ಬೇಂದ್ರೆ ನೆಲದಲ್ಲಿ ಗಂಗಾವತರಣ

ಧಾರವಾಡ 27 : ಧಾರವಾಡ ನೆಲದ ಸತ್ವವನ್ನು ಹೀರಿ ಧಾರವಾಡದಲ್ಲಿಯೇ ಹುಟ್ಟಿ ಬೆಳೆದ ವರಕವಿ ಬೇಂದ್ರೆ ಅವರು ಜನಮಾನಸ ಕವಿ, ದಿನನಿತ್ಯದ ಆಡು ಮಾತಿನಲ್ಲಿ ಜೀವನದರ್ಶನದ ಒಳನೋಟಗಳನ್ನು ನೀಡುವ ಸಾವಿರಾರು ಕವಿತೆಗಳನ್ನು ಬರೆದು ಇಂದಿಗೂ ಹಳ್ಳಿಗರ ಮುಗ್ಧ ಮನಸ್ಸು ಹಾಗೂ ಪ್ರಜ್ಞಾವಂತ ನಾಗರಿಕರ ನರ ನಾಡಿಗಳಲ್ಲಿ ಚೈತನ್ಯ ತುಂಬುತ್ತಿದ್ದಾರೆ.

ಗಂಗಾವತರಣ ವರಕವಿ ಬೇಂದ್ರೆಯವರ ಬದುಕು ಬರಹಗಳನ್ನು ಆಧರಿಸಿ ಬರೆದ ನಾಟಕ, ಬೆಂಗಳೂರಿನ ರಂಗ ಸೌರಭ ತಂಡದವರು ಈ ನಾಟಕವನ್ನು ಧಾರವಾಡದ ಸೃಜನಾರಂಗ ಮಂದಿರದಲ್ಲಿ ದಿನಾಂಕ 26 ರಂದು ಸಂಜೆ ಹೃದಯಂಗಮವಾಗಿ ಪ್ರಸ್ತುತಪಡಿಸಿದರು. ಬೇಂದ್ರೆ ಅವರ ಬದುಕಿನ ಹಲವು ಪುಟಗಳನ್ನು ತೆರೆಯುತ್ತ, ಅವರ ಉದಾತ್ತ ಜೀವನದ ತಾದಾತ್ಮತೆಯನ್ನು ತೋರುವ ಹಲವು ಹಾಡುಗಳಿಂದ ಹಾಗೂ ನೃತ್ಯ ರೂಪಕಗಳಿಂದ ಜನಮನವನ್ನು ರಂಜಿಸಿದರು. ಆಧುನಿಕ ಜೀವನದ ಶುಷ್ಕ ಆಡಂಬರತೆಗೆ ಮನಸೋತ ಇಂದಿನ ಪೀಳಿಗೆಯವರ ತೊಳಲಾಟವನ್ನು ಸಮರ್ಥವಾಗಿ ಬಿಂಬಿಸಿ ಬೇಂದ್ರೆಯವರ ಆತ್ಮ ಸಾಕ್ಷಾತ್ಕಾರದ ನೆಲೆಯಲ್ಲಿ ಜೀವನ ದರ್ಶನ ಮೂಡಿಸಿದ ಪರಿ ಅದ್ಭುತವಾಗಿತ್ತು. ಇಂದಿನ ಲೇಖಕರ ಪಾತ್ರದಲ್ಲಿ ಶ್ರೀನಿವಾಸ್ ಮೂರ್ತಿಯವರು ತಮ್ಮ ತೊಳಲಾಟವನ್ನು ವ್ಯಕ್ತಪಡಿಸುತ್ತ ನಮ್ಮ ಬದುಕಿನ ಸಾಧ್ಯತೆಗಳ ಬಗ್ಗೆ ಹಲವಾರು ಮೂಲಭೂತ ರಸ್ತೆಗಳನ್ನು ಎತ್ತಿದ ರೀತಿ ಮನೋಜ್ನವಾಗಿತ್ತು.

ಲೇಖಕ ನಿರ್ದೇಶಕ ರಾಜೇಂದ್ರ ಕಾರಂತರು ಬೇಂದ್ರೆಯವರ ಆತ್ಮ ರೂಪದಲ್ಲಿ ಸಮರ್ಥ ಅಭಿನಯವನ್ನು ನೀಡಿ ಸೂಕ್ತ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾದರು. ಬೇಂದ್ರೆ ಅವರ ಹಾಡುಗಳನ್ನು ಸೂಕ್ತ ಕ್ರಮದಲ್ಲಿ ಉಪಯೋಗಿಸಿಕೊಂಡು ನೃತ್ಯ ರೂಪಕಗಳ ಮೂಲಕ ಭಾವನಾತ್ಮಕ ವಾತಾವರಣ ನಿರ್ಮಾಣದಲ್ಲಿ ಹಿನ್ನೆಲೆ ಸಂಗೀತಗಾರರು ಯಶಸ್ವಿಯಾದರು.

ಬೇಂದ್ರೆಯವರ ಮೊಮ್ಮಗಳು ಶ್ರೀಮತಿ ಪುನರ್ವಸು ಬೇಂದ್ರೆಯವರು, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಧಾರವಾಡ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಈರೇಶ ಅಂಚಟಗೇರಿ, ಕೃಷ್ಣ ಕುಲಕರ್ಣಿ, ನಿವೃತ್ತ ಹಿರಿಯ ಅಧಿಕಾರಿ, ಕೆನರಾ ಬ್ಯಾಂಕ್ ಹಾಗೂ ವರಕವಿ ಬೇಂದ್ರೆಯವರ ಏಕವ್ಯಕ್ತಿ ಪ್ರದರ್ಶನದ ಮೂಲಕ ಜನರ ಮನೆ ಮಾತಾಗಿರುವ ಅನಂತ ದೇಶಪಾಂಡೆ ಅವರು ಕೊನೆಯಲ್ಲಿ ಗಂಗಾವತರಣ ನಾಟಕದ ಸರ್ವ ಕಲಾವಿದರನ್ನು ಹಾಗೂ ನಿರ್ದೇಶಕರನ್ನು ಅಭಿನಂದಿಸಿ ಧಾರವಾಡ ಜನತೆಯ ಪರವಾಗಿ ಬೇಂದ್ರೆಯವರ ಹುಟ್ಟು ನೆಲದಲ್ಲಿಯೇ ಉತ್ತಮ ನಾಟಕ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಸಂಘಟಕ ಹರ್ಷ ಡಂಬಳ ಅವರು ಈ ನಾಟಕಕ್ಕೆ ಪ್ರಾಯೋಜಕತ್ವ ನೀಡಿದ ಸಂಘ ಸಂಸ್ಥೆಗಳನ್ನು ಹಾಗೂ ವೈಯಕ್ತಿಕ ದಾನಿಗಳನ್ನು ಅಭಿನಂದಿಸಿ ಸ್ಮರಿಸಿದರು.

ಕಳೆದ ಹಲವಾರು ವರ್ಷಗಳಿಂದ ದೇಶಾದ್ಯಂತ ಪ್ರದರ್ಶನಗೊಂಡ ಈ ಅಪರೂಪದ ನಾಟಕವನ್ನು ದಾರವಾಡದಲ್ಲಿ ಸಂಘಟಿಸಿದ ಸ್ನೇಹ ಪ್ರತಿಷ್ಠಾನ ಹಾಗೂ ಜಿ ಬಿ ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಅಣ್ಣಾಜಿರಾವ್ ಶಿರೂರ್ ರಂಗಮಂದಿರ ಪ್ರತಿಷ್ಠಾನದವರು ಅಭಿನಂದನೀಯರಾಗಿದ್ದಾರೆ.

  • Related Posts

    ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

    ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    RSS
    Follow by Email
    Telegram
    WhatsApp
    URL has been copied successfully!