
ಧಾರವಾಡ : ಖ್ಯಾತ ಹಿಂದುಸ್ತಾನಿ ಕಲಾವಿದೆ ವಿದುಷಿ ಕೃಷ್ಣಾ ಹಾನಗಲ್ ಅವರ ಸ್ಮರಣೆಯಲ್ಲಿ ಪ್ರತಿವರ್ಷ ಪ್ರಬುದ್ಧ ಕಲಾವಿದರೊಬ್ಬರಿಗೆ ರಾಷ್ಟ್ರೀಯ ಪುರಸ್ಕಾರವನ್ನು ಪ್ರದಾನಿಸಿ ಗೌರವಿಸುತ್ತಿದ್ದು, ಪ್ರಸ್ತುತ ವರ್ಷದ ಸಾಲಿಗೆ ಪಂ. ಜಯತೀರ್ಥ ಮೇವುಂಡಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 40 ಸಾವಿರ ರೂ.ಗಳ ಚೆಕ್, ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ಪದ್ಮಶ್ರೀ ಪುರಸ್ಕೃತ ಗಾನಪ೦ಡಿತ ಡಾ. ಎಂ. ವೆಂಕಟೇಶಕುಮಾರ ಅವರು ಪ್ರಶಸ್ತಿಯನ್ನು ಪ್ರದಾನಿಸಲಿದ್ದಾರೆ ಎಂದು ಡಾ ಸೌಭಾಗ್ಯ ಕುಲಕರ್ಣಿ ತಿಳಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಗಾಯನ ಕಾರ್ಯಕ್ರಮವನ್ನು ಧಾರವಾಡದ ಭಾರತೀಯ ಸಂಗೀತ ವಿದ್ಯಾಲಯ, ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರ ಪ್ರತಿಷ್ಠಾನ ಹಾಗೂ ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯವು ಜಂಟಿಯಾಗಿ ಹಮ್ಮಿಕೊಂಡಿದ್ದು, ಎ. 18 ರಂದು ಶುಕ್ರವಾರ ಸಂಜೆ 5.15 ಕ್ಕೆ ಸೃಜನಾ ರಂಗಮಂದಿರದಲ್ಲಿ ಜರುಗಲಿದೆ ಎಂದರು.
ನ್ಯೂಯಾರ್ಕ್‌ನ -ರವಿ-ಜಯಾ ಭೋಪಲಾಪುರ ಫೌಂಡೇಶನ್, ಧಾರವಾಡದ ಪ್ರಶಾಂತ ಆಸ್ಪತ್ರೆ ಹಾಗೂ ಐವಿಎಫ್ ಸೆಂಟರ್ ಹಾಗೂ ಆಸ್ಟ್ರಾ ಮಹಿಳೆಯರ ಆರೋಗ್ಯ ಕೇಂದ್ರಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಿವೆ ಎಂದರು.
ಪಂ. ವೆಂಕಟೇಶಕುಮಾರ, ವಿದುಷಿ ಅಶ್ವಿನಿ ಭಿಡೆ ದೇಶಪಾಂಡೆ, ಪಂ. ಶಿವಾನಂದ ಪಾಟೀಲ, ಪಂ. ರವೀಂದ್ರ ಯಾವಗಲ್, ಉಸ್ತಾದ ಫಯ್ಯಾಜ್ ಖಾನ್, ಪಂ. ಸಂಜೀವ ಅಭ್ಯಂಕರ, ಪಂ. ಅಶೋಕ ನಾಡಿಗೇರ ಹೀಗೆ ವಿವಿಧ ಪ್ರಬುದ್ಧ-ಹಿರಿಯ ಕಲಾವಿದರು ಕೃಷ್ಣಾ ಹಾನಗಲ್ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗಿದ್ದು, ಈ ವರ್ಷ ಕಿರಾನಾ ಘರಾಣೆಯ ಪ್ರಬುದ್ಧ ಪ್ರತಿಭೆ ಪಂ. ಜಯತೀರ್ಥ ಮೇವುಂಡಿ ಅವರಿಗೆ ಪ್ರದಾನಿಸಿ ಗೌರವಿಸಲಾಗುತ್ತಿದೆ.
ಸಂಜೆ 5.15ಕ್ಕೆ ಯುವ ಗಾಯಕಿ ಜೆ. ಪೂರ್ವಿ ಅವರ ಗಾಯನದೊಂದಿಗೆ ಆರಂಭಗೊಳ್ಳಲಿದ್ದು ನಂತರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಶಸ್ತಿ ಪುರಸ್ಕೃತ ಪಂ. ಜಯತೀರ್ಥ ಮೇವುಂಡಿ ಅವರ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.
ಶ್ರೀಧರ ಮಾಂಡ್ರೆ, ಪ್ರಸಾದ ಮಡಿವಾಳರ ತಬಲಾದಲ್ಲಿ ಹಾಗೂ ಬಸವರಾಜ ಹಿರೇಮಠ ಹಾರ್ಮೋನಿಯಂದಲ್ಲಿ ಸಹಕಲಾವಿದರಾಗಿ ಪಾಲ್ಗೊಳ್ಳಲಿದ್ದಾರೆ. ಹಿರಿಯ ಉದ್ವೇಷಕಿ ಮಾಯಾ ರಾಮನ್ ಹಾಗೂ ಮಂಜರಿ ಹೂಂಬಾಳೆ ಅವರು ನಿರೂಪಣೆ ಮಾಡಲಿದ್ದಾರೆ ಎಂದು ತಿಳಸಿದರು. ವಿನಯ ನಾಯಕ ಪತ್ರಿಕಾಗೋಷ್ಟಿಯಲ್ಲಿದ್ದರು.