ಬೆಳಗಾವಿ 27 :ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ಬಿಂಬಿಸುವ, ವಿರೂಪಗೊಳಿಸಿದ ಭಾರತದ ನಕ್ಷೆಯನ್ನು ಪ್ರದರ್ಶಿಸುವ ಮೂಲಕ ಕಾಂಗ್ರೆಸ್ ದೇಶದ್ರೋಹದ ಕೆಲಸ ಮಾಡಿದೆ. ಇದು ಕೇವಲ ಕಣ್ತಪ್ಪಿನಿಂದಾಗಿದ್ದಲ್ಲ. ಉದ್ದೇಶಪೂರ್ವಕವಾಗಿ ಅವರ ಮತ ಬ್ಯಾಂಕನ್ನು ಸಮಾಧಾನಪಡಿಸಲು, ಕಾಂಗ್ರೆಸ್ ಪಕ್ಷವು ಭಾರತದ ಸಾರ್ವಭೌಮತ್ವದ ಮೇಲೆ ಮಾಡಿದ ಆಕ್ರಮಣವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಕಿಡಿಕಾರಿದರು.
ಐಕ್ಯತೆ ಮತ್ತು ತ್ಯಾಗದ ಸಂಕೇತವಾಗಿ, ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ 1924 ರ ಅಧಿವೇಶನದ ಶತಮಾನೋತ್ಸವ ಸಂಭ್ರಮಾಚರಣೆಯ ಸಂದರ್ಭದಲ್ಲೇ ಕಾಂಗ್ರೆಸ್ ಈ ಕುಕೃತ್ಯವೆಸಗುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹಾಗೂ ದೇಶದ ಐಕ್ಯತೆಗಾಗಿ ಹೋರಾಡಿದ ಎಲ್ಲಾ ಮಹನೀಯರಿಗೂ ದ್ರೋಹ ಬಗೆದಿದೆ.
ಪಾಕ್ ಆಕ್ರಮಿತ ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನದ ನಿಲುವನ್ನು ಸಮರ್ಥಿಸುವುದರ ಮೂಲಕ, ಕಾಂಗ್ರೆಸ್ ತನ್ನ ಪಾಕ್ ಪ್ರೇಮವನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ. ಈ ದೇಶವಿರೋಧಿ ಕೃತ್ಯಕ್ಕೆ ಕಾರಣರಾದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮತ್ತು ಸಂಘಟಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.