![Minister Santosh Lad spoke at the second day of the thinking camp of Labor Minister and Secretary of Labor Department](https://independentsangramnews.com/wp-content/uploads/2025/01/WhatsApp-Image-2025-01-31-at-1.30.02-AM.jpeg)
ಐಟಿ ಕಂಪನಿಗಳು ಉದ್ಯೋಗಿಗಳ ದತ್ತಾಂಶ ನೀಡಿದರೆ ಕಲ್ಯಾಣ ಯೋಜನೆ ಸೇರಿಸಲು ಸಹಕಾರಿ
ಗಾರ್ಮೆಂಟ್ಸ್ ಕಾರ್ಮಿಕರ ವೇತನ ಹೆಚ್ಚಳಕ್ಕೆ ಕ್ರಮ ಸೂಕ್ತ ನಿಯಮ ಅಗತ್ಯ
ನವದೆಹಲಿ, ಜನವರಿ 31 : ಐಟಿ ಕಂಪೆನಿಗಳು ನೇಮಿಸಿಕೊಳ್ಳುವ ಕಾರ್ಮಿಕರ ವಿವರ, ವೇತನ ಹಾಗೂ ಇತರ ದತ್ತಾಂಶಗಳನ್ನು ನೀಡಿದರೆ ಆ ಎಲ್ಲಾ ಉದ್ಯೋಗಿಗಳನ್ನು ಕಲ್ಯಾಣ ಯೋಜನೆಗಳ ವ್ಯಾಪ್ತಿಗೆ ಸೇರಿಸಲು ಅನುಕೂಲವಾಗುತ್ತದೆ. ಹಾಗೆಯೇ ಅವರ ಮೇಲಾಗುವ ಶೋಷಣೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.
ನವದೆಹಲಿಯಲ್ಲಿ ಕೇಂದ್ರ ಕಾರ್ಮಿಕ ಇಲಾಖೆ ಆಯೋಜಿಸಿರುವ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಸಚಿವರು ಹಾಗೂ ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳ ಎರಡನೇ ದಿನದ ಚಿಂತನ ಶಿಬಿರದಲ್ಲಿ ಅವರು ಮಾತನಾಡಿದರು.
ಆಸ್ಸಾಂ ರಾಜ್ಯದ ಕಾರ್ಮಿಕ ಸಚಿವರು ಕಾಫಿ ಪ್ಲಾಂಟೇಷನ್ ಕಾರ್ಮಿಕರ ಬಗ್ಗೆ ಮಾಡಿದ ಭಾಷಣವನ್ನು ಉಲ್ಲೇಖಿಸಿ ಮಾತನಾಡಿದ ಸಚಿವ ಲಾಡ್ ಅವರು, ಕರ್ನಾಟಕ ರಾಜ್ಯದಲ್ಲೂ ಕಾಫಿ ಪ್ಲಾಂಟೇಷನ್ ಕಾರ್ಮಿಕರಿದ್ದು, ಅವರ ಕಲ್ಯಾಣಕ್ಕಾಗಿ ಸಹ ಯೋಜನೆಗಳನ್ನು ರೂಪಿಸುವ ಬಗ್ಗೆ ಬೆಳಕು ಚೆಲ್ಲಿದರು.
ಗಾರ್ಮೆಂಟ್ಸ್ ಕಾರ್ಮಿಕರಿಗೆ ಹೆಚ್ಚಿನ ವೇತನಕ್ಕೆ ಕ್ರಮ
ಗಾರ್ಮೆಂಟ್ಸ್ ಉದ್ಯಮಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ತುಂಬ ಕಡಿಮೆ ವೇತನವನ್ನು ಪಾವತಿಸಲಾಗುತ್ತಿದೆ. ಇದರಿಂದ ಅವರ ಜೀವನಮಟ್ಟ ಕಷ್ಟದಲ್ಲಿದೆ. ಈ ಬಗ್ಗೆ ಸೂಕ್ತ ನಿಯಮಗಳನ್ನು ಜಾರಿಗೆ ತರುವುದರ ಬಗ್ಗೆ ಗಮನ ಸೆಳೆದರು.
ಹೆಚ್ಚಿನ ಚರ್ಚಾ ಶಿಬಿರ ಆಯೋಜಿಸಿದರೆ ಇನ್ನೂ ಉತ್ತಮ
ದೇಶದ ಕಾರ್ಮಿಕರ ಸಮಸ್ಯೆಗಳನ್ನಷ್ಟೇ ಚರ್ಚಿಸಲು ಇಂತಹ ಶಿಬಿರ ಆಯೋಜಿಸಿದ್ದು ಒಳ್ಳೆಯದು. ಇಂತಹ ಮತ್ತೊಂದು ಶಿಬಿರವನ್ನು ಆಯೋಜಿಸಿ ಆಗಾಗ ಚರ್ಚಿಸಿದರೆ ಕಾರ್ಮಿಕರ ಕುರಿತ ಹೊಸ ದಿಕ್ಕಿನ ಆಲೋಚನೆಗೆ ಸಹಾಯವಾಗಲಿದೆ. ಕಾರ್ಮಿಕರ ಸಮಸ್ಯೆಯನ್ನೇ ಆದ್ಯತೆ ನೀಡಿ ಚರ್ಚಿಸಬೇಕು. ಏಕೆಂದರೆ ದೇಶದಲ್ಲಿ ಕಾರ್ಮಿಕರ ಸಾಕಷ್ಟು ಸಮಸ್ಯೆಗಳಿವೆ. ಅವುಗಳಿಗೆ ನಾವು ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಶಿಬಿರದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಮನ್ಸುಕ್ ಮಾಂಡವೀಯ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಸಚಿವರು ಮತ್ತು ಕಾರ್ಯದರ್ಶಿಗಳು ಭಾಗವಹಿಸಿದ್ದರು.