ಹುಬ್ಬಳ್ಳಿಯಲ್ಲಿ ಕಾರ್ಮಿಕ ಇಲಾಖೆ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಹುಬ್ಬಳ್ಳಿ : ಕಾರ್ಮಿಕರ ಹಿತದೃಷ್ಟಿಯಿಂದ ಧಾರವಾಡ ಜಿಲ್ಲೆಯಲ್ಲಿ ಎರಡು ಅಂಬೇಡ್ಕರ್ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಹೇಳಿದರು.
ಗೋಕುಲ ರಸ್ತೆಯ ಗೋಕುಲ ಗಾರ್ಡನ್‌ನಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಧಾರವಾಡ ಜಿಲ್ಲೆಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಟೂಲ್ಸ್ ಕಿಟ್ ವಿತರಣೆ, ಧನ ಸಹಾಯದ ಮಂಜೂರಾತಿ ಆದೇಶದ ಚೆಕ್ ವಿತರಣೆ, ಅಸಂಘಟಿತ ಕಾರ್ಮಿಕರಿಗೆ ಅಪಘಾತ ಪರಿಹಾರ ಧನ ಸಹಾಯದ ಚೆಕ್ ಮತ್ತು ನೋಂದಣಿ ಪ್ರಮಾಣ ಪತ್ರಗಳ ವಿತರಣೆ ಹಾಗೂ ವಿವಿಧ ಕಾರ್ಮಿಕ ಕಾಯ್ದೆಗಳಡಿ ಕಾರ್ಮಿಕರಿಗೆ ಮಂಜೂರಾದ ಆದೇಶದ ಚೆಕ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ 82 ರಿಂದ 85 ರಷ್ಟು ಅಸಂಘಟಿತ ಕಾರ್ಮಿಕರು ಇದ್ದಾರೆ. ಅದರಲ್ಲಿ 25 ವರ್ಗಗಳ ಅಸಂಘಟಿತ ವಲಯಗಳನ್ನು ಗುರುತಿಸಲಾಗಿದೆ. ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸಲಾಗುತ್ತಿದೆ. 35 ಲಕ್ಷ ಅಸಂಘಟಿತ ಕಾರ್ಮಿಕರನ್ನು ಗುರುತಿಸಲಾಗಿದೆ. ಗಿಗ್ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸಲಾಗುವುದು. ಕಟ್ಟಡ ನಿರ್ಮಾಣ ಕಾರ್ಮಿಕರ ಮಂಡಳಿ ಹತ್ತು ಸಾವಿರ ಕೋಟಿ ತೆರಿಗೆ ಮೂಲಕ ಸಂಗ್ರಹ ಮಾಡಲಾಗುತ್ತಿದೆ. ತೆರಿಗೆ ಸಂಗ್ರಹವನ್ನು ಹೆಚ್ಚಳ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಗ್ಯಾರಂಟಿ ಯೋಜನೆಗಳು ಮಾದರಿ ದೇಶದಲ್ಲಿ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳು ಮಾದರಿಯಾಗಿವೆ. ಇತ್ತೀಚೆಗೆ ಯುರೋಪ್ ಪ್ರವಾಸ ಕೈಗೊಂಡಾಗ ಸಹ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದೇನೆ. ಬಡವರ ಕಲ್ಯಾಣಕ್ಕಾಗಿ ವರ್ಷಕ್ಕೆ ಸುಮಾರು 60 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. 5 ವರ್ಷಕ್ಕೆ ಸರಿಸುಮಾರು 3 ಲಕ್ಷ ಕೋಟಿ ವ್ಯಯವಾಗಲಿದೆ. ಜನಪರ ಕಾಳಜಿ ಹೊಂದಿರುವ ಸರ್ಕಾರ ನಮ್ಮದು. ಜನಪರ ಸರ್ಕಾರಕ್ಕೆ ಜನರು ಸಹಕಾರ ನೀಡಬೇಕು ಎಂದರು.
ಕಾರ್ಮಿಕರಿಗಾಗಿ 7 ಎಕರೆ ಪ್ರದೇಶದಲ್ಲಿ 2500 ಮನೆ ನಿರ್ಮಾಣ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಿಸಲು ಭೂಮಿ ಗುರುತಿಸಲಾಗಿದೆ. 7 ಎಕರೆ ಪ್ರದೇಶದಲ್ಲಿ ಸುಮಾರು 2500 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ, ಕಟ್ಟಡ ಕಾರ್ಮಿಕರಿಗೆ ಹಸ್ತಾಂತರ ಮಾಡಲಾಗುವುದು. ಆ ಮೂಲಕ ಕಾರ್ಮಿಕರಿಗೆ ಸೂರು ಕಲ್ಪಿಸಿದಂತಾಗುತ್ತದೆ ಎಂದರು.
ಕಾಲಕಾಲಕ್ಕೆ ಕಾರ್ಮಿಕರ ಕಾರ್ಡ್ ನವೀಕರಣ ಮಾಡಿಕೊಳ್ಳಿ ರಾಜ್ಯದಲ್ಲಿ 56 ಲಕ್ಷ ಕಾರ್ಮಿಕ ಕಾರ್ಡ್ ನೋಂದಣಿ ಮಾಡಲಾಗಿದೆ. ಇದರಲ್ಲಿ 20 ಲಕ್ಷ ನಕಲಿ ಕಾರ್ಡ್ ಹೊಂದಿರುವುದು ಕಂಡು ಬಂದಿದೆ. ಹೀಗಾಗಿ 20 ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಅರ್ಹ ಫಲಾನುಭವಿಗಳ ಕಾರ್ಡ್ ರದ್ದಾಗಿರುವುದರ ಬಗ್ಗೆ ಮಾಹಿತಿ ನೀಡಿದರೆ, ಮರಳಿ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುವುದು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ದೊರೆಯುವಂತಾಗಬೇಕು. 43 ವಲಯಗಳಲ್ಲಿ ಕಾರ್ಮಿಕರ ವಾಹನ ತೆರಳಿ ಪರಿಶೀಲನೆ ನಡೆಸಿ, ಅರ್ಹ ಫಲಾನುಭವಿಗಳಿಗೆ ಕಾರ್ಡ್ ವಿತರಿಸಲಾಗುವುದು. ಕಾರ್ಮಿಕರನ್ನು ಜಿಐಎಸ್ ಮೂಲಕ ಮ್ಯಾಪಿಂಗ್ ಮಾಡಲಾಗುವುದು. ಕಾಲಕಾಲಕ್ಕೆ ಅರ್ಹ ಕಾರ್ಮಿಕರು ತಮ್ಮ ಕಾರ್ಡ್‌ಗಳನ್ನು ನವೀಕರಿಸಿಕೊಳ್ಳಬೇಕು ಎಂದು ಸಚಿವರು ಕಾರ್ಮಿಕರಲ್ಲಿ ಮನವಿ ಮಾಡಿದರು.
ಹೊರಗುತ್ತಿಗೆ ನೌಕರರ ನೇಮಕಕ್ಕೆ ಸೊಸೈಟಿ ರಚನೆ ವಿವಿಧ ಇಲಾಖೆಗಳಲ್ಲಿ ಸಾವಿರಾರು ಜನರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಏಜೆನ್ಸಿ ಕಂಪನಿಗಳು ನಿಗದಿತ ಅವಧಿಯಲ್ಲಿ ಸಂಬಳ ನೀಡುವಲ್ಲಿ ವಿಳಂಬ ಮಾಡುತ್ತವೆ. ಹೀಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೊಸೈಟಿ ರಚನೆ ಮಾಡಲಾಗುವುದು. ಪ್ರಾಯೋಗಿಕವಾಗಿ ಮೂರು ಜಿಲ್ಲೆಗಳಲ್ಲಿ ರಚನೆ ಮಾಡಿ, ತದನಂತರದಲ್ಲಿ ವಿವಿಧ ಜಿಲ್ಲೆಗಳಲ್ಲಿ ಸೊಸೈಟಿ ರಚಿಸಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ನಿರ್ದೇಶಕರಾದ ಸಂಗಪ್ಪ ಉಪಾಸೆ, ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಎಸ್.ಆರ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ್ ಬ್ಯಾಕೋಡ, ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.