ಧಾರವಾಡ : ಏಡ್ಸ್ ರೋಗದ ಬಗ್ಗೆ ಭಯ ಬೇಡ. ಮುಂಗ್ರಾತೆ, ಜಾಗೃತಿ, ಅರಿವು ಅಗತ್ಯವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಏಡ್ಸ್ ರೋಗಿಗಳ ಪ್ರಮಾಣ, ಹರಡುವಿಕೆ ಇಳಿಮುಖವಾಗಿದ್ದು, ಈಗ ಜಿಲ್ಲೆಯಲ್ಲಿ ಏಡ್ಸ್ ಪಾಜಿಟಿವಿಟಿ ದರ ಶೇ. 0.38 ರಷ್ಟಿದೆ. ಇದನ್ನು ಶೂನ್ಯಕ್ಕೆ ಇಳಿಸಿ, ಧಾರವಾಡ ಜಿಲ್ಲೆಯನ್ನು ಏಡ್ಸ್ಸ್ ಮುಕ್ತ ಜಿಲ್ಲೆಯಾಗಿ ಮಾಡಲು ಎಲ್ಲರೂ ಶ್ರಮಿಸೋಣ, ಅದಕ್ಕಾಗಿ ಅಗತ್ಯ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಸಂಘಟಿಸೋಣ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು (ಡಿ.01) ಬೆಳಿಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಏಡ್ಸ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿ, ಚಾಲನೆ ನೀಡಿ, ಮಾತನಾಡಿದರು.
ಎಚ್.ಐ.ವಿ ಮತ್ತು ಏಡ್ಸ್ ಕಾಯಿಲೆಯು ಕಳೆದ 40 ವರ್ಷಗಳಿಂದ ಮಾನವ ಜನಾಂಗವನ್ನು ಕಾಡುತ್ತಿದೆ. ಏಡ್ಸ್ ರೋಗವನ್ನು ಸಮಾಜದಿಂದ ಸಂಪೂರ್ಣವಾಗಿ ತೊಲಗಿಸಲು ಜಿಲ್ಲಾ ಮಟ್ಟದಿಂದ ತಾಲೂಕು ಹಾಗೂ ಗ್ರಾಮ ಮಟ್ಟದವರೆಗೆ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳನ್ನು ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಏಡ್ಸ್ ಕುರಿತು ಜನಜಾಗೃತಿಗಾಗಿ ಐಇಸಿ  ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಎಲ್ಲ ತಾಲೂಕು, ಗ್ರಾಮಗಳಲ್ಲಿ ಜಾನಪದ ಕಲಾ ತಂಡಗಳ ಮೂಲಕ ಅರಿವು ಮೂಡಿಸಿ, ಮನೆಮನೆಗೆ ಮಾಹಿತಿ ತಲುಪಿಸಲಾಗುತ್ತಿದೆ. ಕರಪತ್ರ, ಪೊಸ್ಟರ್, ಬಿತ್ತಿಪತ್ರ ಮತ್ತು ಮಾಧ್ಯಮಗಳ ಮೂಲಕ ಏಡ್ಸ್ ಕುರಿತು ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಯುವ ಸಮೂಹ ಕೇಂದ್ರಿಕರಿಸಿ, ವಿವಿಧ ರೀತಿಯ ಅರಿವು ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಸಮಗ್ರ ಆಪ್ತಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳು 11, ಎಪ್-ಐಸಿಟಿಸಿ ಇರುವ ಪ್ರಾಥಮಿಕ ಆರೋಗ್ಯಕೇಂದ್ರಗಳು 32, ಪಿಪಿಪಿ ಕೇಂದ್ರ 1, ಪೂರ್ಣ ಪ್ರಮಾಣದ ಏ.ಆರ್.ಟಿ ಚಿಕಿತ್ಸಾ ಕೇಂದ್ರಗಳು 2, ಲೈಂಗಿಕ ಸಂಪರ್ಕದ ರೋಗಗಳ ಚಿಕಿತ್ಸಾ ಕೇಂದ್ರಗಳು 2, ರಕ್ತ ನಿಧಿ ಕೇಂದ್ರಗಳು 10, ಬೆಂಬಲ ಮತ್ತು ಆರೈಕೆ ಕೆಂದ್ರಗಳು ಸೇರಿ ವಿವಿಧ 5 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಏಡ್ಸ್ ಮತ್ತು ಎಚ್ಐವಿ ಸೋಂಕಿತರಿಗೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆ, ಉಚಿತ ಚಿಕಿತ್ಸೆ, ಉಚಿತ ಔಷಧಿ, ಆರೈಕೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸೋಂಕಿತ ಅನಾಥ ಮತ್ತು ಅಪಾಯದ ಅಂಚಿನಲ್ಲಿರುವ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಅಗತ್ಯ ಕ್ರಮ ವಹಿಸಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ವಿಶೇಷ ಪಾಲನಾ ಯೋಜನೆಯಡಿ ಇಲ್ಲಿಯವರೆಗೆ 2,037 ಮಕ್ಕಳಿಗೆ ಸೌಲಭ್ಯ ನೀಡಲಾಗಿದೆ. ಎಚ್ಐವಿ, ಏಡ್ಸ್ದೊಂದಿಗೆ ಬದಕುತ್ತಿರುವ 371 ಜನರಿಗೆ ಅನ್ನ ಅಂತ್ಯೊದಯ ಕಾರ್ಯಕ್ರಮದಲ್ಲಿ ನೆರವು ನೀಡಲಾಗಿದ್ದು, ರಾಜೀವ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ 476 ಜನರಿಗೆ ವಸತಿ ಸೌಲಭ್ಯ ನೀಡಲು ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿದೆ. ವೃತಿ ಕೌಶಲ್ಯ ಸೇರಿದಂತೆ ವಿವಿಧ ಸರಕಾರಿ ಸೌಲಭ್ಯಗಳನ್ನು ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್.ದೊಡ್ಡಮನಿ ಅವರು ಮಾತನಾಡಿ, ಎಚ್ಐವಿ, ಏಡ್ಸ್ ಸೋಂಕಿತರಿಗೆ, ಭಾದಿತರಿಗೆ ಸಮಾಜದಲ್ಲಿ ಮಾನಸಿಕ ಬೆಂಬಲ ಸೀಗಬೇಕು. ಅಗತ್ಯ ಚಿಕಿತ್ಸೆ ದೊರಕಿಸಲು ನೇರವಾಗಬೇಕು. ಕಾನೂನು ಸೇವೆಗಳ ಪ್ರಾಧಿಕಾರದಿಂದ ಎಚ್ಐವಿ ಭಾದಿತರಿಗೆ ಉಚಿತ ಕಾನೂನು ಅರಿವು-ನೆರವು ನೀಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಹೊನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ರವೀಂದ್ರ ಬೋವೆರ ಸ್ವಾಗತಿಸಿದರು. ಐಇಸಿ ವಿಭಾಗದ ಅಧಿಕಾರಿ ಬಿ.ಆರ್.ಪತ್ತಾರ ಕಾರ್ಯಕ್ರಮ ನಿರೂಪಿಸಿದರು. ಜಾನಪದ ಕಲಾವಿದ ಶಂಭಯ್ಯ ಹಿರೇಮಠ ನೇತೃತ್ವದ ಸಿವೈಸಿಡಿ ಜಾನಪದ ಕಲಾ ತಂಡದಿಂದ ಜಾನಪದ ರೂಪಕ ಪ್ರದರ್ಶಿಸಲಾಯಿತು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಆರೋಗ್ಯ ಇಲಾಖೆ ವಿವಿಧ ಕಾರ್ಯಕ್ರಮ ಅಧಿಕಾರಿಗಳು, ತಾಲೂಕ ವೈದ್ಯಾಧಿಕಾರಿಗಳು, ಸರ್ಕಾರೇತರ ಸಂಸ್ಥೆಯ ಸದಸ್ಯರು, ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ವಿವಿಧ ಪಿಯು, ಪದವಿ, ನಸಿರ್ಂಗ್ ಮತ್ತು ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಏಡ್ಸ್ ಕುರಿತು ಜನಜಾಗೃತಿ ಜಾಥಾನಡಿಗೆಯು ಡಿಎಚ್ಓ ಕಚೇರಿಯಿಂದ ಆರಂಭಗೊಂಡು, ಧಾರವಾಡ ಹಳೆ ಬಸ್ ನಿಲ್ದಾಣ, ವಿವೇಕಾನಂದ ಸರ್ಕಲ್, ಆಲೂರು ವೆಂಕಟರಾವ ವೃತ್ತ ಮೂಲಕ ಡಿಎಚ್ಓ ಕಚೇರಿಗೆ ತಲುಪಿತು.