ಶಿವನಾಗ ಬಡಾವಣೆಯಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಆರೂಪ.
ಹುಬ್ಬಳ್ಳಿ: ಹಲವು ದಿನಗಳಿಂದ ನೇಕಾರನಗರದ ಶಿವನಾಗ ಬಡಾವಣೆಯಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ನೇಕಾರನಗರ ಹಿತರಕ್ಷಣಾ ವೇದಿಕೆ ಹಾಗೂ ಹಿಂದೂಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಗೌರವಾನ್ವಿತ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಹಾಗೂ ಉಪಮಹಾಪೌರರಾದ ಸಂತೋಷ್ ಚವ್ಹಾಣ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಮನವಿಗೆ ಸ್ಪಂದಿಸಿದ ಮಹಾಪೌರರಾದ ಜ್ಯೋತಿ ಪಾಟೀಲ, ಉಪಮಹಾಪೌರ ಸಂತೋಷ್ ಚವ್ಹಾಣ ಹಾಗೂ ಪಾಲಿಕೆ ಸದಸ್ಯರಾದ ಶ್ರೀಮತಿ ಶಾಂತಾ ಹಿರೇಮಠ ಅವರು ವಲಯ ಸಹಾಯಕ ಆಯುಕ್ತರೊಂದಿಗೆ ಶಿವನಾಗ ಬಡಾವಣೆಯ ಸೂಕ್ಷ್ಮ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಪರಿಶೀಲನೆಯ ವೇಳೆ, ಮನೆಯ ಮಾಲೀಕರಾದ ಅಬ್ದುಲ್ ರೆಹಮಾನ್ ಮುಲ್ಲಾ ಅವರಿಗೆ ಅಕ್ರಮವಾಗಿ ನಿರ್ಮಿಸಿರುವ ವಜುಕಾನೆ ಹಾಗೂ ಕಟ್ಟಡದ ಇತರ ಅನಧಿಕೃತ ಭಾಗಗಳನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರು. ಜೊತೆಗೆ, ಮಹಾನಗರ ಪಾಲಿಕೆ ನೀಡಿರುವ ಅನುಮತಿಯಂತೆ ಆ ಕಟ್ಟಡದಲ್ಲಿ ಮನೆಯವರು ಮಾತ್ರ ವಾಸವಿರಬೇಕು ಎಂದು ಮಹಾಪೌರರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಕಾಲೋನಿಯ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಮಹಾಪೌರರಾದ ಜ್ಯೋತಿ ಪಾಟೀಲ ಅವರು, ಕಾನೂನುಬಾಹಿರ ನಿರ್ಮಾಣಗಳಿಗೆ ಯಾವುದೇ ರೀತಿಯ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ನೇಕಾರನಗರ ಹಿತರಕ್ಷಣಾ ವೇದಿಕೆಯ ಮುಖಂಡರಾದ ಶಿವಯ್ಯ ಹಿರೇಮಠ, ಶ್ರೀಧರ್ ಕಲಬುರ್ಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






