶ್ರೀಧರ ನಾಡಿಗೇರ, ದತ್ತಮೂರ್ತಿ ಕುಲಕರ್ಣಿ ಸೇರಿದಂತೆ ಇತರರಿದ್ದರು.