ತ್ರಿಪುರಾ ಯುವ ವಿನಿಮಯ ಕಾರ್ಯಕ್ರಮಕ್ಕೆ ಜೆ. ಎಸ. ಎಸ. ಕೆ. ಹೆಚ್. ಕೆ. ತಾಂತ್ರಿಕ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು.
ಧಾರವಾಡ : ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ , ಈಶಾನ್ಯ ರಾಜ್ಯಗಳ ಅಭಿವೃದ್ಧಿ ಮಂತ್ರಾಲಯದ ಅಷ್ಟಲಕ್ಷ್ಮಿ ದರ್ಶನ 15 ದಿನಗಳ ಯುವ ವಿನಿಮಯ ಕಾರ್ಯಕ್ರಮಕ್ಕೆ, ತಾಂತ್ರಿಕ ಶಿಕ್ಷಣ ಇಲಾಖೆಯ ವತಿಯಿಂದ ನಗರದ ಪ್ರತಿಷ್ಠಿತ ಜನತಾ ಶಿಕ್ಷಣ ಸಮಿತಿಯ ಕೆ.ಎಚ್. ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆಯ, ವಿವಿಧ ವಿಭಾಗಗಳ 5 ವಿದ್ಯಾರ್ಥಿನಿಯರು ಮತ್ತು 5 ವಿದ್ಯಾರ್ಥಿಗಳು ಒಟ್ಟು 10 ಜನ ವಿದ್ಯಾರ್ಥಿಗಳು ಹಾಗೂ ಎನ್. ಎಸ್. ಎಸ್. ಕಾರ್ಯಕ್ರಮ ಅಧಿಕಾರಿ ಶಿವರಾಜ ದಾನವಾಡ್ಕರ್ ಅವರ ನೇತೃತ್ವದಲ್ಲಿ, ತ್ರಿಪುರಾ ರಾಜ್ಯದ, ಕೇಂದ್ರೀಯ ವಿಶ್ವವಿದ್ಯಾಲಯ ಅಗರ್ತಲಾದಲ್ಲಿ ನಡೆಯುವ 15 ದಿನಗಳ ಈ ಕಾರ್ಯಕ್ರಮಕ್ಕೆ, ದಿನಾಂಕ 4 ಜನವರಿ 2026ರಂದು, ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಹುಬ್ಬಳ್ಳಿ ಇಂದ ವಿಮಾನದ ಮೂಲಕ ಪ್ರಯಾಣ ಬೆಳೆಸಿ ಪಾಲ್ಗೊಳ್ಳುತ್ತಾರೆ.
ಯುವ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ, ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ್ ಪ್ರಸಾದ್ ಅವರು, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಾಲಕರು ಸಹ ಇಂತಹ ಅದ್ಭುತ ಕಾರ್ಯಕ್ರಮಕ್ಕೆ ನಮ್ಮ ಮಕ್ಕಳಿಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿ ಸಂತಸ ಪಟ್ಟರು, ಉಪಸ್ಥಿತರಿದ್ದ ಪ್ರಾಚಾರ್ಯ ಶ್ರೀಮತಿ ವೇದವತಿ ತಿವಾರಿ ಅವರು ನಮ್ಮ ಸಂಸ್ಥೆಯ ಸಾಧನೆಗಳನ್ನು ಗುರುತಿಸಿ ಇಂತಹ ಕಾರ್ಯಕ್ರಮವನ್ನು ನೀಡಿದ ತಾಂತ್ರಿಕ ಶಿಕ್ಷಣ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದರು. ಜೆಎಸ್ಎಸ್ ಮಂಜುನಾಥೇಶ್ವರ ಐಟಿಐ ಮಹಾವಿದ್ಯಾಲಯದ ಪ್ರಾಚಾರ್ಯ ಮಹಾವೀರ ಉಪಾಧ್ಯಾಯ, ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಈರಪ್ಪ ಪತ್ತಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





