ಧಾರವಾಡ: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮತ್ತು ಪತ್ರಕರ್ತರ ಹಿತರಕ್ಷಣೆ ಮಾಡಬೇಕಾದ ವಾರ್ತಾ ಇಲಾಖೆಯ ನೌಕರನೊಬ್ಬ ಪತ್ರಕರ್ತನೊಬ್ಬನ ಮೇಲೆ ಮೃಗೀಯವಾಗಿ ಹಲ್ಲೆ ನಡೆಸಿರುವ ಘಟನೆ ಧಾರವಾಡದಲ್ಲಿ ಇಂದು ವರದಿಯಾಗಿದೆ.

Journalist attacked by news department employee | Suspended from service immediately |
ಇಂದು ಮಧ್ಯಾಹ್ನ ಪತ್ರಿಕೆಯ ಕೆಲಸದ ನಿಮಿತ್ತ ‘ಮೀಡಿಯಾ ಲಿಸ್ಟ್’ (ಮಾಧ್ಯಮ ಪಟ್ಟಿ) ಪಡೆಯಲು ಪತ್ರಕರ್ತ ಚಂದ್ರಶೇಖರ ಹಿರೇಮಠ ಅವರು ಧಾರವಾಡದ ವಾರ್ತಾ ಇಲಾಖೆ ಕಚೇರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ವಾರ್ತಾ ಸಹಾಯಕ ಸುರೇಶ ಮಡಿವಾಳರ ಉರ್ಫ್ ಹಿರೇಮಠ ಎಂಬುವವರು ಚಂದ್ರಶೇಖರ ಅವರ ಮೇಲೆ ಏಕಾಏಕಿ ಎರಗಿದ್ದಾರೆ.

ನೌಕರನು, ಪತ್ರಕರ್ತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೆ, ಅವರ ಮೊಬೈಲ್ ಫೋನ್ ಅನ್ನು ಕಿತ್ತೆಸೆದು ಜಖಂಗೊಳಿಸಿದ್ದಾರೆ. ಅಷ್ಟಕ್ಕೇ ನಿಲ್ಲದ ಸುರೇಶ್ ಹಿರೇಮಠ, ಚಂದ್ರಶೇಖರ ಅವರ ಕೊರಳಲ್ಲಿದ್ದ 5 ತೊಲೆ ಬಂಗಾರದ ಚೈನನ್ನು ಕಿತ್ತುಕೊಂಡು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಚೇರಿಯ ಆವರಣದಲ್ಲೇ ಪತ್ರಕರ್ತನ ಮೇಲೆ ಮೃಗನಂತೆ ವರ್ತಿಸಿದ ಅಧಿಕಾರಿಯ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.

ಸಾರ್ವಜನಿಕ ಆಕ್ರೋಶ:
ಪತ್ರಕರ್ತರಿಗೆ ರಕ್ಷಣೆ ಮತ್ತು ಸಹಕಾರ ನೀಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರೇ ಈ ರೀತಿ ವರ್ತಿಸಿರುವುದು ಪತ್ರಿಕಾ ರಂಗಕ್ಕೆ ಅವಮಾನ ಮಾಡಿದಂತಾಗಿದೆ. ಈ ಘಟನೆಯು ನಾಗರಿಕ ಸಮಾಜವು ತಲೆತಗ್ಗಿಸುವಂತಿದ್ದು, ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಘಟನೆಯ ನಂತರ ಪತ್ರಕರ್ತ ಚಂದ್ರಶೇಖರ ಹಿರೇಮಠ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.

ಜಿಲ್ಲಾ ಪತ್ರಕರ್ತರ ಸಂಘವು ಈ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥ ಅಧಿಕಾರಿಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದೆ.