ಧಾರವಾಡ : ಬೆಳಗಾವಿ ಸುವರ್ಣ ಸೌಧದ ಎದುರುಗಡೆ,ದಿ 16 ಕ್ಕೆ ಬೆಳಗ್ಗೆ 11 ಗಂಟೆಯಿಂದ
ಎಐಕೆಕೆಎಂಎಸ್ ರಾಜ್ಯ ಉಪಾಧ್ಯಕ್ಷರಾದ ಎಸ್ ಎನ್ ಸ್ವಾಮಿ ಯವರ ನೇತೃತ್ವದಲ್ಲಿ ರೈತರ ಪ್ರತಿಭಟನೆ ಮಾಡಲಾಗುವದು ಎಂದು ತಿಳಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 70-80 ವರ್ಷಗಳಿಂದ ಭೂಹೀನ ಮತ್ತು ಬಡ ರೈತ ಕೃಷಿ ಕಾರ್ಮಿಕರು ಕಂದಾಯ ಹಾಗೂ ಅರಣ್ಯದ ಕುರುಚಲು ಗಿಡ, ಕಲ್ಲಿ ಭೂಮಿ ಇರುವ ಪ್ರದೇಶಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿದ್ದಾರೆ. ಬಹುಪಾಲು ರೈತರಿಗೆ ಇದರಿಂದ ಬರುವ ಅಲ್ಪ ಸ್ವಲ್ಪ ವರಮಾನವೇ ಜೀವನಾಧಾರವಾಗಿದೆ. ಇಲ್ಲಿಯವರೆಗೆ ಆಳ್ವಿಕೆ ಮಾಡಿದ ಎಲ್ಲಾ ಸರ್ಕಾರಗಳಿಗೂ ಈ ಬಡ ರೈತರ ಜೀವನದ ವಸ್ತು ಸ್ಥಿತಿಯ ಅರಿವಿದ್ದೇ ಸರ್ಕಾರಕ್ಕೆ ಸೇರಿದ ಜಮೀನಿನಲ್ಲಿ ಉಳುಮೆಗೆ ಅವಕಾಶ ಕೊಡುತ್ತಾ ಬಂದಿದೆ.
ಆದರೂ ಶಾಸನಬದ್ಧವಾಗಿ ಭೂಮಿಯ ಹಕ್ಕು ದೊರೆಯದೆ ಇರುವುದರಿಂದ ಬಗರ್ ಹುಕುಂ ಸಾಗುವಳಿದಾರರು ಸಾಮಾಜದಲ್ಲಿನ ಇತರೆ ಜನರಂತೆ ನಿಶ್ಚಿತ ಬದುಕು ರೂಪಿಸಿಕೊಳ್ಳಲಾಗದೆ ದಶಕಗಳಿಂದ ತೀವ್ರ ಮಾನಸಿಕ ತೋಳಲಾಟದಲ್ಲಿದ್ದು ಜರ್ಜರಿತರಾಗಿದ್ದಾರೆ. ಬಹುತೇಕ ಸಾಗುವಳಿದಾರರು ಅನಕ್ಷರಸ್ತರಾಗಿದ್ದು ಕೃಷಿಯ ಮೇಲೆಯೇ ಸಂಪೂರ್ಣವಾಗಿ ಅವಲಂಭಿತರಾಗಿದ್ದಾರೆ. ಸಹಜವಾಗಿ ಇವರಿಗೆ ಕೃಷಿ ಬೆಳೆ ಸಾಲ, ಕೃಷಿ ಪರಿಕರ ಮೇಲಿನ ಸಾಲ ಹಾಗೂ ಇನ್ನಿತರ ಜೀವನೋಪಾಯಕ್ಕಾಗಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಅಲ್ಪಾವಧಿ ಸಾಲವು ದೊರೆಯದ ಕಾರಣ ಬಹುತೇಕ ಬಡ ರೈತ ಕೃಷಿ ಕಾರ್ಮಿಕರು ಬೇರೆ ದಾರಿಯಿಲ್ಲದೆ ಕೈ ಸಾಲಕ್ಕೆ ಮೊರೆ ಹೋಗಿ ತೀವ್ರ ಸಂಕಟಕ್ಕೆ ಸಿಲುಕಿದ್ದಾರೆ ಎಂದರು , ಕೆಲವೊಮ್ಮೆ ಇಂತಹ ಪರಿಸ್ಥಿಯು ಅವರನ್ನು ಆತ್ಮಹತ್ಯೆಯಂತಹ ದಾರುಣ ಕೃತ್ಯಕ್ಕೆ ಮೊರೆ ಹೋಗುವಂತೆ ಮಾಡಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ ಎಂದರು.
ಇನ್ನೊಂದೆಡೆ ಇಲ್ಲಿಯವರೆಗೂ ಆಳಿರುವ ಸರ್ಕಾರಗಳಾಗಲಿ ಮತ್ತು ಈಗ ಆಳ್ವಿಕೆ ನಡೆಸುತ್ತಿರುವ ಸರ್ಕಾರವು ಕೂಡ ಶ್ರೀಮಂತ ಉದ್ಯಮಿಗಳಿಗೆ ರೆಸಾರ್ಟ್, ಹೋಮಸ್ಸೇ, ಹೇರಿಟೇಜ್, ಹೊಮ್ಸ್ ಪ್ಲಾಂಟೇಷನ್ ಗಾರ್ಡನ್ ಮುಂತಾದವುಗಳನ್ನು ಮಾಡಿಕೊಳ್ಳಲು ತನ್ಮೂಲಕ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಪರವಾನಿಗೆ ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹಲವಾರು ವರ್ಷಗಳಿಂದ ಸಣ್ಣಪುಟ್ಟ ಹಿಡುವಳಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಗರ್ ಹುಕುಂ ಸಾಗುವಳಿದಾರರು ದೇಶ ಹಾಗೂ ರಾಜ್ಯದ ಆಹಾರ ಭದ್ರತೆಗೆ ತಮ್ಮದೇ ಆದ ಮಹತ್ತರ ಕೊಡುಗೆ ನೀಡುತ್ತಿದ್ದಾರೆ ಜನಗಳ ಹಸಿವನ್ನು ಇಂಗಿಸುತ್ತಿದ್ದಾರೆ. ದೇಶಕ್ಕೆ ಅನ್ನ ಹಾಕುವ, ಜನಗಳ ಹಸಿವನ್ನು ನೀಗಿಸುವ ದುಡಿಯುವ ಭೂ ಹೀನ ಹಾಗೂ ಬಡ ರೈತ ಕೃಷಿ ಕಾರ್ಮಿಕರ ಬಗ್ಗೆ ಸರ್ಕಾರಗಳ ಹೃದಯ ಮಿಡಿಯದೆ ಇರುವುದು ವಿಪರ್ಯಾಸವಾಗಿದೆ ಎಂದರು.
ಸರ್ಕಾರವು ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುವುದೆಂದರೆ ದೊಡ್ಡಕರುಣೆ ಅಥವಾ ಭಿಕ್ಷೆಯಲ್ಲ ಅದು ನ್ಯಾಯಬದ್ದವಾಗಿ ಕೊಡಬೇಕಾಗಿರುವ ಹಕ್ಕು. ರಾಜ್ಯದ ಹಲವೆಡೆಗಳಲ್ಲಿ ಭೂಮಿಯನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ 50, 53 ನ್ನು ಹಾಕಿ ಹಕ್ಕುಪತ್ರಕ್ಕಾಗಿ ದಶಕಗಳಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಸರ್ಕಾರದ ಹೊಸ ಆದೇಶದ ಪ್ರಕಾರವೂ ಅರ್ಜಿ 57 ನ್ನು ಸಹ ಹಾಕಿದ್ದಾರೆ. ಆದರೆ ಸರ್ಕಾರದಿಂದ ಸಕರಾತ್ಮಕವಾದ ಪ್ರತಿಕ್ರಿಯೆ ಬರದೆ ಈ ಅರ್ಜಿಯನ್ನೇ ತಿರಸ್ಕರಿಸುತ್ತಿರುವಂತಹ ಘಟನೆಗಳು ಈ ರೈತರಿಗೆ ಅತ್ಯಂತ ನಿರಾಸೆಯನ್ನು ತಂದಿದೆ. ಇನ್ನು ಹಲವು ಗ್ರಾಮಗಳಲ್ಲಿ ಅರ್ಜಿಯನ್ನು ಹಾಕಬೇಕು ಎನ್ನುವ ಪರಿಜ್ಞಾನವೇ ಇಲ್ಲದೆ ಸರ್ಕಾರವನ್ನು ಮತ್ತು ಭೂಮಿಯನ್ನು ನಂಬಿಕೊಂಡು ಸಾವಿರಾರು ರೈತರು ಸಾಗುವಳಿಯನ್ನು ಮಾಡುತ್ತಿದ್ದಾರೆ ಎಂದರು.
ಕರ್ನಾಟಕ ಭೂ ಕಂದಾಯ ಕಾಯ್ದೆ 1964 ನ್ನು 1991 ರಲ್ಲಿ ತಿದ್ದುಪಡಿಯನ್ನು ಮಾಡಿ ಭೂರಹಿತರು, ಸಣ್ಣ ಅಥವಾ ಬಡ ರೈತರಿಗೆ ಪ್ರಸ್ತುತ ಹಿಡುವಳಿ ಜಮೀನನ್ನು ಒಳಗೊಂಡಂತೆ ಗರಿಷ್ಠ 5.00 ಎಕರೆ ಜಮೀನನ್ನು ಸಕ್ರಮೀಕರಣಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 94(ಎ) ರ ಪ್ರಕಾರ ಸುಮಾರು 3.69 ಲಕ್ಷ ರೈತರಿಗೆ 6.34 ಲಕ್ಷ ಎಕರೆ ವಿಸ್ತೀರ್ಣದ ಜಮೀನನ್ನು ಸಕ್ರಮಗೊಳಿಸಲಾಗಿತ್ತು. ನಂತರ 2009 ರ ವರೆಗೆ 1.52 ಲಕ್ಷ ರೈತರಿಗೆ 5.52 ಲಕ್ಷ ಎಕರೆ ವಿಸ್ತೀರ್ಣದ ಜಮೀನನ್ನು ಸಕ್ರಮಗೊಳಿಸಲಾಯಿತು. ಬಗರ್ಹುಕುಂ ಸಾಗುವಳಿಯ ಭೂಮಿ ಸಕ್ರಮಗೊಳಿಸುವ ತಂತ್ರಾಂಶಕ್ಕೆ ಸೇರ್ಪಡೆ ಆಗದೆ ಇರುವ 4.83 ಲಕ್ಷ ಅರ್ಜಿಗಳನ್ನು ಪರಿಶೀಲಿಸಿ ಮಾರ್ಚ್ 31, 2023 ರ ಒಳಗೆ ಹಕ್ಕುಪತ್ರವನ್ನು ನೀಡಿವುದಾಗಿ ಸರ್ಕಾರವು ತಿಳಿಸಿತ್ತು. ಅದರಂತೆ ಪ್ರಸಕ್ತ ಕಂದಾಯ ಸಚಿವರು ಈ ವಿಷಯವನ್ನು ಕೈಗೆತ್ತಿಕೊಂಡು ಅರ್ಹರಿಗೆ ಹಕ್ಕುಪತ್ರ ನೀಡುವ ಮಹತ್ವದ ಕೆಲಸವನ್ನು ಕೈಗೆತ್ತಿಕೊಂಡಿರುವುದು ಸ್ವಾಗತಾರ್ಹವಾದ ವಿಷಯವಾಗಿದೆ. ಆದರೆ, ಮೇ 30, 2022 ರ ವರೆಗೆ ಸರ್ಕಾರಕ್ಕೆ ಬಂದಿರುವುದು 12 ಲಕ್ಷ ಅರ್ಜಿಗಳನ್ನು ಒಳಗೊಂಡಂತೆ ಈಗ ರಾಜ್ಯದಾದ್ಯಂತ 25 ಲಕ್ಷಕ್ಕೂ ಹೆಚ್ಚು ಬಗಹುಕುಂ ಸಾಗುವಳಿದಾರರ ಅಕ್ರಮ ಜಮೀನನ್ನು ಸಕ್ರಮಗೊಳಿಸುವದಕ್ಕಾಗಿ ರಾಜ್ಯ ಸರ್ಕಾರವು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಪರಿಸ್ಥಿತಿಯು ಹೀಗಿರುವಾಗ ಅರಣ್ಯ ಇಲಾಖೆಯು ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸುವವರೆಗೆ ಕಾಯದೆ ಈ ಸಾಗುವಳಿದಾರರ ಮೇಲೆ ದಾಳಿ ಮಾಡುತ್ತಿದೆ. ರೈತರ ಜಮೀನಿಗೆ ಏಕಾಏಕಿ ಬೇಲಿ ಹಾಕಿಕೊಂಡು ತಮ್ಮದೆಂದು ಘೋಷಿಸುತ್ತಿದೆ. ಸಾಗುವಳಿದಾರರ ಮೇಲೆ ಕೆಲವೆಡೆ ದೈಹಿಕವಾಗಿಯೂ ದಾಳಿ ನಡೆದಿದೆ. ಇಲ್ಲಿ ಸರ್ಕಾರವು ಅರಣ್ಯ ಭೂಮಿ ಮತ್ತು ಕಂದಾಯ ಭೂಮಿಗಳನ್ನು ಜಂಟಿಯಾಗಿ ಸರ್ವೇ ಮಾಡಿ ವಿಂಗಡಣೆ ಮಾಡಿಲ್ಲ. ಹಕ್ಕುಪತ್ರವನ್ನೂ ನೀಡಿಲ್ಲ. ಅಲ್ಲದೇ ಅರಣ್ಯ ಪ್ರದೇಶದ ಆಸುಪಾಸಿನಲ್ಲಿ ಬದುಕುತ್ತಿರುವ ಬುಡಕಟ್ಟು ಜನಾಂಗ ಮತ್ತು ಆದಿವಾಸಿಗಳಿಗೆ ಅವರ ಜಮೀನನ್ನು ಕಿತ್ತುಕೊಳ್ಳುವುದಷ್ಟೇ ಅಲ್ಲ, ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಲಾಗುತ್ತದೆ. ಕಾಡಂಚಿನ ಬದುಕನ್ನು ಬಿಟ್ಟರೆ ಅವರಿಗೆ ಬೇರೆ ಯಾವುದೇ ಆದಾಯದ ಮೂಲವಿಲ್ಲದ, ಬೇರೆ ಕಸುಬು ತಿಳಿಯದ ಈ ಜನರು ಸರ್ಕಾರದ ಈ ಕ್ರಮದಿಂದಾಗಿ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಲ್ಪಡುತ್ತಾರೆ ಎಂದು ತಿಳಿಸಿದರು.
ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗರ್ ಹುಕುಂ ಸಾಗುವಳಿಯನ್ನು ಮಾಡುತ್ತಿರುವ ರಾಜ್ಯದ ಬಡ ರೈತರು ರಾಜ್ಯದಾದ್ಯಂತ ಬಲಿಷ್ಠವಾದ ರೈತ ಆಂದೋಲನವನ್ನು ಕಟ್ಟಿ ರಾಜ್ಯ ಸರ್ಕಾರವನ್ನು ಈ ಸಮಸ್ಯೆಗಳನ್ನು ಸೂಕ್ತವಾಗಿ ಹಾಗೂ ಸಮರ್ಪಕವಾಗಿ ಪರಿಹರಿಸುವಂತೆ ಒತ್ತಾಯಿಸಿದಾಗ ಮಾತ್ರವೇ ಈ ರೈತರು ತಮ್ಮ ಹಕ್ಕನ್ನು ಪಡೆದುಕೊಳ್ಳಲು ಸಾಧ್ಯ. ಆದ್ದರಿಂದ ನಮ್ಮ ಸಂಘಟನೆ AIKKMS ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಸಾವಿರಾರು ರೈತರನ್ನು ಸಜ್ಜುಗೊಳಿಸಿ ರಾಜ್ಯದಲ್ಲಿ ಪ್ರಬಲ ರೈತ ಆಂದೋಲನವನ್ನು ಕಟ್ಟುವ ನಿಟ್ಟಿನಲ್ಲಿ ವೇದಿಕೆಯನ್ನು ಸಜ್ಜುಗೊಳಿಸುತ್ತಿದೆ ಎಂದರು .
ರಾಜ್ಯ ಸರ್ಕಾರವು ಬೆಳಗಾವಿಯಲ್ಲಿ ಡಿಸೆಂಬರ್ 9 ರಿಂದ 19 ರವರೆಗೆ ನಡೆಸುತ್ತಿರುವ ಚಳಿಗಾಲದ ಅಧಿವೇಶನದ ಈ ಸಂದರ್ಭದಲ್ಲಿ ಡಿಸೆಂಬರ್ 16, ರಂದು ರಾಜ್ಯ ಮಟ್ಟದ ‘ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರ ಬೆಳಗಾವಿ ಚಲೋ’ ಚಳುವಳಿಯನ್ನು AIKKMS ಕರ್ನಾಟಕ ರಾಜ್ಯ ಸಮಿತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ರಾಜ್ಯದ ರೈತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕೆಂದು, ಹಾಗೂ ಸರ್ಕಾರವು ಈಗಾಗಲೇ ಮಾಡಿರುವ ಹಲವಾರು ನಿಯಮಗಳನ್ನು ಸರಳೀಕರಣಗೊಳಿಸಿ ರೈತರು ಭೂಮಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಈ ಸಂದರ್ಭದಲ್ಲಿ ಮಾನ್ಯ ಅರಣ್ಯ ಸಚಿವರೂ ಮತ್ತು ಕಂದಾಯ ಸಚಿವರೂ ಈ ವಿಷಯದ ಕುರಿತು ಸಮಗ್ರ ಚರ್ಚೆ ನಡೆಸಿ ಈ ಮೂಲಕ ದಶಕಗಳಿಂದಲೂ ಬಗೆಹರಿಯದ ರೈತರ ಈ ಸಮಸ್ಯೆಯನ್ನು ಪರಿಹಾರವಾಗುವಂತೆ ರಾಜ್ಯ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲು ರಾಜ್ಯದ ಎಲ್ಲಾ ಭಾಗಗಳಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು “ಆಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಎಮ್ ಎಸ್) ಸಂಘಟನೆ”ಯು ರಾಜ್ಯದ ರೈತರಿಗೆ ಕರೆ ನೀಡುತ್ತದೆ ಎಂದರು.
ನಮ್ಮ ಹಕ್ಕೊತ್ತಾಯಗಳು ಬಗರ್ ಹುಕುಂ ಸಾಗುವ ಮಾಡುತ್ತಿರುವ ಎಲ್ಲಾ ರೈತರಿಗೂ ಕೂಡಲೇ ಹಕ್ಕುಪತ್ರ ವಿತರಿಸಿ.
ಹಲವಾರು ಕಾರಣಗಳಿಂದ 50, 53 ಮತ್ತು 57 ಅರ್ಜಿಯನ್ನೂ ಹಾಕದ ರಾಜ್ಯದ ಸಾವಿರಾರು ರೈತರಿಗೂ ಪ್ರಸಕ್ತವಾಗಿ ಅರ್ಜಿ ಹಾಕಲು ಅವಕಾಶವನ್ನೂ, ಸಮರ್ಪಕ ಸಮಯವನ್ನೂ ಮಾಡಿಕೊಟ್ಟು ಆ ರೈತರಿಗೂ ಹಕ್ಕುಪತ್ರವನ್ನು ಒದಗಿಸಿ, ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಹೊಸದಾಗಿ ಜಾರಿಗೆ ತಂದಿರುವ ಆಪ್ ನ್ನು ಕೂಡಲೇ ಹಿಂಪಡೆದು ಗ್ರಾಮಮಟ್ಟದ ಸರ್ವೆಗಳನ್ನು ನಡೆಸಿ ಸಾಗುವಆ ಮಾಡಿರುವ ರೈತರಿಗೆ ಸಂಪೂರ್ಣ ನ್ಯಾಯ ಸಿಗುವ ಹಾಗೆ ನೋಡಿಕೊಳ್ಳಿ.
ರಾಜ್ಯದಲ್ಲಿ ಹಲವಾರು ತಾಲೂಕುಗಳಲ್ಲಿ ತಹಸೀಲ್ದಾರರ ನಿರ್ದೇಶನದಂತೆ ಕಂದಾಯ ಭೂಮಿಯಿಂದ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಈ ಆದೇಶವನ್ನು ಹಿಂಪಡೆದು ಭೂಮಿಯನ್ನು ಮತ್ತೆ ಕಂದಾಯ ಇಲಾಖೆಗೆ ಪಡೆದುಕೊಂಡು ಎಲ್ಲಾ ಅರ್ಹ ರೈತರಿಗೂ ಹಕ್ಕುಪತ್ರವನ್ನು ವಿತರಿಸಿ, ಹಾಗೂ ಈ ಆದೇಶ ಬರುವವರೆಗೂ ಅರಣ್ಯ ಇಲಾಖೆಯವರೂ ರೈತರಿಗೆ ಸಾಗುವ ಮಾಡಲು ಅವಕಾಶ ನೀಡುವಂತೆ ಕ್ರಮ ಕೈಗೊಳ್ಳಿ.
1956 69 ಅವಧಿಯಲ್ಲಿನ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿತ್ತು. 1968 ರ ನಂತರ ಈ ಭೂಮಿ ಅರಣ್ಯ ಇಲಾಖೆಯ ಅಧೀನದಲ್ಲದೆ, ಕೂಡಲೇ ಈ ಭೂಮಿಯನ್ನು ಸರ್ಕಾರ ಹಿಂಪಡೆದು ಕಂದಾಯ ಭೂಮಿ ಎಂದು ಘೋಷಿಸಬೇಕು. ಮತ್ತು ಈ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಮೇಲೆ ಅರಣ್ಯ ಇಲಾಖೆಯ ಆಕ್ರಮಣವನ್ನು ನಿಲ್ಲಿಸಲು ಆದೇಶಿಸಿ, ಅದೇ ಸಮಯದಲ್ಲಿ ರೈತರಿಗೆ ಹಕ್ಕು ಪತ್ರ ನೀಡಬೇಕು.
ತಕ್ಷಣ ಎಲ್ಲಾ ತಾಲೂಕಿನ ತಹಸಿಲ್ದಾರ್ ಹಾಗೂ ಜನ ಪ್ರತಿನಿಧಿಗಳೊಂದಿಗೆ ಸಭೆ ಕರೆದು ಬಗರ್ ಹುಕುಂ ರೈತರಿಗೆ ಹಕ್ಕುಪತ್ರ ಕೊಡಲು ಸವಿಸ್ತಾರವಾಗಿ ಚರ್ಚಿಸಬೇಕು. ಆ ಸಭೆಗೆ ಎಲ್ಲಾ ರೈತ ಸಂಘಟನೆಗಳು ಮತ್ತು ಎಲ್ಲಾ ಹಳ್ಳಿಗಳಿಂದ ಬಗರ್ ಹುಕುಂ ರೈತರ ಪ್ರತಿನಿಧಿಗಳನ್ನು ಕರೆಯಬೇಕು.
ಈ ಕೂಡಲೇ ರಾಜ್ಯದ ಎಲ್ಲಾ ತಾಲೂಕಗಳಲ್ಲಿ ಭೂ ಮಂಜೂರಾತಿ ಸಮಿತಿ (LGC) ಯನ್ನು ರಚನೆ ಮಾಡಿ,
ಈಗಾಗಲೇ ಅಲೆಗಳಲ್ಲಿ ಇಲ್ಲಿಯವರೆಗೆ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ರೈತರಿಗೆ ಕೂಡಲೇ ಹಕ್ಕುಪತ್ರ ಕೊಡಬೇಕು. ಈಗಾಗಲೇ ಅರಣ್ಯ ಅಂಚಿನಲ್ಲಿ ಸಾಗುವ ಮಾಡುತ್ತಿರುವುದು ಸಿ ಮತ್ತು ಡಿ ಗುಂಪಿಗೆ ಸೇರಿರುವ ಭೂಮಿ, ಹಾಗಾಗಿ ಅದನ್ನು ಕಂದಾಯ ಭೂಮಿಗೆ ಪಲರ್ವತಿಸಿ ಎಲ್ಲಾ ರೈತಲಿಗೂ ಭೂಮಿ ಹಂಚಿಕೆ ಮಾಡಿ.
ಅರಣ್ಯ ಭೂಮಿಯಲ್ಲಿ ಉಮೆ ಮಾಡುತ್ತಿರುವ ರೈತರ ಮೇಲೆ ಅರಣ್ಯ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ನಿಲ್ಲಿಸಿ, ಮತ್ತು ರೈತರ ಮೇಲೆ ಹಾಕಿರುವ ಎಲ್ಲಾ ಕೇಸ್ಗಳನ್ನು ರದ್ದು ಮಾಡಬೇಕು.
ಒಂದು ಕಡೆ 50, 53, 57 ಫಾರ್ಮ್ನಲ್ಲಿ ರೈತರಿಗೆ ಅರ್ಜಿಗಳನ್ನು ಹಾಕಲು ಹೇಳಿ ಇನ್ನೊಂದು ಕಡೆ ರೈತರಿಗೆ ಕಿರುಕುಳ ನೀಡಿ ನೋಟನ್ ಕೊಡುವ ಇಬ್ಬಗೆಯ ನೀತಿಯನ್ನು ಕೈಬಿಡಿ ಎಲ್ಲ ರೈತರಿಗೂ ಈ ಕೂಡಲೇ ಭೂಮಿ ಹಂಚಿಕೆ ಮಾಡಿ ಹಕ್ಕು ಪತ್ರ ನೀಡಬೇಕು.
ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ಎಲ್ಲಾ ಬಗರ್ ಹುಕುಂ ರೈತರಿಗೆ ಬ್ಯಾಂಕುಗಳಲ್ಲಿ ಸಾಲ ಹಾಗೂ ಈಗಾಗಲೇ ರೈತರಿಗೆ ಕೊಡುತ್ತಿರುವ ಪಿಂಚಣಿ ಸೇರಿದಂತೆ ಇತರೆ ಸೌಲಭ್ಯ ದೊರಕಿಸಲು ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಹಕ್ಕು ಪತ್ರ ಕೊಟ್ಟರುವ ಭೂಮಿಗಾಗೆ ತಕ್ಷಣ ಜೋಡಿ (ದುರಸ್ತಿ ಮತ್ತು ಹದ್ದುಬಸ್ತು) ಮಾಡಿಸಿಕೊಡಬೇಕು. ಭೂಮಿ ಇರುವ ಸ್ಥಳದಲ್ಲಿ ನಕಾಶೆ ಬೇರೆ ಮತ್ತು ಸರ್ವೇ ನಂಬರ್ ಬೇರೆ ಕಡೆ ಬರುತ್ತಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ಸರ್ಕಾರಿ ಭೂಮಿಯಲ್ಲಿ ಸಾಗುವ ಮಾಡುತ್ತಿರುವ ರೈತರ ಭೂಮಿಯನ್ನು ಮಠ ಮಂದಿರ ಹಾಗೂ ಯಾವುದೇ ಇನ್ನಿತರ ಕಾರಣಗಳಿಗೆ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು.
ಹಕ್ಕುಪತ್ರ ಕೊಡುವ ವಿಷಯದಲ್ಲಿ ರೈತರನ್ನು ಮೋಸ ಮಾಡಿ ನಂಚಿಸಿ ಹಣ ಲೂಟಿ ಮಾಡುವ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ, ರೈತರಿಗೆ ಇಂತಹ ಲೂಟಿ ಮತ್ತು ಮೊಸಗಳಿಂದ ರಕ್ಷಣಿ ನೀಡಬೇಕು.
ಈಗಾಗಲೇ ಸಾಗುವಆದಾರರಿಗೆ ಹಕ್ಕುಪತ್ರ ಕೊಡಲು ಕಂದಾಯ ಸಚಿವರು ನಿಗಧಿಪಡಿಸಿದ ಸಮಯವನ್ನು ವಿಸ್ತರಿಸಿ.ಎಂಬ ನಮ್ಮ ಬೇಡಿಕೆಗಳಾಗಿವೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಎಐಕೆಕೆಎಮ್ಎಸ್ ದೀಪಾ ಧಾರವಾಡ, ಜಿಲ್ಲಾ ಉಪಾಧ್ಯಕ್ಷರಾದ ಹನುಮೇಶ ಹುಡೇದ, ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ , ಗೌರಮ್ಮ ಪರಸಪ್ಪನವರ, ಪಾರವ್ವ ಪರಮ್ಮಪ್ಪನವರ ಇದ್ದರು.