
ಕುಂದಗೋಳ: ಧಾರವಾಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಜನರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಅಲ್ಲದೇ ತಮ್ಮ ಜನ, ಜಾನುವಾರುಗಳ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಎಮ್.ಆರ್.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಂದು ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದೆ, ಹವಾಮಾನ ವರದಿ ಪ್ರಕಾರ ಇನ್ನೂ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ, ಅಲ್ಲದೇ ಇಂದು ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿ ಮೈಲಾರಪ್ಪ ಬಸವರಾಜ ಉಣಕಲ್ (18) ಯುವಕ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ.
ಯಾರೂ ಕೂಡಾ ಮಳೆ ಸಂದರ್ಭದಲ್ಲಿ ಅನಾವಶ್ಯಕವಾಗಿ ಹೊರಗಡೆ ಇರಬಾರದು, ಅಲ್ಲದೇ ತಾಲೂಕಿನ ಅಧಿಕಾರಿಗಳಿಗೆ ಕೂಡಲೇ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸೂಚನೆ ನೀಡಲಾಗಿದೆ.
ಯಾರೂ ಕೂಡಾ ಈ ಸಂದರ್ಭದಲ್ಲಿ ಭಯ ಪಡುವ ಅಗತ್ಯವಿಲ್ಲ, ನಿಮ್ಮೊಂದಿಗೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಇದೆ ಎಂದಿದ್ದಾರೆ.
ಅಲ್ಲದೇ ಸಿಡಿಲು ಬಡಿದು ಸಾವನ್ನಪ್ಪಿದ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗುವುದು ಎಂದಿದ್ದಾರೆ.