
ಧಾರವಾಡ ಫೆ.1೨: ಖ್ಯಾತ ಹಿಂದೂಸ್ತಾನಿ ಗಾಯಕರಾಗಿದ್ದ ದಿ. ಡಾ. ಮಲ್ಲಿಕಾರ್ಜುನ ಮನಸೂರ ಅವರ ಹೆಸರಿನಲ್ಲಿ ಆರಂಭಿಸಲಾಗಿದ್ದ ಡಾ.ಮಲ್ಲಿಕಾರ್ಜುನ ಮನಸೂರ ಸಂಗೀತ ಪಾಠಶಾಲೆಯನ್ನು ಬರುವ ಜೂನ್ ತಿಂಗಳಿಂದ ಪುನರಾರಂಭಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಟ್ರಸ್ಟ್ ಕಾರ್ಯಕಾರಿ ಸಮಿತಿ ಸಭೆ ಜರುಗಿಸಿ, ಮಾತನಾಡಿದರು.
ಸಂಗೀತ ಮತ್ತು ಸಾಹಿತ್ಯಕ್ಕೆ ಧಾರವಾಡದಲ್ಲಿರುವ ಇತಿಹಾಸ ಮಹತ್ವ ಮತ್ತು ಅವಕಾಶಗಳು ಬೇರೆ ಜಿಲ್ಲೆಗಳಲ್ಲಿ ಕಡಿಮೆ ಡಾ.ಮಲ್ಲಿಕಾರ್ಜುನ ಮನಸೂರ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಸಂಗೀತ ಕಚೇರಿ ಆಯೋಜಿಸಲು ಕ್ರಿಯಾಯೋಜನೆ ರೂಪಿಸಬೇಕು. ಹಿಂದೂಸ್ತಾನಿ ಸಂಗೀತ ಪರಂಪರೆ ಮುಂದುವರಿಯಲು ಮನಸೂರ ಟ್ರಸ್ಟ್‍ದಿಂದ ಕ್ರಿಯಾಶೀಲವಾದ ಕಾರ್ಯ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ ಎಂದು ಅವರು ಹೇಳಿದರು.
ಡಾ. ಮಲ್ಲಿಕಾರ್ಜುನ ಮನಸೂರ ಅವರ ಹೆಸರಿನಲ್ಲಿ ತೆರೆಯಲಾಗಿದ್ದ ಸಂಗೀತ ಪಾಠಶಾಲೆ ಕಾರಣಾಂತರಗಳಿಂದ ನಿಂತು ಹೋಗಿದೆ ಅದನ್ನು ಬರುವ ಜೂನ್ ತಿಂಗಳಲ್ಲಿ ಪುನರ್ ಪ್ರಾರಂಭಿಸಲು ಕ್ರಮವಹಿಸಲಾಗುವುದು. ಇದರಿಂದ ಯುವ ಪ್ರತಿಭೆಗಳಿಗೆ ಅವಕಾಶಗಳು ಮತ್ತು ಹಿಂದೂಸ್ತಾನಿ ಸಂಗೀತ ಪರಂಪರೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪದ್ಮಶ್ರೀ ಎಂ. ವೆಂಕಟೇಶಕುಮಾರ ಅವರಂತ ದಿಗ್ಗಜರು ಟ್ರಸ್ಟ್ ಸದಸ್ಯರಾಗಿದ್ದಾರೆ. ಅವರ ಸಲಹೆ, ಮಾರ್ಗದರ್ಶನದಲ್ಲಿ ಉತ್ತಮವಾದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಕೆಲವು ಸದಸ್ಯರ ನಿಧನದಿಂದಾಗಿ ಟ್ರಸ್ಟ್ ಕಾರ್ಯಕಾರಿಕೆ ಹೊಸ ಸದಸ್ಯರನ್ನು ನೇಮಿಸಲು ಸರಕಾರಕ್ಕೆ ಸಭೆಯ ನಡುವಳಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದ ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಬರುವ ಮಾರ್ಚ್ 10 ರಂದು ಸಂಘಟಿಸಲು ತಿಳಿಸಿದ ಅವರು, ಶೀಘ್ರದಲ್ಲಿ ಜಿಲ್ಲೆಯಲ್ಲಿ ಇರುವ ಎಲ್ಲ ಸರಕಾರಿ ಟ್ರಸ್ಟ್‍ಗಳ ಸಭೆ ಕರೆದು, ಟ್ರಸ್ಟ್‍ಗಳ ಆಶಯಗಳಿಗೆ ಅನುಗುಣವಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ 2024 – 25 ನೇ ಸಾಲಿನ ಕ್ರಿಯಾಯೋಜನೆ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಿ, ಅನುಮೋದಿಸಲಾಯಿತು.
ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ವಿಷಯವನ್ನು ಮಂಡಿಸಿದರು.
ಟ್ರಸ್ಟ್ ಸದಸ್ಯರಾದ ಪದ್ಮಶ್ರೀ ಎಂ. ವೆಂಕಟೇಶಕುಮಾರ, ಡಾ. ದಿಲೀಪ್ ದೇಶಪಾಂಡೆ, ಶಂಕರ ಕುಂಬಿ, ಅಕ್ಕಮಹಾದೇವಿ ಆಲೂರ ಅವರು ಮಾತನಾಡಿ, ಸಲಹೆ, ಸೂಚನೆ ನೀಡಿದರು. ನಾಮ ನಿರ್ದೇಶಿತ ಸರಕಾರಿ ಇಲಾಖೆಗಳ ಪರವಾಗಿ ಪೋಲಿಸ್ ಅಧಿಕಾರಿ ಪ್ರಮೋದ ಎಲಿಗಾರ, ಸಹಾಯಕ ವಾರ್ತಾಧಿಕಾರಿ ಡಾ. ಸುರೇಶ ಹಿರೇಮಠ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತಕರು ಭಾಗವಹಿಸಿದ್ದರು.