ಸಿಎಂ ಅವರು ಘೋಷಿಸಿದಂತೆ ಕನಿಷ್ಟ ರೂ.10000 ಮಾಸಿಕ ಗೌರವಧನದ ಆದೇಶ ಮತ್ತು
ರಾಜ್ಯ ಬಜೆಟ್‌ನಲ್ಲಿ ರೂ. 1000 ಹೆಚ್ಚಳದ ಆದೇಶ ಮಾಡಲು, ಆಗ್ರಹಿಸಿ ಎಐಯುಟಿಯುಸಿ ಪ್ರತಿಭಟನೆ.

ಧಾರವಾಡ : ಎಐಯುಟಿಯುಸಿಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉ.ಕ ಜಿಲ್ಲಾ ಸಮಿತಿ ವತಿಯಿಂದ ಕಳೆದ ಜನೆವರಿಯ ಆಶಾ ಹೋರಾಟದ ಸಂದರ್ಭದಲ್ಲಿ ಮಾನ್ಯ ಸಿಎಂ ಘೋಷಿಸಿದಂತೆ, ಕನಿಷ್ಟ ರೂ.10000 ಮಾಸಿಕ ಗೌರವಧನದ ಆದೇಶ ಮತ್ತು ರಾಜ್ಯ ಬಜೆಟ್‌ನಲ್ಲಿ ರೂ. 1000 ಹೆಚ್ಚಳದ ಆದೇಶ ಮಾಡಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಗಂಗಾಧರ ಬಡಿಗೇರ, ಹೋರಾಟದ ಕಳೆದ 2025 ಜನವರಿ 7 ರಿಂದ 10 ನೇ ತಾರೀಖಿನವರೆಗೆ ರಾಜ್ಯದ ಆಶಾ ಕಾರ್ಯಕರ್ತೆಯರ ಅಹೋರಾತ್ರಿಯ ಹೋರಾಟ ನಡೆದ ಸಂದರ್ಭದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಹೋರಾಟ ನಿರತ ಆಶಾ ಸಂಘದ ಪದಾಧಿಕಾರಿಗಳನ್ನು ಕರೆದು ಬೇಡಿಕೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಆರೋಗ್ಯ ಸಚಿವರು ಮತ್ತು ಹಿರಿಯ ಆರೋಗ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಈ ಕೆಳಗಿನಂತೆ ನಿರ್ಣಯ ಕೈಗೊಂಡು ಸಿಎಂ ಅವರ ಪರವಾಗಿ ಆರೋಗ್ಯ ಇಲಾಖೆಯ ಆಯುಕ್ತರು ಫ್ರೀಡಂ ಪಾರ್ಕ್ಗೆ ಬಂದು ಎಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ರೂ.ಹತ್ತು ಸಾವಿರಗಳ ಗೌರವಧನವನ್ನು ನೀಡಲಾಗುವುದು ಎಂದು ಘೋಷಿಸಿರುತ್ತಾರೆ.ಇದನ್ನು ಹೊರತುಪಡಿಸಿ, ಕಾಂಪೋನೆAಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ಸ್ ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹ ಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ರೂ.10,000 ಗ್ಯಾರಂಟಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು. ಹಾಗೆಯೆ ಇದೇ 25 -26 ನೆ ಸಾಲಿನ ಬಜೆಟ್ ಗೆ ಮುನ್ನಾ ಸಂಘದ ಪದಾಧೀಕಾರಗಳೊಂದಿಗೆ ಸಭೆ ನಡೆಸಲಾಗುವುದು, ಸರ್ಕಾರ ನಿಮ್ಮೊಂದಿಗಿದೆ ಎಂದು ಮಾನ್ಯ ಮುಖ್ಯ ಮಂತ್ರಿಗಳು ಭರವಸೆ ನೀಡಿದ್ದರು. ಆದರೆ 2 ತಿಂಗಳು ಕಳೆದರೂ ಈ ಕುರಿತು ಮೇಲಿನ ಭರವಸೆಯಂತೆ ಉತ್ತರವಾಗಲಿ,ಆದೇಶವಾಗಲಿ ದೊರೆತಿರುವುದಿಲ್ಲ. ಬಜೆಟ್‌ಗೆ ಮುನ್ನಾ ಸಭೆಯನ್ನೂ ಕರೆದಿರುವುದಿಲ್ಲ. ಅಲ್ಲದೇ ರಾಜ್ಯ ಬಜೆಟ್‌ನಲ್ಲಿಯೂ ಕೂಡ ರಾಜ್ಯದ ನಿಗದಿತ ಮಾಸಿಕ ಗೌರವಧನವನ್ನು ಏರಿಕೆ ಮಾಡಿರುವುದಿಲ್ಲ. ನುಡಿದಂತೆ ನಡೆಯುವ ಸರ್ಕಾರ ರಾಜ್ಯದ 42ಸಾವಿರ ಆಶಾಗಳಿಗೆ ಆದೇಶ ಮಾಡಿ ತನ್ನ ಮಾತನ್ನು ಉಳಿಸಿಕೊಳ್ಳಬೇಕು. ಎಪ್ರಿಲ್ 2025ರಿಂದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ರೂ.10000 ಗಳ ಗೌರವಧನವನ್ನು ನೀಡಲು ಆದೇಶಿಸಬೇಕು. ಇದೇ ಬಜೆಟ್‌ನಲ್ಲಿ ರಾಜ್ಯದ ನಿಗದಿತ ಗೌರವಧನ ರೂ. 1000 ಹೆಚ್ಚಿಸಿ ಆದೇಶಿಸಬೇಕು. ಆರೋಗ್ಯ ಸಚಿವರ ಸಮ್ಮುಖದಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ಮಾಡಿ ಇನ್ನುಳಿದ ಬಹುದಿನಗಳ ಸಮಸ್ಯೆಗಳ ಪರಿಹಾರಕ್ಕೆ ಕ್ರಮತೆಗೆದುಕೊಳ್ಳಬೇಕು, ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷೆ ಭುವನಾ ಬಳ್ಳಾರಿ, ಮಾತು ಕೊಟ್ಟಂತೆ ಸೂಕ್ತ ಆದೇಶಗಳನ್ನು ಮಾಡುವ ಬದಲಾಗಿ, ಕಳೆದ 12 ವರ್ಷಗಳಿಂದ ಕೇವಲ ಮಾಸಿಕ ಆರು ಸಾವಿರಕ್ಕೆ ದುಡಿದ ಆಶಾ ಸುಗಮಕಾರರನ್ನು ಕೆಲಸದಿಂದ ಬಿಡುಗಡೆಯ ಆದೇಶ ಹೊರಡಿಸಿದ್ದು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಹಿಂದಿನ ಚರ್ಚೆಯಂತೆ ಸುಗಮಕಾರರಿಗೆ ಹೆಚ್ಚಿನ ಗೌರವಧನ, ದಿನ-ಪ್ರಯಾಣ ಭತ್ಯೆ ನೀಡಿ ಇವರಿಗೆ ಮತ್ತೆ ಕೆಲಸ ಮಾಡಲು ಅವಕಾಶ ನೀಡಲು ಮರು ಆದೇಶ ಮಾಡಬೇಕು. ಹಾಗೆಯೇ ಮತ್ತೊಂದು ಏಕಾಏಕಿ ಆದೇಶ ಮಾಡಿ, 60 ವರ್ಷ ಮೇಲ್ಪಟ್ಟ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ಬಿಸಾಕಿದ್ದಾರೆ. ಅವರನ್ನು ದಿಢೀರನೆ ಬೀದಿಗೆ ತಳ್ಳಿರುತ್ತಾರೆ. ಇದು ನಿಜಕ್ಕೂ ಅತ್ಯಂತ ಅಮಾನವೀಯ. ವಿವಿಧ ರಾಜ್ಯಗಳಲ್ಲಿ ಇವರ ಸೇವೆಯ ವಯಸ್ಸು 62 ಇದ್ದು, ಕರ್ನಾಟಕ ರಾಜ್ಯದಲ್ಲಿಯೂ ನಿವೃತ್ತಿ ವಯಸ್ಸನ್ನು 62 ಕ್ಕೆ ಮಾಡಿ ನಿವೃತ್ತಿ ಸೌಕರ್ಯಗಳನ್ನು ಜಾರಿ ಮಾಡಬೇಕು. ಈ ಕುರಿತು ಕೂಡ ಮರು ಆದೇಶ ಮಾಡಿ ನ್ಯಾಯ ದೊರಕಿಸಬೇಕು ಎಂದರು.
ನಂತರ ಮಾನ್ಯ ಸಿಎಂ ರವರಿಗೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ನೀಡಲಾಯಿತು. ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಮುಖಂಡರಾದ ಮಂಜುಳಾ ಗಾಡಗೋಳಿ, ಭಾರತಿ ಶೆಟ್ಟರ್, ಸರೋಜಾ ಮಡಿವಾಳರ, ಶೋಭಾ ಹಿರೇಮಠ, ಗಿರಿಜಾ ಭೂಸನೂರಮಠ, ಜಯಶ್ರೀ ದೇಸಾಯಿ, ರಾಜೇಶ್ವರಿ ಕೋರಿ, ಸುಜಾತಾ ಹಿರೇಮಠ, ಶೋಭಾ ಸಂತಭಾನವರ, ರಾಧಾ ರಾಟೊಳ್ಳಿ, ಸಂಗೀತಾ ಗೊರವನಕೊಳ್ಳ, ಶೈಲಾ ಮುದುಗಲ್, ರೂಪಾ ಅನಂತಪುರ,ಶೋಭಾ ಯಾದವ್, ರೇಣುಕಾ ಬೋಗಾರ್, ರೇಣುಕಾ ಹಣಸಿ, ಶಾರದಾ ತಾವರಗೇರಿ,ಹೇಮಾ ಸವದಿ, ಮುಂತಾದವರು ವಹಿಸಿದ್ದರು.