ಸಂಗೀತ, ಸಾಹಿತ್ಯ, ಕಲೆಯ ತವರೂರು ಧಾರವಾಡ – ಡಾ.ಕೃಷ್ಣ ಕಟ್ಟಿ

ಧಾರವಾಡ : ಧಾರವಾಡವನ್ನು “ಸಾಂಸ್ಕೃತಿಕ ಪರಂಪರೆ ನಗರ’ ಎಂದು ಸರಕಾರ ಘೋಷಣೆ ಮಾಡಬೇಕು ಎಂದು ಹಿರಿಯ ಸಾಹಿತಿ ಡಾ. ಕೃಷ್ಣ ಕಟ್ಟಿ ಹೇಳಿದರು.

ಅವರು ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಹಯೋಗದಲ್ಲಿ ಪಂ. ನಾರಾಯಣರಾವ ಮುಜುಂದಾರ ಸ್ಮೃತಿ ಸಂಗೀತ ಸಭಾ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಆಯೋಜಿಸಿದ ಪಂ. ನಾರಾಯಣರಾವ ಮುಜುಂದಾರ ಅವರ 25 ನೆಯ ಹಾಗೂ ಪಂ. ಸುಧೀಂದ್ರ ಮುಜುಂದಾರ ಅವರ 18 ನೆಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಾಹಿತ್ಯ, ಸಂಗೀತ, ಕಲೆ ಹೀಗೆ ಸಂಸ್ಕೃತಿಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಧಾರವಾಡವನ್ನು ರಾಜ್ಯಕ್ಕೆ ಕರ್ನಾಟಕ ಎನ್ನುವ ಹೆಸರು ನಾಮಕರಣಗೊಂಡು 50 ನೇ ವರ್ಷಾಚರಣೆ ಆಚರಿಸುತ್ತಿರುವ ಸಂದರ್ಭದಲ್ಲಿ ಸರಕಾರ ಧಾರವಾಡವನ್ನು ʼಸಾಂಸ್ಕೃತಿಕ ಪರಂಪರೆ ನಗರʼ ಎಂದು ಘೋಷಿಸಿ ನಗರದ ಮೆರಗು ಇನ್ನಷ್ಟು ಹೆಚ್ಚಿಸಬೇಕು ಎಂದರು.
ನಾರಾಯಣರಾವ ಮುಜುಂದಾರ ಅವರಂಥ ಧಾರವಾಡದ ಹಲವು ಕಲಾವಿದರು ಗುರುಕುಲ ಪದ್ಧತಿಯಲ್ಲಿ ವಿದ್ಯೆ ನೀಡಿ ಹಲವು ಶಿಷ್ಯರನ್ನು ರೂಪಿಸಿದ್ದಾರೆ. ಬಡತನ ಅನುಭವಿಸಿದರೂ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಶಿಷ್ಯರು ಈ ಸಂಗೀತ ನಂದಾದೀಪವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಧಾರ ಎಂದರೆ ಹರಿಯುವುದು. ಧಾರವಾಡದಲ್ಲಿ ನದಿಯಂತೆ ಸೃಜನಶೀಲತೆ ಪೀಳಿಗೆಯಿಂದ ಪೀಳಿಗೆಗೆ ಪ್ರವಹಿಸುತ್ತಿದೆ. ಸಾಂಸ್ಕೃತಿಕ ಗಂಗಾವಳಿ ಇಲ್ಲಿದೆ. ಗುರು-ಶಿಷ್ಯ ಪರಂಪರೆ ಮುಂದುವರೆದಿದೆ. ಬೃಹತ್ ಮರವನ್ನು ಹತ್ತು ಹಲವು ಪಕ್ಷಿಗಳು ಆಶ್ರಯಿಸುವಂತೆ ಕಲಾವಿದರು ಧಾರವಾಡವನ್ನು ಆಶ್ರಯಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಪಂ. ನಾರಾಯಣರಾವ ಮುಜುಂದಾರ ಹಾಗೂ ಪಂ. ಸುಧೀಂದ್ರ ಮುಜುಂದಾರ ಅವರಿಗೆ ಸಂಗೀತ ಎಂಬುದು ಆತ್ಮತೃಪ್ತಿಯ ಕಾಯಕ ಎಂದರು.

ಡಾ. ಹ.ವೆಂ. ಕಾಖಂಡಿಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಂ. ನಾರಾಯಣ ಮುಜುಂದಾರ ಬಡತನದ ಬದುಕಿನಲ್ಲೂ ಶಿಷ್ಯರಿಗೆ ವಿದ್ಯೆ ಧಾರೆ ಎರೆದ ಮಹಾನುಭಾವರು. ಗುರುಕುಲ ಪದ್ಧತಿಯಲ್ಲಿ ಬೋಧನೆ ಮಾಡಿದ ಅವರು ಶಿಷ್ಯರನ್ನು ರೂಪಿಸುತ್ತಿದ್ದ ರೀತಿ ಅನನ್ಯವಾಗಿತ್ತು. ವಿನಯ ಅವರಿಗೆ ಭೂಷಣವಾಗಿತ್ತು. ಶಿಸ್ತು ಹಾಗೂ ಪರಿಶ್ರಮದ ಕಾರಣದಿಂದ ಅವರ ಸ್ವರಗಳಲ್ಲಿ ಸ್ಪಷ್ಟತೆಯಿತ್ತು. ಸಾಧನೆ ಮೂಲಕ ಸಂಗೀತವನ್ನು ಸಿರಿವಂತಗೊಳಿಸಿದರು. ಮುಜುಂದಾರ ಕುಟುಂಬದ ಸದಸ್ಯರು ಸಂಗೀತ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮುಜುಂದಾರ ಕುಟುಂಬದ ಸಂಗೀತ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಹೇಳಿದರು. ವೇದಿಕೆ ಮೇಲೆ ಗೋಪಾಲ ಮುಜುಂದಾರ, ಡಾ. ಮುಕ್ತಾ ಮುಜುಂದಾರ ಇದ್ದರು.

ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಉಷಾ ಕುಲಕರ್ಣಿ, ವಿನಯ ಮುಜುಂದಾರ, ರಶ್ಮಿ ಕಾಖಂಡಿಕಿ, ರಾಧಿಕಾ ಕಾಖಂಡಿಕಿ, ಶ್ರುತಿ ಅರ್ಚಕ, ನೂರ‍ಜಹಾನ್ ನದಾಫ್, ಡಾ. ಮುಕ್ತಾ ಮುಜುಂದಾರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಶಾಂತಲಿಂಗ ಹೂಗಾರ, ನಿಸಾರ್ ಅಹಮದ್, ಜಯತೀರ್ಥ ಪಂಚಮುಖಿ, ಸುರೇಶ ನಿಡಗುಂದಿ,
ಡಾ.ಪರುಶರಾಮ ಕಟ್ಟಿ ಸಂಗಾವಿ, ಕಿರಣ ಅಯಾಚಿತ, ಅಶೋಕ ನಿಂಗೋಲಿ,ಸಾಮನ್ಯ ಮೊದಲಾದವರು ಸಾಥ್ ನೀಡಿದರು.

ಗಣ್ಯರಾದ ಡಾ.ಅರವಿಂದ ಯಾಳಗಿ, ಡಾ.ಎಂ ಎಸ್ ಪಾಟೀಲ, ಡಾ.ವಾದಿರಾಜಾಚಾರ್ಯ ತಡಕೋಡ, ಅಶೋಕ ಸೋನಕರ, ಕೆ ಬಿ ಬಳ್ಳೂರ ಮೊದಲಾದವರು ಉಪಸ್ಥಿತರಿದ್ದರು.ರವಿ ಕುಲಕರ್ಣಿ ನಿರೂಪಿಸಿದರು.
ಡಾ.ಶ್ರೀನಿವಾಸ ಕಲ್ಲಾಪುರ ಪ್ರಾರ್ಥನೆ ಮಾಡಿದರು. ಡಿ.ವಿ. ಕುಲಕರ್ಣಿ ವಂದಿಸಿದರು.

  • Independent Sangram News

    Related Posts

    ಕನ್ನಡ ರಾಜ್ಯೋತ್ಸವ ಮತ್ತು ಈಶ್ವರ ಸಣಕಲ್ಲ ದತ್ತಿ ಅಂಗವಾಗಿ ಉಪನ್ಯಾಸ ಹಾಗೂ ಕನ್ನಡ ಗೀತ ಗಾಯನ ಕಾರ್ಯಕ್ರಮ

    ಧಾರವಾಡ  : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ಮತ್ತು ಕೆ.ಪಿ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಈಶ್ವರ ಸಣಕಲ್ಲ ದತ್ತಿ ಅಂಗವಾಗಿ ಉಪನ್ಯಾಸ ಹಾಗೂ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ಧಾರವಾಡ ಕೆ.ಪಿ.ಇ.ಎಸ್ ಪದವಿ…

    ವಕೀಲರ ರಕ್ಷಣೆ – ಭದ್ರತೆಗಾಗಿ ತುರತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ

    ಧಾರವಾಡ : ಹೊಸೊರ ವಕೀಲರ ಸಂಘದ ವೃತ್ತಿ ನಿರತ ವಕೀಲರ ಮಾರಣಾಂತಿಕ ಹತ್ಯೆಯನ್ನು ಧಾರವಾಡ ವಕೀಲರ ಸಂಘ ತೀರ್ವವಾಗಿ ಖಂಡಿಸುತ್ತದೆ ವಕೀಲರ ರಕ್ಷಣೆ ಮತ್ತು ಭದ್ರತೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಆಗ್ರಹಿಸಿ ನಗರದಲ್ಲಿ ಜಿಲ್ಲಾ ವಕೀಲರ…

    RSS
    Follow by Email
    Telegram
    WhatsApp
    URL has been copied successfully!