
ಹುಬ್ಬಳ್ಳಿ15 : ಪಂಚಪೀಠದಲ್ಲಿ ಒಂದಾದ ಶ್ರೀಶೈಲ ಮಹಾಕ್ಷೇತ್ರದಲ್ಲಿ ಬರುವ ಅಸಂಖ್ಯಾತ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಾಲ್ಕುನೂರು ವಸತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಕೈಕೊಳ್ಳಲಾಗಿದೆ. ಭಕ್ತಸಮೂಹ ತಮ್ಮ ಉದಾರ ದೇಣಿಗೆ ನೀಡುವಂತೆ ಶ್ರೀ ಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಉಣಕಲ್ ಸಿದ್ದಪ್ಪಜ್ಜ ಅವರ ನೂತನ ಶಿಲಾ ಮಂಟಪ ಕಾರ್ಯವನ್ನು ಶುಕ್ರವಾರ ಸಂಜೆ ವೀಕ್ಷಣೆಮಾಡಿ, ದೇವಸ್ಥಾನ ಕಮೀಟಿ ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿ ಮಾತನಾಡಿದರು
ಸರ್ಕಾರ ಹತ್ತು ಏಕರೆ ಭೂಮಿಯನ್ನು ನೀಡಿದ್ದು ಐದು ಏಕರೆಯನ್ನು ಸ್ವಾಧೀನಕ್ಕೆ ಪಡೆದು ಅದರಲ್ಲಿ ಭಕ್ತರಿಗಾಗಿ ವಸತಿ ಕೊಠಡಿ ಹಾಗೂ ಸುವ್ಯವಸ್ಥಿತ ಆಸ್ಪತ್ರೆಯ ನಿರ್ಮಾಣ ಕಾರ್ಯ ನಡೆದಿದೆ, ಭಕ್ತರು ತರುವ ಕಂಬಿಗಳ ಶೇಖರಣೆಗಾಗಿ ಮಂಟಪದ ಕಾಮಗಾರಿ ಕೈಕೊಳ್ಳಲಾಗಿದೆ ಎಂದು ಹೇಳಿದರು.
ಉಣಕಲ್ ಸಿದ್ದಪ್ಪಜ್ಜ ತಮ್ಮ ಬದುಕಿನ ಹೋರಾಟದಿಂದ ಭಕ್ತ ಮನಗೆದ್ದ ಧೀಮಂತರು, ದೇವಮಾನವರಾಗಿ ಸಿದ್ದಪ್ಪಜ್ಜ ಭಕ್ತರ ಇಷ್ಟಾರ್ಥ ಪೂರೈಸುವ ಸಿದ್ದಿಪುರುಷರು, ದೇವಸ್ಥಾನ ಸಮಿತಿ ನೂತನ ಶಿಲಾಮಂಟಪ ನಿರ್ಮಾಣ ಕಾರ್ಯ ಹಮ್ಮಿಕೊಂಡಿದೆ, ಅದಕ್ಕೆ ಭಕ್ತ ಸಮೂಹ ಕೋಟಿ,ಕೋಟಿ ದೇಣಿಗೆ ನೀಡಿದ್ದು ಸಿದ್ದಪ್ಪಜ್ಜನ ಅಸ್ತಿತ್ವಕ್ಕೆ ಹಿಡಿದ ಕನ್ನಡಿ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆಯ ಆರೋಗ್ಯ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಪ್ರಾಸ್ತಾವಿಕ ಮಾತನಾಡಿ ಶಿಲಾ ಮಂಟಪ ನಿರ್ಮಾಣಕ್ಕೆ ಸುಮಾರು ಮೂರು ಕೋಟಿ ರೂ.ಗಳ ಅಂದಾಜು ಮಾಡಲಾಗಿದೆ ಎಂದು ಹೇಳಿದರು.
ಸಮಿತಿ ಸದಸ್ಯರಾದ ಶಿವಾಜಿ ಕನ್ನಿಕೊಪ್ಪ, ರಾಮಣ್ಣ ಪದ್ಮಣ್ಣವರ,ಗುರುಸಿದ್ದಪ್ಪ ಬೆಂಗೇರಿ,ಗುರು ಸಿದ್ದಪ್ಪ ಮೆಣಸಿನಕಾಯಿ, ಶತಾಯು ಚಿಕ್ಕಮಠ ಅಜ್ಜ,ಸಿದ್ದನಗೌಡ ಕಾಮಧೇನು, ಜಯಮ್ಮ ಹಿರೇಮಠ ಮುಂತಾದವರು ವೇದಿಕೆಯಲ್ಲಿ ಇದ್ದರು, ಎಸ್.ಐ.ನೇಕಾರ ಸ್ವಾಗತಿಸಿದರು.