ಬೆಳಗಾವಿ: ಭೋವಿ, ಬಂಜಾರ, ಕೊರಮ, ಕೊರಚ ಜಾತಿಗಳ ಮಹಾ ಒಕ್ಕೂಟದಿಂದ 2011 ರ ಜನಗಣಿತ ಆಧಾರದ ಮೇಲೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಂಗಡನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನೀತಿ ವಿರೋಧಿಸಿ ಬೆಳಗಾವಿ ಸುವರ್ಣಸೌಧದ ಎದುರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಭೋವಿ ವಡ್ಡರ ವೇದಿಕೆ ರಾಜ್ಯಾಧ್ಯಕ್ಷರಾದ ವೈ. ಕೋಟ್ರೇಶ್ ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿದ ಭೋವಿ, ಲಂಬಾಣಿ ಕೊರಮ, ಕೊರಚ ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡಿರುವ ಮಹಾ ಒಕ್ಕೂಟವು ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕಣ ಮಾಡಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ನೆಪವಾಗಿರಿಸಿಕೊಂಡು ರಾಜ್ಯ ಸರ್ಕಾರ ಅವೈಜ್ಞಾನಿಕ, ಅಸಂವಿಧಾನಿಕವಾಗಿ, ಕಾನೂನು ಬಾಹಿರ ಮತ್ತು ದ್ವೇಷ ಅಶಾಂತಿಗೆ ಕಾರಣವಾಗಿರುವ ಒಳಮೀಸಲಾತಿ ವಿಂಗಡನೆಗೆ ಮುಂದಾಗಿರುವುದನ್ನು ವಿರೋಧಿಸುತ್ತೇವೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಭೋವಿ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಬಹಳಷ್ಟ ಹಿಂದುಳಿದಿದೆ. ಕಲ್ಲು, ಬಂಡೆ ಹೊಡೆಯುತ್ತ ಈಗಲೂ ಶ್ರಮ ಜೀವಿಗಳಾಗಿ, ಅನಕ್ಷರಸ್ತರಾಗಿ ಕಡು ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಕೊರಮ-ಕೊರಚ ಸಮುದಾಯಗಳು ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಈ ಸಮುದಾಯಗಳು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಆದರೆ ಯಾವುದೇ ಸರ್ಕಾರ ಈ ಸಮುದಾಯಗಳ ಏಳಿಗೆಗೆ ಹಾಗೂ ಸಮಾಜ ಮುಖ್ಯವಾಹಿನಿಗೆ ಕರೆತರಲು ನಿರ್ಲಕ್ಷ್ಯ ಮಾಡಿವೆ ಅಂತಾ ಹೇಳಿದರು.
ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಕರ್ನಾಟಕ ರಾಜ್ಯಾಧ್ಯಕ್ಷರಾದ ಪಾಂಡುರಂಗ ಪಮ್ಮಾರ ಮಾತನಾಡಿ, ರಾಜ್ಯ ಸರ್ಕಾರ ಭೋವಿ, ಬಂಜಾರ, ಕೊರಮ, ಕೊರಚ ಜಾತಿಗಳ 2011 ರ ಜನಗಣತಿ ಆಧಾರದ ಮೇಲೆ ಒಳ ಮೀಸಲಾತಿ ಮಾಡುವುದನ್ನು ಕೈಬಿಡಬೇಕು. ಸದ್ಯದ ಜನಸಂಖ್ಯೆಯ ಆಧಾರದ ಮೇಲೆ ಒಳ ಮೀಸಲಾತಿ ವಿಂಗಡಿಸಬೇಕು. ಈಗಾಗಲೇ 17 ಲಕ್ಷ ಪತ್ರ ಚಳುವಳಿಯನ್ನು ಮಾಡಿದ್ದೇವೆ. ಈ ವಿಷಯವನ್ನು ರಾಜ್ಯ ಸರ್ಕಾರ ಕೈಬಿಡದೇ ಹೋದರೆ ತೀವ್ರ ಸ್ವರೂಪದ ಹೋರಾಟ ಮಾಡುವುದಾಗಿ ಹೇಳಿದರು.
ಅಖಿಲ ಕರ್ನಾಟಕ ಭೋವಿ ವಡ್ಡರ ವೇದಿಕೆ ರಾಜ್ಯ ಮಹಿಳಾ ಅಧ್ಯಕ್ಷ ಸುಶೀಲಮ್ಮ ಮಾತನಾಡಿ, ಭೋವಿ, ಬಂಜಾರ, ಕೊರಮ, ಕೊರಚ ಸಮುದಾಯಗಳು ತಮ್ಮ ಕಸೂಬು ಕಲೆ ಹಾಗೂ ಉದ್ಯೋಗಕ್ಕಾಗಿ ಈಗಲೂ ಅಲೆಮಾರಿಗಳಂತೆ ಗುಳೇ ಹೋಗುತ್ತ ತಮ್ಮ ಬದುಕು ನಡೆಸುತ್ತಿದ್ದಾರೆ. ಒಂದೆಡೆ ವಾಸಿಸಲು ಸರ್ಕಾರ ಇವರಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೇ, ಹಟ್ಟಿಗಳಲ್ಲಿ ಪ್ರಾಣಿಗಳಂತೆ ವಾಸಿಸುತ್ತಿದ್ದಾರೆ. ನಾಗರಿಕ ಬದುಕಿನಿಂದ ದೂರವೇ ಉಳಿದಿರುವ ಈ ಸಮುದಾಯಗಳ ಸದ್ಯದ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ವಿಂಗಡಿಸಬೇಕು ಅಂತಾ ಹೇಳಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಮನವಿ ಸ್ವೀಕರಿಸಿ, ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿರುವ ಯಾವ ಸಮುದಾಯಕ್ಕೂ ಅನ್ಯಾಯ ಆಗುವದಿಲ್ಲ. ರಾಜ್ಯ ಸರ್ಕಾರ ನಿಮ್ಮ ಹಿತವನ್ನು ಕಾಯುತ್ತದೆ ಅಂತಾ ಹೇಳಿದರು.
ಜಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಭಟನೆ ನಿರತರಿಗೆ ಬೆಂಬಲ ಸೂಚಿಸಿ, ಮಾತನಾಡಿದ ಅವರು, ಭೋವಿ, ಬಂಜಾರ, ಕೊರಮ, ಕೊರಚ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಂಗಡನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸುತ್ತದೆ ಅಂತಾ ಹೇಳಿದರು.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಕೈಬಿಡುವಂತೆ ಹೊಳಲ್ಕೆರೆ ಶಾಸಕ ಚಂದ್ರಪ್ಪ ಹಾಗೂ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ
ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಅಖಿಲ ಕರ್ನಾಟಕ ಭೋವಿ ವಡ್ಡರ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ ಹಿರೇಮನಿ ಅವರು ಪ್ರತಿಭಟನೆಗೆ ಯಶಸ್ವಿಯಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಜಯ ಮಹಾಂತೇಶ್ವರ ಶಾಖಾಮಠ ಲಿಂಗಸೂರಿನ ಸಿದ್ಧಲಿಂಗ ಮಹಾಸ್ವಾಮಿಗಳು, ಬಿಜಾಪೂರ ತೋರವಿ ತಾಂಡಾದ ಬಂಜಾರ ಪೀಠದ ಮಹಾಸ್ವಾಮಿಗಳು, ರಾಜ್ಯ ಸಂಚಾಲಕರಾದ ಸುನೀಲ ಡೋತ್ರೆ, ಅವಿನಾಶ, ಸುರೇಶ, ಗಿಡ್ಡಪ್ಪ, ಲಕ್ಷ್ಮೀ ಬಂಡಿವಡ್ಡರ, ರಾಮಚಂದ್ರ, ಕೊರಚ ಸಮಾಜದ ರಾಜ್ಯಾಧ್ಯಕ್ಷ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಪಿ.ವೆಂಕಟೇಶ, ಸಮಾಜದ ಮುಖಂಡರಾದ ಮಂಜುನಾಥ ಹಳ್ಯಾಳ ಮತ್ತು ಶ್ರೀನಿವಾಸ ಅವರೋಳ್ಳಿ, ಚಂದ್ರಕಾಂತ ಚವ್ಹಾಣ, ದಯಾನಂದ ಪವಾರ, ಕೃಷ್ಣಾಜಿ ಚವ್ಹಾಣ, ಡಿ.ವ್ಹಿ.ನಾಯಕ ಮಂಗಳಪ್ಪ ಲಮಾಣಿ ಸೇರಿದಂತೆ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ, ರಾಜ್ಯ ಬಂಜಾರ ಸಮಾಜದ ಸಂಘಟನೆ ಹಾಗೂ ರಾಜ್ಯ ಕೊರಮ, ಕೊರಚ ಸಮಾಜದ ಸಂಘಟನೆಗಳ ಸಾವಿರಾರು ಪದಾಧಿಕಾರಿಗಳು ಇದ್ದರು.