ಬೆಂಗಳೂರು : ಕಳೆದ ಹಲವು ತಿಂಗಳಿಂದ ವಯೋಸಹಸ ಕಾಯಿಲೆಯಿಂದ ಬಳಲುತ್ತಿದ್ದ 93 ವರ್ಷದ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ (93) (ಸೋಮನಹಳ್ಳಿ ಮಲ್ಲಯ್ಯ ಕೃಷ್ಣ) ವಿಧಿವಶರಾದರು.
ಅವರು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ಮನೆಯಲ್ಲೇ ಕೊನೆಯುಸಿರು ಎಳೆದಿದ್ದು, ಹಲವು ದಶಕಗಳ ಕಾಲ ಸುದೀರ್ಘವಾಗಿ ರಾಜಕೀಯ ಜೀವನದಲ್ಲಿದ್ದ ಎಸ್.ಎಂ. ಕೃಷ್ಣ 1999 ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಾಂಚಜನ್ಯ ಯಾತ್ರೆ ಮಾಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಆನಂತರ 2004ರಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾಗಿ ನಿಯುಕ್ತಿಗೊಂಡಿದ್ದರು.
ನಂತರದ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರಿ, ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದರು. ತಮ್ಮ ಅಧಿಕಾರದ ಅವಧಿಯಲ್ಲಿ ಬೆಂಗಳೂರಿಗೆ ಜಾಗತಿಕ ಮನ್ನಣೆ ತಂದಿದ್ದ ಕೃಷ್ಣಅವರು ಬೆಂಗಳೂರು ಸಿಲಿಕಾನ್ ಸಿಟಿ ಆಗಿದ್ದನ್ನ ಇಲ್ಲಿ ಸ್ಮರಿಸಬಹುದು.
ಮಂಡ್ಯ ಜಿಲ್ಲೆಯ ಮದ್ದೂರಿನಿಂದ ಸತತವಾಗಿ ಹಲವು ಬಾರಿ ಶಾಸಕರಾಗಿ ರಾಜ್ಯದ ಗಮನ ಸೆಳೆದಿದ್ದ ಎಸ್.ಎಂ. ಕೃಷ್ಣ ನಿಧನದಿಂದ ಜಿಲ್ಲೆಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.