ಧಾರವಾಡ 03 : ಅನ್ನದಾನವು ಅತ್ಯಂತ ಶ್ರೇಷ್ಠ ದಾನಗಳಲ್ಲಿ ಒಂದಾಗಿದ್ದು ಅದನ್ನು ಮಾಡುವುದರಿಂದ ಸಾಕಷ್ಟು ಪುಣ್ಯ ಫಲಗಳು ಪ್ರಾಪ್ತಿಯಾಗುತ್ತವೆ ಎಂದು ಉದ್ಯಮಿ ಮಹಾಂತೇಶ ತುರುಮರಿ ಹೇಳಿದರು.
ಅವರು ಸಾರಸ್ವತಪುರ- ಗೌಳಿಗಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ಏರ್ಪಡಿಸಿದ್ದ 31ನೇ ವರ್ಷದ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮಲ್ಲಿ ಸಾಕಷ್ಟು ರೀತಿಯ ದಾನಗಳಿವೆ. ಅಧ್ಯಾತ್ಮಿಕ ದೃಷ್ಟಿಕೋನದಿಂದ ನೋಡುವುದಾದರೆ ಭೂದಾನ , ಗೋದಾನ ಕನ್ಯಾದಾನ, ಅನ್ನ ದಾನ ಹಾಗೂ ವಿದ್ಯಾದಾನಗಳು ಶ್ರೇಷ್ಠ ಎನಿಸಿವೆ. ಅನಾದಿ ಕಾಲದಿಂದಲೂ ಸಹ ನಮ್ಮದು ದಾಸೋಹ ಪರಂಪರೆಯಾಗಿದ್ದು ಭಾರತದಲ್ಲಿ ಇರುವಷ್ಟು ದಾನ ಕೇಂದ್ರ ಗಳು ವಿಶ್ವದ ಯಾವುದೇ ಭಾಗದಲ್ಲಿ ಕಾಣಸಿಗುವುದಿಲ್ಲ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾನ ಧರ್ಮಗಳನ್ನು ಹಿರಿಯರು ಮಾಡುತ್ತಾ ಬಂದಿದ್ದಾರೆ. ಅದರಿಂದಲೇ ದೈವತ್ವದ ಕರುಣೆ ಸಿಗುತ್ತದೆ ಎಂದು ನಂಬಿದ್ದೇವೆ. ಅಂತ ದಾನಗಳಲ್ಲಿ ಒಂದಾಗಿರುವ ಅನ್ನದಾನವನ್ನು ಕಳೆದ 31 ವರ್ಷಗಳಿಂದ ಮಾಡುತ್ತ ಬರುತ್ತಿರುವುದು ಶ್ಲಾಘನೀಯ ಎಂದರು.
1993 ರಲ್ಲಿ ಸ್ಥಾಪನೆಯಾಗಿರುವ ಶ್ರೀ ಅಯ್ಯಪ್ಪ ಸೇವಾ ಸಮಿತಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನ್ನದಾನ ಮಾಡುವ ಮೂಲಕ ಹಸಿದವರಿಗೆ ಭಗವಂತನ ಪ್ರಸಾದ ವಿನಿಯೋಗ ಮಾಡುತ್ತಿರುವುದು ಮಾದರಿ ಕಾರ್ಯ ವಾಗಿದ್ದು ಮುಂದಿನ ದಿನಗಳಲ್ಲಿ ಸಹ ಈ ಕಾರ್ಯದಲ್ಲಿ ಜೊತೆಯಾಗಿರುವುದಾಗಿ ಭರವಸೆ ನೀಡಿದರು.
ಅನ್ನದಾನಕ್ಕೂ ಮೊದಲು ದಿಲೀಪ ಕಡವೆ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು. ಈ ವೇಳೆ ಉದ್ಯಮಿಗಳಾದ, ಶಶಾಂಕ ಅಂಗಡಿ, ಸತೀಶ ಕಟ್ಟಿ, ಹೆಸ್ಕಾಂ ಮಾಜಿ ನಿರ್ದೇಶಕ ಮನೋಜ್ ಕರ್ಜಗಿ, ಪತ್ರಕರ್ತ ಪ್ರಶಾಂತ ರಾಜಗುರು, ಸಂತೋಷ ಧವಳಿ, ಸಂತೋಷ ಕುಬೋಜಿ ಇತರರಿದ್ದರು.
ಪೋಟೋ ; ಧಾರವಾಡದ ಸಾರಸ್ವತಪುರ- ಗೌಳಿಗಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ 31 ನೇ ವರ್ಷದ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.