ಹಾಲಹಳ್ಳ (ಎರಡು ದಶಕದ ಕಥೆಗಳ)
ಧಾರವಾಡ : ಇದೊಂದು ಈ ಯುಗದ ಪ್ರೇಮ ಕಾವ್ಯ ಎನ್ನಬಹುದು, ಇಲ್ಲಿರುವ ಕಥೆಗಳಲ್ಲಿ ಸುಮಾರು ಕಥೆಗಳು ಪ್ರೀತಿ, ಪ್ರೇಮ ಎಂಬ ಸುಮಧುರವಾದ ಎರಡಕ್ಷರಗಳಿಂದಲೇ ಕೂಡಿವೇ. ನಮ್ಮಲ್ಲಿ ಪ್ರೀತಿ ಪ್ರೇಮ ಕಾಮ ಎಲ್ಲವೂ ಇದ್ದು, ಆದರೆ ಅದನ್ನು ಕೆಲವು ಬಾರಿ ತೋರ್ಪಡಿಸಿಕೊಳ್ಳದೆ ತುಂಬಾ ಗಂಭೀರರಂತೆ ಇರುತ್ತೇವೆ ಆದರೆ ಪ್ರೀತಿ ಪ್ರೇಮ ಕಾಮ ಜನರ ಜೀವನದ ಸಹಜ ಭಾಗ ಎಂಬುದನ್ನು ಗುರುಗಳು ತುಂಬಾ ಸರಳವಾಗಿ ಇಲ್ಲಿ ತೋರಿಸಿ ಕೊಟ್ಟಿದ್ದಾರೆ.
ಇನ್ನು ಕೆಲವು ಕಥೆಗಳಂತೂ ಗ್ರಾಮೀಣರ ಜೀವನವನ್ನು ಯಥಾವತ್ತಾಗಿ ಭಟ್ಟಿ ಇಳಿಸಿದಂತಾಗಿದೆ. ಇಲ್ಲಿರುವ ಹಲವಾರು ಕಥೆಗಳು ಸದ್ಯದ ನಮ್ಮೆಲ್ಲರ ನಡುವಿನ ಬದುಕನ್ನು ಚಿತ್ರಿಸುತ್ತವೆ, ಪ್ರೀತಿ ಪ್ರೇಮ ಎನ್ನುವುದು ಜಾತಿ ಮತ ಪಂಥ ಎಲ್ಲ ಸಂಕೋಲೆಗಳನ್ನು ಮೀರಿರುವುದು ಎಂಬುದು ನಿಜ ಆದರೆ ನಮ್ಮ ಈ ಸಮಾಜದಲ್ಲಿ ಅದು ಪೂರ್ಣ ನಿಜವಲ್ಲ ಎಂಬುದನ್ನು ಇಲ್ಲಿರುವ ಒಂದೆರಡು ಕಥೆಗಳು ತುಂಬಾ ಮಾರ್ಮಿಕವಾಗಿ ತಿಳಿಸುತ್ತವೆ. ಒಂದೆರಡು ಕಥೆಗಳಂತೂ ನನ್ನ ಕಾಲೇಜು ಜೀವನವನ್ನೇ ಮತ್ತೊಮ್ಮೆ ಕಣ್ಣ ಮುಂದೆ ತರಿಸಿತು, ನನ್ನ ಸಹಪಾಠಿಗಳು, ಅವರ ಪ್ರೀತಿ ಪ್ರೇಮ, ತಮ್ಮ ಪ್ರೇಯಸಿಯನ್ನು ಮೆಚ್ಚಿಸಲು ಅವರು ಮಾಡುತ್ತಿದ್ದ ಕಸರತ್ತುಗಳು ಒಂದ ಎರಡ ಅವುಗಳೆಲ್ಲವೂ ಸಹ ಇಂದು ನನ್ನ ನೆನಪಿಗೆ ಬಂದು ನಗುತರಿಸಿದವು ಇನ್ನೂ ಪರೀಕ್ಷಾ ಸಮಯದಲ್ಲಿ ಒಬ್ಬ ಜವಾಬ್ದಾರಿಯುತ ವೀಕ್ಷಕ ಏನು ಮಾಡಬೇಕು ಎಂಬುದನ್ನು ಮರೆತು ಏನೇನೋ ಮಾಡುತ್ತಿದ್ದರು ಅದು ಸಹ ನೆನಪಾಗಿ ಬೇಜಾರಾಯ್ತು.
ಒಟ್ಟಿನಲ್ಲಿ ಹೇಳಬೇಕೆಂದರೆ ಹಾಲಹಳ್ಳ ಎರಡು ದಶಕದ ಕಥೆಗಳು ಇದನ್ನು ಓದುವಾಗ ನಾನು ಹಳ್ಳಿಯಿಂದ ಡೆಲ್ಲಿಯವರೆಗೂ ಸುತ್ತಾಡಿಬಂದೆ, ಇಲ್ಲಿರುವ ಕಥೆಗಳು ಅಪರೂಪದಲ್ಲಿ ಅಪರೂಪ ನಮ್ಮ ಗ್ರಾಮೀಣ ಜನರ ಜೀವನವನ್ನು ಎತ್ತಿ ತೋರಿಸುವ ಅತ್ಯುತ್ತಮವಾದ ಕಥೆಗಳು, ಕಥೆಗಳನ್ನು ಓದುತ್ತಿರುವಾಗ ಪಾತ್ರಗಳು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ ಆ ರೀತಿ ಕಥೆಗಳನ್ನು ಗುರುಗಳು ಕಟ್ಟಿಕೊಟ್ಟಿದ್ದಾರೆ.
ಓದುಗರಿಗೆ ಪುಸ್ತಕದ ದರ ಸ್ವಲ್ಪ ದುಬಾರಿ ಎನಿಸಬಹುದು ಆದರೆ ಪುಸ್ತಕ ಕೊಂಡು ಓದಿದ ನಂತರ ಆ ದರ ಕಡಿಮೆ ಎನಿಸುವುದು ನೂರಕ್ಕೆ ನೂರರಷ್ಟು ಸತ್ಯ. ಇಂತಹ ಸುಂದರವಾದ ಕಥೆಗಳನ್ನು ಓದುಗರಿಗೆ ನೀಡಿದ ಗುರುಗಳಿಗೆ ಮತ್ತೊಮ್ಮೆ ಮಗದೊಮ್ಮೆ ಧನ್ಯವಾದಗಳು.






