ಧಾರವಾಡ 27 : ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಅತ್ಯಂತ ವಿಶಿಷ್ಟ ರೀತಿಯಲ್ಲಿ ಗಣರಾಜ್ಯ ದಿನವನ್ನು ಆಚರಿಸಲಾಯಿತು.
ಸಾಮಾನ್ಯವಾಗಿ ಹಿರಿಯ ಅಧಿಕಾರಿಗಳು ಧ್ವಜಾರೋಹಣ ನೆರವೇರಿಸುವುದು ವಾಡಿಕೆ. ಆದರೆ, ಶಹರ ಠಾಣೆಯ ಸಿಪಿಐ ಎನ್.ಎಸ್.ಕಾಡದೇವರ ಅವರು, ಠಾಣೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ತಮಗಿಂತ ಕೆಳ ಹಂತದಲ್ಲಿರುವ
ಎಎಸ್ಐ ಬಸವರಾಜ ಕುರಿ ಅವರಿಂದ ಧ್ವಜಾರೋಹಣ ನೆರವೇರಿಸಿ ಸಂಭ್ರಮಿಸಿದರು.
ಸಿಪಿಐ ಕಾಡದೇವರ ಅವರು ತಮ್ಮನ್ನು ಧ್ವಜಾರೋಹಣಕ್ಕೆ ಆಮಂತ್ರಿಸಿದ್ದರಿಂದ ಒಂದು ಕ್ಷಣ ಆಶ್ಚರ್ಯಚಕಿತರಾದರು ,ಅಲ್ಲದೇ ಧ್ವಜಾರೋಹಣ ಮಾಡಲು ನಮ್ರತೆಯಿಂದ ನಿರಾಕರಿಸಿದ ಕುರಿ ಅವರು, ನೀವೇ ಧ್ವಜಾರೋಹಣ ನಡೆಸಲು ಕಾಡದೇವರ ಅವರಲ್ಲಿ ವಿನಂತಿಸಿದರು.
ಆದರೂ, ಪಟ್ಟುಬಿಡದ ಕಾಡದೇವರ ಅವರು ಕುರಿಯವರ ಹಸ್ತದಿಂದ ಧ್ವಜಾರೋಹಣ ನೆರವೇರಿಸಿ ಸಂಭ್ರಮಿಸಿದರು.
ಮುಂದಿನ ತಿಂಗಳು ಸೇವೆಯಿಂದ ನಿವೃತ್ತಿ ಹೊಂದಲಿರುವ ಎಎಸ್ಐ ಬಸವರಾಜ ಕುರಿ ಅವರಿಂದ ಧ್ವಜಾರೋಹಣ ನಡೆಸುವ ಮೂಲಕ ಔದಾರ್ಯ ಮೆರೆದ ಸಿಪಿಐ ಕಾಡದೇವರ ಅವರ ನಡೆಯನ್ನು ಎಲ್ಲ ಸಿಬ್ಬಂದಿ ಮೆಚ್ಚಿ ಖುಷಿ ಪಟ್ಟರು.