
ಧಾರವಾಡ 18 : ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಧಾರವಾಡವು ಎಸ್.ಡಿ.ಎಮ್ ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ಹೃದಯ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತು.
ಈ ಕಾರ್ಯಕ್ರಮವನ್ನು ಹೃದಯ ಹಾಗೂ ರಕ್ತನಾಳದ ಆರೋಗ್ಯದ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು, ಹೆಚ್ಚುತ್ತಿರುವ ಹೃದಯಾಘಾತ ಹೃದ್ರೋಗ ಸಮಸ್ಯೆ ಬಗ್ಗೆ ಅರಿವು ಮೂಡಿಸಲು ಮತ್ತು ಸಮುದಾಯಕ್ಕೆ ಅಗತ್ಯವಾದ ಆರೋಗ್ಯ ತಪಾಸಣೆಗಳನ್ನು ಒದಗಿಸಲು ಈ ಉಚಿತ ಶಿಬಿರವನ್ನು ಆಯೋಜಿಸಲಾಗಿದೆಯೆಂದು ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ನ ಅಧ್ಯಕ್ಷರಾದ ಗೌರಿ ಮದಲಭಾವಿ ಹೇಳಿದರು.
ಶಿಬಿರದಲ್ಲಿ 149 ಮಹಿಳೆಯರು ಮತ್ತು 47 ಪುರುಷರು ಸೇರಿದಂತೆ ಒಟ್ಟು 196 ನಾಗರಿಕರು ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆ ಶಿಬಿರದ ಲಾಭ ಪಡೆದರು ಎಂದು ಹೇಳಲು ನಮಗೆ ಸಂತೋಷವಾಗಿದೆ ಎಂದು ನಾರಾಯಣ ಹೃದಯಾಲಯದ ದುಂಡೇಶ ತಡಕೋಡ ಹರ್ಷ ವ್ಯಕ್ತಪಡಿಸಿದರು. ರಕ್ತದೊತ್ತಡದ ಮೇಲ್ವಿಚಾರಣೆ, ರಕ್ತದಲ್ಲಿ ಸಕ್ಕರೆ ತಪಾಸಣೆ, ಇಸಿಜಿ , ಇಕೋ ತಪಾಸಣೆ, ಮತ್ತು ಅನುಭವಿ ಹೃದ್ರೋಗ ತಜ್ಞರೊಂದಿಗೆ ಸಮಾಲೋಚನೆಗಳಂತಹ ವಿವಿಧ ಸೇವೆಗಳನ್ನು ಒದಗಿಸಲಾಗುವುದು ಎಂದವರು ನುಡಿದರು.
ಮುಂಜಾನೆ 9 ಗಂಟೆಯಿಂದಲೇ ಜನಸಂದಣಿ ಇದ್ದು , ಮಧ್ಯಾಹ್ನ 2 ಗಂಟೆಯವರೆಗೂ ಜನತೆ ತೋರಿದ ಪ್ರತಿಕ್ರಿಯೆ ಒಳ್ಳೆಯದಾಗಿತ್ತು. ಬಹಳಷ್ಟು ಜನರಿಗೆ ಬಿಪಿ, ಹಾಗೂ ಇಸಿಜಿ ಯಲ್ಲಿ ತೊಂದರೆ ಇರುವುದು ಕಂಡುಬಂದಿದೆ . ಜನರು ತಮ್ಮ ದೈನಂದಿನ ಚಟುವಟಿಕೆಗಳನ್ನು ಬದಲಾಯಿಸಿಕೊಂಡು, ವಾಕಿಂಗ್, ವ್ಯಾಯಾಮ ಹಾಗೂ ಪೌಷ್ಟಿಕ ಆಹಾರದ ಸೇವನೆ ಮಾಡಬೇಕು ಹಾಗೂ ಆತಂಕ ಉದ್ವೇಗಗಳನ್ನು ಕಡಿಮೆ ಮಾಡಿಕೊಳ್ಳಬೇಕು.
ಯೋಗಮಯಂ ಯೋಗ ಕೇಂದ್ರ, ಇನ್ನರ್ ವೀಲ್, ಸುವರ್ಣ ಮಹಿಳೆಯರ ಕನಸಿನ ಧಾರವಾಡ, ಶ್ರೀಯಾ ನರ್ಸಿಂಗ್ ಕಾಲೇಜು ಹಾಗೂ ಜೆ.ಎಸ್.ಎಸ್ ವಾಕ್ ಹಾಗೂ ಶ್ರವಣ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿ ಜನರ ಮೆಚ್ಚುಗೆ ಪಡೆದರು.
ಧಾರವಾಡದ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಸಮುದಾಯಕ್ಕೆ ಸೇವೆ ಸಲ್ಲಿಸಲು ಬದ್ಧವಾಗಿದೆ.ಈ ಹಿಂದೆಯೂ ಸಂಸ್ಥೆಯಿಂದ ಧಾರವಾಡದಲ್ಲಿ ಬಹಳಷ್ಟು ಉಚಿತ ಆರೋಗ್ಯ ಶಿಬಿರಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಶಾಲಾ ಕಾಲೇಜು ಹಾಗೂ ಸಾರ್ವಜನಿಕರಿಗೆ ಆಯೋಜಿಸಲಾಗಿದ್ದು, ಭವಿಷ್ಯದಲ್ಲೂ ಮುಂದುವರಿಸುತ್ತದೆ.
ಈ ಕಾರ್ಯಕ್ರಮದಲ್ಲಿ ಯೋಗ ಗುರುಗಳಾದ ಲಕ್ಷ್ಮಣ ಬೋಡ್ಕೆ, ರೋಟರಿ ಕಾರ್ಯದರ್ಶಿ ಸ್ಮಿತಾ ಮಂತ್ರಿ , ಶಶಿಕಲಾ ಹೆಬ್ಳೀಕರ್, ಹೇಮಾ ಕಿರೆಸೂರ, ಇನ್ನರ್ವಿಲ್ ನ ಶೋಭಾ ಹಿರೇಗೌಡರ್, ಉಪಸ್ಥಿತರಿದ್ದರು.